ಕನಕಗಿರಿ ತಾಲೂಕಿನ ಗ್ರಾಮಗಳಲ್ಲಿ ಕರಡಿ ಭೀತಿ

KannadaprabhaNewsNetwork |  
Published : Jun 16, 2026, 02:30 AM IST
ಪೋಟೋಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮಕ್ಕೆ ನುಗ್ಗಲು ಬರುತ್ತಿರುವ ಕರಡಿ.   | Kannada Prabha

ಸಾರಾಂಶ

ಕನಕಗಿರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಹಗಲಿನಲ್ಲೇ ಕರಡಿಗಳು ಆಗಮಿಸುತ್ತಿವೆ. ಚಿಕ್ಕಮಾದಿನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಬಳಿ ಸೋಮವಾರ ಮೂರು ಕರಡಿಗಳನ್ನು ಗ್ರಾಮಸ್ಥರು ಓಡಿಸಿದ್ದಾರೆ.

ಎಂ. ಪ್ರಹ್ಲಾದ್

ಕನಕಗಿರಿ: ಗ್ರಾಮದೊಳಗೆ ನುಗ್ಗಲು ಬಂದಿದ್ದ ಮೂರು ಕರಡಿಗಳನ್ನು ಯುವ ರೈತರು ಜೋರಾದ ಧ್ವನಿ ಮಾಡಿ ಗುಡ್ಡಕ್ಕೆ ಓಡಿಸಿರುವ ಘಟನೆ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಬಳಿ ಸೋಮವಾರ ನಡೆದಿದೆ.

ಆಹಾರ ಅರಸಿ ಕರಡಿಗಳು ತೋಟ, ಹೊಲಗಳಿಗೆ ನುಗ್ಗುವುದು ಈಗ ಸಾಮಾನ್ಯ. ರೈತರು ಹಾಗೂ ಕುರಿಗಾಹಿಗಳ ಮೇಲೆ ದಾಳಿ ನಡೆಸಿರುವ ಹಲವು ಉದಾಹರಣೆಗಳಿವೆ. ಈಗ ತಾಲೂಕಿನ ರಾಮದುರ್ಗಾ ಅರಣ್ಯದಿಂದ ಚಿಕ್ಕಮಾದಿನಾಳ ಗ್ರಾಮದ ಕಡೆಗೆ ಬರುತ್ತಿದ್ದ ಕರಡಿಗಳನ್ನು ಯುವ ರೈತರು ಗುಂಪೊಂದು ಬೊಬ್ಬೆ ಹೊಡೆದು (ಜೋರಾದ ಧ್ವನಿಯ) ಮೂಲಕ ಓಡಿಸಿ, ಗುಡ್ಡ ಸೇರುವಂತೆ ಮಾಡಿದ್ದಾರೆ. ಈ ಗ್ರಾಮದಿಂದ ರಾಮದುರ್ಗಾಕ್ಕೆ ಹೋಗುವ ರಸ್ತೆಯಲ್ಲಿ ಶಾಲೆ ಇದೆ. ರಾಮದುರ್ಗಾ ಗ್ರಾಮದ ಮಕ್ಕಳು ನಾಲ್ಕು ಕಿ.ಮೀ. ನಡೆದುಕೊಂಡು ಚಿಕ್ಕಮಾದಿನಾಳ ಹೈಸ್ಕೂಲ್ ಸೇರಬೇಕು. ಶಾಲೆಗೆ ಬರಬೇಕಾದ ರಸ್ತೆ ಗುಡ್ಡದ ಪ್ರದೇಶ ಮತ್ತು ಗಿಡಮರಗಳಿಂದ ಆವರಿಸಿಕೊಂಡಿದೆ. ನಡೆದು ಶಾಲೆಗೆ ಬರುವ ಮಕ್ಕಳಿಗೆ ಕರಡಿ ದಾಳಿ ಆತಂತ ಹೆಚ್ಚಿದೆ. ಇತ್ತ ಬೆಳಗಿನ ಜಾವ ಹೊಲ, ತೋಟಗಳಿಗೆ ಬರುವ ರೈತರು ಭಯದ ನೆರಳಿನಲ್ಲಿ ಜೀವಿಸುತ್ತಿದ್ದಾರೆ.

