ಮಳೆಗಾಲದಲ್ಲಿ ಸಂಭವಿಸುವ ವಿಪತ್ತು ನಿರ್ವಹಣೆಗಾಗಿ ಸದಾ ಸನ್ನದ್ಧರಾಗಿರುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಳೆಗಾಲದಲ್ಲಿ ಸಂಭವಿಸುವ ವಿಪತ್ತು ನಿರ್ವಹಣೆಗಾಗಿ ಸದಾ ಸನ್ನದ್ಧರಾಗಿರುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಜಯನಗರ ಶಾಲಿನಿ ಮೈದಾನದಲ್ಲಿ ವಿಪತ್ತು ನಿರ್ವಹಣೆಗಾಗಿ ರಚಿಸಿರುವ ವಿಶೇಷ ತಂಡಗಳ ಪರೇಡ್ ವೀಕ್ಷಿಸಿ ಮಾತನಾಡಿದ ಅವರು, ವಿಪತ್ತು ನಿರ್ವಹಣೆ ತಂಡಗಳು ಸಮನ್ವಯದಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದರು.
ಆಯಾ ನಗರ ಪಾಲಿಕೆಗಳಲ್ಲಿರುವ ಶಾಶ್ವತ ನಿಯಂತ್ರಣ ಕೊಠಡಿಗಳು ಹಾಗೂ ಉಪ ವಿಭಾಗವಾರು ಸ್ಥಾಪಿಸುವ ತಾತ್ಕಾಲಿಕ ನಿಯಂತ್ರಣ ಕೊಠಡಿಗಳು ನಾಗರಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವ ಎಎಂಸಿ ತಂಡ, ವಿಪತ್ತು ನಿರ್ವಹಣೆ ತಂಡ, ಮರ ಕಟಾವು ತಂಡ, ಸಿಲ್ಟ್ ಅಂಡ್ ಟ್ರ್ಯಾಕ್ಟರ್ ತಂಡ, ಪ್ರಹರಿ ವಾಹನಗಳು, ಯಂತ್ರೋಪಕರಣಗಳು, ಸಿಬ್ಬಂದಿ, ಗ್ಯಾಂಗ್‌ಮನ್‌ಗಳು ಸೇರಿ ಮುನ್ನೆಚ್ಚರಿಕಾ ಕಾರ್ಯಗಳಿಗೆ ಬಳಸುವ ಸಂಪನ್ಮೂಲಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಆಯುಕ್ತರ ನಿರ್ದೇಶನ ನೀಡಿದರು.
ಮಳೆ ಅನಾಹುತ ಎದುರಿಸುವ ತಂಡ:
ಜೆಸಿಬಿ, ಹಿಟಾಚಿ, ಹೂಳು ವಿಲೇವಾರಿ ಮಾಡುವ ಕಾಂಪ್ಯಾಕ್ಟರ್/ಟಿಪ್ಪರ್‌ಗಳು, ಟ್ರ್ಯಾಕ್ಟರ್ ತಂಡಗಳು, ನೀರು ಹೊರಹಾಕುವ ವಿವಿಧ ಸಾಮರ್ಥ್ಯದ ಪಂಪ್‌ಗಳು, ಮರ ಹಾಗೂ ಕೊಂಬೆ ಕಟಾವು ಯಂತ್ರಗಳು, ಕಳೆ ಕತ್ತರಿಸುವ ಯಂತ್ರಗಳು, ಶ್ರೆಡ್ಡಿಂಗ್ ಯಂತ್ರ, ಕಸ ಗುಡಿಸುವ ಯಂತ್ರ, ಏಣಿ ಸೇರಿ ಅಗತ್ಯ ಸಾಮಗ್ರಿಗಳನ್ನು ಪ್ರದರ್ಶಿಸಲಾಯಿತು.
ಬನ್ನೇರುಘಟ್ಟ ರಸ್ತೆ ದುರಸ್ತಿಗೆ ಸೂಚನೆ
ಬನ್ನೇರುಘಟ್ಟ ರಸ್ತೆ ಐಐಎಂ-ಬಿ ಬಳಿ ಜಲಮಂಡಳಿಯಿಂದ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಮುಗಿದಿರುವ ಭಾಗಗಳಲ್ಲಿ ರಸ್ತೆ ಪುನರ್‌ನಿರ್ಮಾಣ ಕಾರ್ಯ ಸಮರ್ಪಕವಾಗಿ ಕೈಗೊಳ್ಳದ ಪರಿಣಾಮ ರಸ್ತೆಯ ಕೆಲವು ಭಾಗಗಳು ಕುಸಿದಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆದಿರುವ ಭಾಗಗಳಲ್ಲಿ ರಸ್ತೆ ಪುನರ್‌ನಿರ್ಮಾಣ ಕಾರ್ಯವನ್ನು 10 ದಿನಗಳೊಳಗೆ ಪೂರ್ಣಗೊಳಿಸಲು ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.