ಕನ್ನಡಪ್ರಭ ವಾರ್ತೆ ಮಂಗಳೂರು
ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಕಮಿಷನರ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಸಚಿವರು, ಅಧಿಕಾರಿಗಳು ಸ್ಥಳದಲ್ಲಿದ್ದು, ಮಳೆ ಹಾನಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿದರು. ರಸ್ತೆಬದಿ ಗುಡ್ಡ ಕುಸಿತವಾದ ಸ್ಥಳಗಳಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ರಸ್ತೆ ಸಂಪರ್ಕ ಕಡಿತವಾದ ಸ್ಥಳಗಳಲ್ಲಿ ಸಮಸ್ಯೆ ಬಗೆಹರಿಸಿ. ನೀರು ನುಗ್ಗಿರುವ ತಗ್ಗು ಪ್ರದೇಶಗಳಲ್ಲಿ ಕುಟುಂಬಗಳನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಸಚಿವರು ಸೂಚಿಸಿದರು. ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲ ತಹಸೀಲ್ದಾರರು ಹಾಗೂ ಅಧಿಕಾರಿಗಳು ಸ್ಥಳದಲ್ಲಿದ್ದು ಕಾರ್ಯ ನಿರ್ವಹಿಸಬೇಕು. ಅಪಾಯದ ಅಂಚಿನಲ್ಲಿರುವ ಮನೆಗಳ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಕೂಡಲೆ ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳಿ. ರಕ್ಷಣಾ ಸಾಮಗ್ರಿಗಳನ್ನು ಸನ್ನದ್ಧವಾಗಿರಿಸಿಕೊಂಡು ಯಾವುದೇ ಸಾವು ನೋವು ಸಂಭವಿಸದಂತೆ ಎಚ್ಚರಿಕೆ ವಹಿಸಿ. ಕಂಟ್ರೋಲ್ ರೂಂ ನಿರಂತರ ಕಾರ್ಯಾಚರಣೆಯಲ್ಲಿದ್ದು, ಮಳೆ ಹಾನಿ ಕುರಿತ ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ಪ್ರಾಕೃತಿಕ ವಿಕೋಪ ಕಾರ್ಯಾಚರಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕಟ್ಟುನಿಟ್ಟು ಸೂಚನೆ ನೀಡಿದ್ದಾರೆ.