ಕನ್ನಡಪ್ರಭ ವಾರ್ತೆ ಕೊಡೇಕಲ್
ಸುರಪುರ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಾರುತಿ ಕೆ. ಅವರು ಶುಕ್ರವಾರ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಭೇಟಿ ನೀಡಿ, ಆಣೆಕಟ್ಟು ವಿಭಾಗದ ಅಧಿಕಾರಿಗಳೊಂದಿಗೆ ಪ್ರವಾಹದ ಕುರಿತಾಗಿ ಚರ್ಚಿಸಿದರು.ನಾರಾಯಣಪುರ ಬಸವಸಾಗರ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿರುವ ಹಿನ್ನೆಲೆ ಕೃಷ್ಣಾ ನದಿಗೆ ಪ್ರವಾಹ ಸ್ಥಿತಿ ಉಂಟಾಗಿರುವ ಕಾರಣ ಶುಕ್ರವಾರ ಸುರಪುರದ ನ್ಯಾಯಾಲಯದ ಪ್ರಧಾನ ಸೀವಿಲ್ ನ್ಯಾಯಾಧೀಶರು ಜಲಾಶಯಕ್ಕೆ ಭೇಟಿ ನೀಡಿದರು.
ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಒಳಹರಿವು ಮತ್ತು ಹೊರ ಹರಿವು ಕುರಿತಂತೆ ಮಾಹಿತಿ ಪಡೆದುಕೊಂಡ ಅವರು ಇನ್ನು ಎಷ್ಟು ದಿನಗಳ ಕಾಲ ಪ್ರವಾಹ ಸ್ಥಿತಿ ಮುಂದುವರೆಯಲಿದೆ ಎಂಬುದರ ಕುರಿತು ಕೇಳಿದ ಅವರು, ಕೃಷ್ಣಾ ನದಿಗೆ ಪ್ರವಾಹ ಸ್ಥಿತಿ ಉಂಟಾಗಿದ್ದು, ಪ್ರವಾಹದಿಂದ ಅಪಾಯಕ್ಕೊಳಗಾಗುವ ನದಿ ತೀರಗಳ ಜನರ ಕ್ಷೇಮದ ಕುರಿತಂತೆ ಸ್ಥಳದಲ್ಲಿಯೇ ಇದ್ದ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಔಪಚಾರಿಕ ಭೇಟಿಯಾಗಿದೆ. ನಮ್ಮಲ್ಲಿ ಮಳೆಯಾಗದೆ ಹೋದರೂ ಕೂಡ ಮಹಾರಾಷ್ಟ್ರ ಹಾಗೂ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಕ್ಕೆ ಮಹಾ ನೀರು ಹರಿದು ಬರುತ್ತಿದ್ದು, ಜಲಾಶಯ ಭರ್ತಿಯಾಗಿದೆ. ಕಳೆದ 15ದಿನಗಳಿಂದ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ನದಿ ಪ್ರವಾಹದಿಂದ ಕೂಡಿದೆ. ಆದರೆ, ಗುರುವಾರ ರಾತ್ರಿಯಿಂದ ಒಳಹರಿವು ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆಯಾದರೂ ಪ್ರವಾಹ ಸ್ಥಿತಿ ಮುಂದುವರೆದಿದೆ ಎಂದು ತಿಳಿಸಿದರು.
ನದಿ ತೀರದ ಗ್ರಾಮಗಳ ಜನರು ಪ್ರವಾಹ ಇಳಿಮುಖವಾಗುವರೆಗೆ ಜಾಗೃತ ವಹಿಸುವುದು ಅವಶ್ಯಕವಾಗಿದೆ. ಈಗಾಗಲೆ ಈ ಕುರಿತು ಜಿಲ್ಲಾಡಳಿತ ಮುಂಜಾಗೃತೆ ವಹಿಸಿದೆ ಎಂದರು.ಈ ವೇಳೆ ಸುರಪುರ ತಹಸೀಲ್ದಾರ್ ಕೆ.ವಿಜಯಕುಮಾರ, ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ಉಪತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಸಿಪಿಐ ಸಚಿನ್ ಚಲುವಾದಿ, ಆಣೆಕಟ್ಟು ವಿಭಾಗದ ಅಧಿಕಾರಿಗಳಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಅರಳಿ, ನಾಗೇಶ, ಸಹಾಯಕ ನಿರೀಕ್ಷಕ ಮಲ್ಲಿಕಾರ್ಜುನ, ಶರಣಗೌಡ, ಕಂದಾಯ ನಿರೀಕ್ಷಕ ಶಾಂತಗೌಡ, ಗ್ರಾಮ ಲೆಕ್ಕಾಧಿಕಾರಿ ಅಪ್ಪಣ್ಣ ಗುಡಿಮನಿ ಸೇರಿದಂತೆ ಇತರರಿದ್ದರು.