ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಇಂದು ಪಟ್ಟಣದ ಎಪಿಎಂಸಿ ಬಡಾವಣೆಯ ರೆಡ್ಡಿ ಬ್ಯಾಂಕ್ ನೂತನ ಕಟ್ಟಡ ಉದ್ಘಾಟನೆ ಹಾಗೂ ಪಟ್ಟಣದ ಬಿದರಕುಂದಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಉದ್ಯಾನವನ ಟ್ರೀ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಾಲೂಕು ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಗುರು ತಾರನಾಳ ಹಾಗೂ ರೆಡ್ಡಿ ಬ್ಯಾಂಕ್‌ನ ಮುದ್ದೇಬಿಹಾಳ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ರಾಯನಗೌಡ ತಾತರಡ್ಡಿ ಹೇಳಿದರು.ಪಟ್ಟಣದ ಎಪಿಎಂಸಿ ಬಡಾವಣೆಯ ರೆಡ್ಡಿ ಬ್ಯಾಂಕ್ ನೂತನ ಕಟ್ಟಡದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 60 ವರ್ಷ ಇತಿಹಾಸ ಹೊಂದಿರುವ ರೆಡ್ಡಿ ಬ್ಯಾಂಕ್ ಬಹಳ ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಸ್ವಂತ ಕಟ್ಟಡವಿರಲಿಲ್ಲ. ಇದೀಗ ಎಪಿಎಂಸಿ ಬಡಾವಣೆಯಲ್ಲಿ ಜಾಗ ಖರೀದಿಸಿ ನೂತನ ಕಟ್ಟಡ ಪ್ರಾರಂಭಿಸುವ ಮೂಲಕ ಎಲ್ಲ ಬ್ಯಾಂಕ್ ವ್ಯವಹಾರ ನಡೆಸಲು ತಿರ್ಮಾನಿಸಲಾಗಿದೆ. ಕಾನೂನು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಕಟ್ಟಡವನ್ನು ಲೋಕಾರ್ಪಣೆಗೊಳಿಸಿಲಿದ್ದಾರೆ ಎಂದರು.ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರ ಪರಿಶ್ರಮದಿಂದ ಮುದ್ದೇಬಿಹಾಳ ಪಟ್ಟಣದಲ್ಲಿ ಸುಸಜ್ಜಿತ ಹಾಗೂ ಉದ್ಯಾನವನ ನಿರ್ಮಿಸಬೇಕು ಎಂಬ ಉದ್ದೇಶದಿಂದ ಬಿದರಕುಂದಿ ವ್ಯಾಪ್ತಿಯಲ್ಲಿ ಸುಮಾರು 35 ಎಕರೆ ಸರ್ಕಾರಿ ಜಾಗೆಯಲ್ಲಿ ಸುಂದರವಾದ ಟ್ರೀಪಾರ್ಕ್ ನಿರ್ಮಾಣಗೊಳ್ಳುತ್ತಿದೆ. ಕಾಮಗಾರಿ ಬಹುತೇಕ ಸಂಪೂರ್ಣ ಮುಕ್ತಾಯಗೊಂಡಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿಲಿದ್ದಾರೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಈ ದಿಸೆಯಲ್ಲಿ ಪಟ್ಟಣದ ಎಲ್ಲ ವ್ಯಾಪಾರಸ್ಥರು, ಸಾಹಿತಿಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಮಹಿಳಾ ಮುಖಂಡರು ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಅರಣ್ಯ ಸಚಿವ ಈಶ್ವರ ಖಂಡ್ರೆ ಸೆ.1ರಂದು ಬೆಳಿಗ್ಗೆ 10.30ಕ್ಕೆ ಟ್ರೀ ಪಾರ್ಕ್ ಲೋಕಾರ್ಪಣೆಗೊಳಿಸಲಿದ್ದು, ಬಳಿಕ ರೆಡ್ಡಿ ಬ್ಯಾಂಕ್ ಉದ್ಘಾಟನೆ ನಡೆಯಲಿದೆ. ಬಳಿಕ ಕಾರ್ಯಕ್ರಮವನ್ನು ಆಲಮಟ್ಟಿ ರಸ್ತೆಯ ಮದರಿ ಕಲ್ಯಾಣ ಮಂಟಪದಲ್ಲಿ ನಡೆಸಲು ತಿರ್ಮಾನಿಸಲಾಗಿದೆ ಎಂದು ಹೇಳಿದರು.
ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಕರ್ನಾಟಕ ಕೋ ಆಪ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಸಂಗನಗೌಡ ಬಿರಾದಾರ, ಸುರೇಶಗೌಡ ಪಾಟೀಲ, ಗೋಪಿ ಮಡಿವಾಳರ, ರಾಜೇಂದ್ರಗೌಡ ರಾಯಗೊಂಡ, ಸಿದ್ದರಾಮರೆಡ್ಡಿ, ಲಿಂಗಾರೆಡ್ಡಿ ಮಂಗ್ಯಾಳ, ರುದ್ರುಗೌಡ ಪಾಟೀಲ, ಡಾ.ವಿರೇಶ ಇಟಗಿ ಸೇರಿದಂತೆ ಹಲವರು ಇದ್ದರು.