ಕನ್ನಡದ ಬಗ್ಗೆ ಅಭಿಮಾನ ಇರಲಿ: ಶಾಸಕ ಶಿವರಾಮ ಹೆಬ್ಬಾರ

KannadaprabhaNewsNetwork |  
Published : Jun 13, 2026, 02:30 AM IST
ಕನ್ನಡ ಭಾಷೆಯಲ್ಲಿ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಕನ್ನಡ ಭಾಷೆ, ನೆಲ, ಜಲ ನಮ್ಮ ಬದುಕಿನ ಅಂಗವಾಗಬೇಕು. ಮಾತೃಭಾಷೆಯ ಜೊತೆಗೆ ಬದುಕಿಗೆ ಬೇಕಾದ ಭಾಷೆಯ ಅರಿವು ಮಾಡಿಕೊಳ್ಳಬೇಕು.

ಕನ್ನಡ ಭಾಷೆಯಲ್ಲಿ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭಕನ್ನಡಪ್ರಭ ವಾರ್ತೆ ಯಲ್ಲಾಪುರ

ಕನ್ನಡ ಭಾಷೆ, ನೆಲ, ಜಲ ನಮ್ಮ ಬದುಕಿನ ಅಂಗವಾಗಬೇಕು. ಮಾತೃಭಾಷೆಯ ಜೊತೆಗೆ ಬದುಕಿಗೆ ಬೇಕಾದ ಭಾಷೆಯ ಅರಿವು ಮಾಡಿಕೊಳ್ಳಬೇಕು. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಅಗ್ರಗಣ್ಯ ಸ್ಥಾನದಲ್ಲಿದೆ. ಕನ್ನಡಿಗರಿಗೆ ಕನ್ನಡದ ಬಗ್ಗೆ ಅಭಿಮಾನ ಇಲ್ಲದಿದ್ದರೆ ಇನ್ನಾರಿಗೆ ಇರಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆ ಹಾಗೂ ತಾಲೂಕಾ ಘಟಕದ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಭಾಷೆಯನ್ನು ಪ್ರೀತಿಸುವ ಸ್ವಾಭಿಮಾನದ ಜೊತೆಗೆ ಇನ್ನೊಂದು ಭಾಷೆಯ ಬಗ್ಗೆ ಅಭಿಮಾನ, ಗೌರವ ಇರಬೇಕು. ತಾತ್ಸರವನ್ನು ಎಂದೂ ಮಾಡಬಾರದು ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ, ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸುವುದು ಸುಲಭವಲ್ಲ. ಮಕ್ಕಳ ಸಾಧನೆಗೆ ಶಿಕ್ಷಕರ ಮಾರ್ಗದರ್ಶನ ಮಹತ್ವದ್ದು. ಕನ್ನಡದ ಬಗ್ಗೆ ನಿಮ್ಮ ಕಳಕಳಿ, ಪ್ರೀತಿ ಸದಾ ಇರಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಜಿಲ್ಲೆಯಲ್ಲಿ ೯೫೦ ವಿದ್ಯಾರ್ಥಿಗಳನ್ನು ಗೌರವಿಸುತ್ತಿದ್ದು, ಯಲ್ಲಾಪುರ ತಾಲೂಕಿನಲ್ಲಿ ೨೯ ವಿದ್ಯಾರ್ಥಿಗಳನ್ನು ಪರಿಷತ್ತಿನ ವತಿಯಿಂದ ಗೌರವಿಸಲಾಗುತ್ತಿದೆ. ಕಸಾಪ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಯಾವುದೇ ಮಾಧ್ಯಮ ಇರಲಿ, ಕನ್ನಡದಲ್ಲಿ ನೂರಕ್ಕೆ ನೂರು ಬಂದವರನ್ನು ಪರಿಷತ್ತಿನ ಇತಿಮಿತಿಯಲ್ಲಿ ಗೌರವಿಸಲಾಗುತ್ತಿದೆ. ಈ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು ಯೋಚಿಸಬೇಕಾದ ಸಂಗತಿ. ಕನ್ನಡ ಮಾಧ್ಯಮದಲ್ಲಿ ಓದಿ ಉತ್ತಮ ಸಾಧನೆ ಮಾಡಿದಂತವರು ಸಾಕಷ್ಟು ಜನರಿದ್ದಾರೆ. ಕನ್ನಡಿಗರು ವಿದೇಶಿ ವ್ಯಾಮೋಹದಿಂದ ಹೊರಬರಬೇಕಾಗಿದೆ ಎಂದರು.

ನಾಟಕಕಾರ ಟಿ.ವಿ. ಕೋಮಾರ, ಪ್ರೌಢಶಾಲಾ ಸಹಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಅಜೇಯ ನಾಯಕ, ತಾಲೂಕಾ ಅಧ್ಯಕ್ಷ ವೆಂಕಟೇಶ ಪಾಲನಕರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ ಉಪಸ್ಥಿತರಿದ್ದರು.

ಇದೇ ಸಂದರ್ಭ ಎಸ್.ಎಸ್.ಎಲ್.ಸಿ.ಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕಾರಿಸಲಾಯಿತು.

ಕಸಾಪ ಕಾರ್ಯದರ್ಶಿ ಜಿ.ಎನ್. ಭಟ್ಟ ಸ್ವಾಗತಿಸಿದರು. ಕಸಾಪ ತಾಲೂಕಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಕನೇನಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ನೌಕರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ಶಿಕ್ಷಕಿ ಪವಿತ್ರಾ ಆಚಾರಿ ನಿರೂಪಿಸಿದರು. ಕಸಾಪ ಕೋಶಾಧ್ಯಕ್ಷ ಡಿ.ಎನ್. ಗಾಂವ್ಕರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಬೆಟ್ಟ ವರ್ತಕರ ಸಂಘ ವಿಶ್ವ ಪರಿಸರ ದಿನಾಚರಣೆ
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ಸುಧಾರಣೆ ಆಗ್ರಹ