ಕನ್ನಡಪ್ರಭ ವಾರ್ತೆ ಭದ್ರಾವತಿ
ಕನ್ನಡ ನಾಡಿನಲ್ಲಿ ಹುಟ್ಟಿದ ನಾವೆಲ್ಲರು ಈ ನಾಡಿನ ಭಾಷೆ, ಸಂಸ್ಕೃತಿ, ಪರಂಪರೆ ಉಳಿಸಲು ಕಟಿಬದ್ಧರಾಗಬೇಕಿದೆ ಎಂದು ತಹಸೀಲ್ದಾರ್ ಕೆ.ಆರ್.ನಾಗರಾಜು ಹೇಳಿದರು.ಹಳೇನಗರದ ಕನಕ ಮಂಟಪ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಾಧು-ಸಂತರು, ದಾಸರು ಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡಿಗೆ ಧೀಮಂತ ಶಕ್ತಿ ಇದೆ. ಭವ್ಯ ಪರಂಪರೆ ಹೊಂದಿರುವ ಕನ್ನಡ ನಾಡಿನಲ್ಲಿ ಜನಿಸಿರುವುದು ನಮ್ಮ ಪುಣ್ಯ. ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಅನ್ಯಭಾಷಿಕರಿಗೆ, ಯುವ ಪೀಳಿಗೆಗೆ ತಿಳಿಸಬೇಕಾದ ಹೆಚ್ಚಿನ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ಕನ್ನಡ ಭಾಷೆಯನ್ನು ನಮ್ಮ ತಾಯಿ ಎಂದು ತಿಳಿದು ಗೌರವಿಸಿ ಬೆಳಸಬೇಕು. ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಎಂದರು.
ಕನ್ನಡದ ಮೇಲಿನ ಗೌರವ ಕೇವಲ ಬಾಯಿಯಿಂದ ಬಂದರೆ ಸಾಲದು ಅದು ಅಂತರಾಳದಿಂದ ಬರಬೇಕು. ತಾಯಿ ಕನ್ನಡಾಂಬೆಗೆ ಗೌರವಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳಲ್ಲಿಯೂ ಕನ್ನಡ ಭಾಷೆ ಕಡ್ಡಾಯಗೊಳಿಸಿದೆ. ಕನ್ನಡ ಭಾಷೆಯನ್ನು ನಾವು ಹೆಚ್ಚು ಮಾತನಾಡುವ ಮೂಲಕ ಅನ್ಯಭಾಷಿಗರಿಗೂ ಕಲಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.ವಿವಿಧ ಶಾಲಾ ಮಕ್ಕಳು ಕನ್ನಡ ನಾಡಿಗಾಗಿ ಶ್ರಮಿಸಿದ ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಕನಕದಾಸ, ನೇಗಿಲು ಹೊತ್ತ ರೈತ ಸೇರಿದಂತೆ ಹಲವು ಗಣ್ಯರ ವೇಷ ಭೂಷಣಗಳು ಧರಿಸಿದ್ದು ಕಾರ್ಯಕ್ರಮಕ್ಕೆ ಮೆರಗು ತಂದಿತು. ಬಾಲಕ-ಬಾಲಕಿಯರು ಕನ್ನಡದ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ತಾಪಂ ಇಒ ಗಂಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಸಿದ್ದಬಸಪ್ಪ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಬಿ.ಕೆ.ಮೋಹನ್, ಚನ್ನಪ್ಪ, ಅನುಸುಧಾ ಮೋಹನ್, ಗೀತಾ ರಾಜ್‌ಕುಮಾರ್, ಬಸವರಾಜ್ ಬಿ.ಆನೆಕೊಪ್ಪ, ಶಶಿಕಲಾ ನಾರಾಯಣಪ್ಪ, ಜಾರ್ಜ್, ರಿಯಾಜ್ ಅಹಮದ್, ಬಿ.ಎಸ್.ಗೋಪಾಲ್, ಪೊಲೀಸ್ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ಟಿ.ಪೃಥ್ವಿರಾಜ್, ಶ್ರೀಧರ ಗೌಡ, ಉಮಾ, ಅಪೇಕ್ಷ ಮಂಜುನಾಥ್, ಶಿವಲಿಂಗೇಗೌಡ ಸೇರಿ ಇತರರು ಇದ್ದರು.