ಧಾರವಾಡ:
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು ಅಂಗನವಾಡಿ, ಶಾಲೆ-ಕಾಲೇಜುಗಳ ಕೊಠಡಿ ಸೋರುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ತುರ್ತು ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದರು.ಮುಂಗಾರು ಪೂರ್ವ ಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ದುರ್ಬಲ ಸೇತುವೆ, ದುರ್ಬಲ ಕೆರೆ ಬಂಡ್‌ಗಳನ್ನು ಗುರುತಿಸಿ ಅಪಾಯವಿದ್ದಲ್ಲಿ ತಕ್ಷಣವೇ ವರದಿ ನೀಡುವಂತೆ ಲೋಕೋಪಯೋಗಿ, ಸಣ್ಣ ನೀರವಾರಿ, ಪಂಚಾಯತ್ ರಾಜ್ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು. ಮಳೆಗಾಲದಲ್ಲಿ ಪ್ರವಾಹದಿಂದ ಜನರಿಗೆ ಸಂಪರ್ಕದ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದರು. ಅಳ್ನಾವರದ ಹುಲಿಕೆರೆ ಈಗಾಗಲೇ ದುರಸ್ತಿಯಾಗಿದ್ದು, ನಿಗದಿ ಕೆರೆ ದುರಸ್ತಿಗೆ ಟೆಂಡರ್ ಕರೆಯಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ತಹಸೀಲ್ದಾರ್‌ರು ಹಾಗೂ ತಾಲೂಕು ಪಂಚಾಯಿತಿ ಇಒಗಳು ತಮ್ಮ ವ್ಯಾಪ್ತಿಯಲ್ಲಿಯ ಅಪಾಯಕಾರಿ ಹಳ್ಳ, ಕೊಳ್ಳ, ಕೆರೆಗಳ ಬಗ್ಗೆ ಗಮನಹರಿಸತಕ್ಕದ್ದು. ಮಕ್ಕಳು ಕೆರೆಯಲ್ಲಿ ಈಜಲು ಹೋಗದಂತೆ ಆಯಾ ಸ್ಥಳಗಳಲ್ಲಿ ಮುಂಜಾಗೃತಾ ಅಪಾಯದ ಸ್ಥಳವೆಂದು ಫಲಕ ಹಾಕಿಸಿ ಡಂಗೂರ ಹೊಡಿಸಬೇಕೆಂದು ತಿಳಿಸಿದರು. ವಿದ್ಯುತ್ ಕಂಬಗಳ ಬಗ್ಗೆ ಎಚ್ಚರ ಇರಲಿ:ಹೆಸ್ಕಾಂ ಅಧಿಕಾರಿಗಳು ಅಪಾಯಕಾರಿ ವಿದ್ಯುತ್ ಕಂಬ ಹಾಗೂ ತಂತಿಗಳ ಬಗ್ಗೆ ತಕ್ಷಣ ಗಮನಹರಿಸಿ ಮುಂಜಾಗೃತಾ ಕ್ರಮವಾಗಿ ದುರಸ್ತಿ ಮಾಡಬೇಕು. ವಿದ್ಯುತ್ ತಂತಿಗಳ ಮೇಲಿರುವ ಗಿಡ, ಮರಗಳ ಟೋಂಗೆಗಳನ್ನು ಕಟಾವು ಮಾಡುವಂತೆ ಸೂಚಿಸಿದರು. ನವಲಗುಂದ ತಾಲೂಕಿನ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳದಲ್ಲಿ ಪ್ರವಾಹದ ಬಗ್ಗೆ ಸ್ಥಳದ ತಹಸೀಲ್ದಾರ್ ಈಗಾಗಲೇ ಎಚ್ಚರಿಕೆ ವಹಿಸಿತಕ್ಕದ್ದು. 26 ಗ್ರಾಮಗಳ ವರದಿ ಸಿದ್ಧಪಡಿಸಿ ಕಾರ್ಯಪ್ರವರ್ತರಾಗುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಮಳೆಗಾಲದಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಸೇರಿ ಸಾಂಕ್ರಾಮಿಕ ರೋಗ ಹರಡದಂತೆ ಸಂಬಂಧಿಸಿದ ಅಧಿಕಾರಿಗಳು ಪ್ರತಿದಿನ ಜಲಮೂಲಗಳ ಗುಣಮಟ್ಟ ಪರೀಕ್ಷಿಸಿ ನೀರಿನ ಟ್ಯಾಂಕ್ ಕಡ್ಡಾಯವಾಗಿ ಸ್ವಚ್ಛಗೊಳಿಸತಕ್ಕದ್ದು. ನೀರಿನ ಕೆಮಿಕಲ್ ಹಾಗೂ ಜೈವಿಕ ಪರೀಕ್ಷೆ ನಡೆಸಬೇಕು. ಆರೋಗ್ಯ ಇನ್‌ಸ್ಪೆಕ್ಟರ್‌ಗಳು, ವಾಟರ್‌ಮ್ಯಾನ್ ಕಡ್ಡಾಯವಾಗಿ ಈ ಬಗ್ಗೆ ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಹಸೀಲ್ದಾರರು ಇದ್ದರು.