ಕನ್ನಡ ಪ್ರಭ ವಾರ್ತೆ ಮಳವಳ್ಳಿ
ವ್ಹೀಲಿಂಗ್ ಹಾಗೂ ಅಜಾಗರೂಕತೆಯಿಂದ ವಾಹನ ಚಲಾವಣೆ ಮಾಡುವ ಪುಂಡರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಎಚ್ಚರಿಕೆ ನೀಡಿದರು.ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳವಳ್ಳಿ ತಾಲೂಕಿನಾಧ್ಯಂತ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಹನ ಸವಾರರು ವೇಗವಾಗಿ ಚಾಲನೆ ನೀಡುವುದೇ ಅಪಘಾತಗಳಿಗೆ ಕಾರಣ. ವ್ಹೀಲಿಂಗ್ ಹಾಗೂ ವೇಗವಾಗಿ ಚಾಲನೆ ಮಾಡುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸುವುದರ ಜೊತೆಗೆ ಲೈಸೆನ್ಸ್ ರದ್ದು ಪಡಿಸಲಾಗುವುದು ಎಂದರು.
ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡು ಎಲ್ಲಾ ತಾಲೂಕಿನ ಸಮಸ್ಯೆಗಳು ಹಾಗೂ ನನ್ನಿಂದ ಬದಲಾವಣೆ ಏನು ಮಾಡಬಹುದು ಎನ್ನುವುದನ್ನು ತಿಳಿಯಲು ಜನಸಂಪರ್ಕ ಸಭೆ ಆಯೋಜನೆ ಮಾಡಲಾಗಿದೆ. ಅನುಭವ ಹೊಂದಿರುವ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಸಾರ್ವಜನಿಕರ ಸಮಸ್ಯೆ ಈಡೇರಿಸಲು ಶ್ರಮಿಸುತ್ತೇನೆ ಎಂದರು.ಪಟ್ಟಣದ ಅನಂತ್‌ರಾಂ ವೃತ್ತದಲ್ಲಿರುವ ಸಿಗ್ನಲ್ ಲೈಟ್ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಸರಿಪಡಿಸುವ ಪ್ರಯತ್ನ ಮಾಡಲಾಗುವುದು, ಜೊತೆಗೆ ಅಪರಾಧ ಪತ್ತೆ ಕಾರ್ಯಗಳಿಗೆ ಸಹಾಯವಾಗುವಂತೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆ, ಪುರಸಭೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಮುಂದಾಗುತ್ತೇವೆ ಎಂದರು.
ತಾಲೂಕಿನ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸುತ್ತಮುತ್ತಲ ಪರಿಸರವನ್ನು ಪರಿಶೀಲನೆ ನಡೆಸಲಾಗುವುದು, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಹುಡುಗಿಯರನ್ನು ಚುಡಾಯಿಸುವುದು, ವ್ಹೀಲಿಂಗ್ ಸೇರಿದಂತೆ ಅಪರಾಧಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೆಟ್ರೋಲಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.ಪೊಲೀಸ್ ಹಾಗೂ ಅಬಕಾರಿ ಇಲಾಖೆ ಜಂಟಿ ಕಾರ್ಯಚರಣೆ ನಡೆಸಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು, ಬೆಳಕವಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೊಲೀಸ್ ಇಲಾಖೆಗೆ ಸೇರಿದ ಆಸ್ತಿಯಲ್ಲಿ ಸಂಚಾರಿ ಪೊಲೀಸ್ ಠಾಣೆ ನಿರ್ಮಾಣ ಮಾಡುವ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದರು.
ರೌಡಿ ಶೀಟರ್‌ಗಳು ಕಳೆದ 15-20 ವರ್ಷಗಳಿಂದ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೇ ನೆಮ್ಮದಿ ಜೀವನ ನಡೆಸುತ್ತಿರುವವರು ರೌಡಿಶೀಟರ್ ತೆಗೆದುಹಾಕುವಂತೆ ಮನವಿ ನೀಡಿದರೇ ಪರಿಶೀಲನೆ ನಡೆಸಿ ಆಗತ್ಯ ಕ್ರಮ ವಹಿಸಲಾಗುವುದು, ಗಂಧದ ಮರ ಬೆಳೆಸುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೇ ಪೊಲೀಸ್ ಗಸ್ತು ನಡೆಸುವಂತೆ ಸೂಚನೆ ನೀಡಲಾಗುವುದು, ಗದ್ದೆ ಬಯಲಿಯಲ್ಲಿ ಮದ್ಯ ಸೇವನೆ ಮಾಡುವವರ ಬಗ್ಗೆ ಗಮನ ಹರಿಸಲಾಗುವುದು ಎಂದರು.ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದರ ಮೂಲಕ ಪೊಲೀಸ್ ಇಲಾಖೆ ಸಾರ್ವಜನಿಕರ ಜೊತೆಗೆ ಇದೆ ಎನ್ನುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಮುಂದಾಗುತ್ತೇವೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾವುದೇ ವಿಷಯ ಇದ್ದರೂ ಕೂಡ ದೂರವಾಣಿಯ ಮೂಲಕ ತಿಳಿಸಿದರೇ ತಕ್ಷಣದಲ್ಲಿಯೇ ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಬೇಕು, ಅಕ್ರಮ ಮದ್ಯ ಮಾರಾಟ ತಡೆಯಬೇಕು, ವ್ಹೀಲಿಂಗ್ ಹಾಗೂ ಸೌಂಡ್ ಮಾಡುತ್ತಾ ಬೈಕ್ ಹೊಡಿಸುವವರ ವಿರುದ್ಧ ಕ್ರಮ, ಕಳ್ಳತನ ತಡೆಯುವುದು, ಅಕ್ರಮ ಚಟುವಟಿಕೆ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕು, ಮರಳು, ಮಣ್ಣು, ಕಲ್ಲು ಮಾಫಿಯಾಗೆ ಕಡಿವಾಣ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಹಲವು ವಿಷಯಗಳನ್ನು ಸಾರ್ವಜನಿಕರು ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರು. ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.ಸಭೆಯಲ್ಲಿ ಅಪಾರ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ್‌ಸ್ವಾಮಿ, ಡಿವೈಎಸ್ಪಿ ಕೃಷ್ಣಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಮಹೇಶ್, ರವಿಕುಮಾರ್ ಇದ್ದರು.