ವಿಂಡ್ ಪವರ್‌ಗೆ ಬೆದರಿದ ವನ್ಯಜೀವಿಗಳು:

ವನ್ಯಜೀವಿ ಸಂರಕ್ಷಣೆಗೆ ಸರ್ಕಾರ ಅನೇಕ ಕಾರ್ಯಕ್ರಮಗಳ ಜತೆಗೆ ಕೋಟಿಗಟ್ಟಲೇ ಹಣ ವ್ಯಯ ಮಾಡುತ್ತಿದೆ. ಆದರೆ ಉಪಯೋಗವಾಗುತ್ತಿಲ್ಲ. ಕೊಪ್ಪಳ, ಕನಕಗಿರಿ ತಾಲೂಕಿನ ಅರಣ್ಯ ಪ್ರದೇಶದ ಪಕ್ಕದಲ್ಲಿಯೇ ವಿಂಡ್ ಪವರ್ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ವಿಂಡ್ ಪವರ್‌ ಫ್ಯಾನ್‌ಗಳ ವಿಪರೀತ ಶಬ್ದಕ್ಕೆ ವನ್ಯಜೀವಿಗಳು ಬೆದರಿ ಅರಣ್ಯ ಪ್ರದೇಶದಿಂದ ಗ್ರಾಮಗಳತ್ತ ಮುಖ ಮಾಡುತ್ತಿವೆ.

ಕೊಪ್ಪಳ ತಾಲೂಕಿನ ಚಿಕ್ಕ ಸೂಳೆಕೇರಿ, ಗಂಗನಾಳ, ಉಪಲಾಪುರ ಗುಡ್ಡಗಾಡು ಪ್ರದೇಶದ ಸುತ್ತಮುತ್ತ ಪವನ ಶಕ್ತಿ ಉತ್ಪಾದನೆಗೆ ಮಿನಿ ಘಟಕಗಳಿವೆ. ಅವು ಕಾರ್ಯ ಆರಂಭವಾದಾಗ ಶಬ್ದ ಹೆಚ್ಚಾಗುತ್ತದೆ. ಇದರಿಂದ ಕರಡಿಗಳು ಹೆಚ್ಚಿನ ಪ್ರಮಾಣದಲ್ಲಿ ಕನಕಗಿರಿ ತಾಲೂಕಿನ ರಾಮದುರ್ಗಾ, ಚಿಕ್ಕಮಾದಿನಾಳ ಗುಡ್ಡಕ್ಕೆ ಹೋಗಿವೆ ಎನ್ನಲಾಗಿದೆ. ಬೆಳಗ್ಗೆ ಏಳೆಂಟು ಗಂಟೆಯಾದರೂ ಗ್ರಾಮದೊಳಗೆ ನುಗ್ಗಲು ಬರುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕರಡಿ, ಚಿರತೆಗಳ ಹಾವಳಿಗೆ ಶಾಲಾ ಮಕ್ಕಳು ಸಹ ಬೆಚ್ಚಿ ಬಿದ್ದಿದ್ದಾರೆ.

ಗ್ರಾಮಸ್ಥರಿಗೆ ಭಯ: ಕೊಪ್ಪಳ ತಾಲೂಕಿನ ಕೆಲವು ಗ್ರಾಮಗಳ ಅರಣ್ಯ ಪ್ರದೇಶದ ಬಳಿ ಗಾಳಿ ವಿದ್ಯುತ್ ಉತ್ಪಾದನೆಗೆ ಮುಂದಾಗಿದ್ದು, ಈ ಯಂತ್ರಗಳ ಶಬ್ದಕ್ಕೆ ಕರಡಿ, ಚಿರತೆಗಳು ಬೆದರಿ ಕನಕಗಿರಿ ತಾಲೂಕಿನ ರಾಮದುರ್ಗಾ, ಚಿಕ್ಕಮಾದಿನಾಳ, ದೇವಲಾಪುರ ಗುಡ್ಡಕ್ಕೆ ಸ್ಥಳಾಂತರಗೊಂಡಿವೆ. ಗುಡ್ಡದಿಂದ ನೇರವಾಗಿ ಗ್ರಾಮಗಳತ್ತ ಕರಡಿಗಳು ಆಹಾರ ಅರಸಿ ಬರುತ್ತಿದ್ದು, ಗ್ರಾಮಸ್ಥರು ಭಯದಲ್ಲಿದ್ದಾರೆ. ಶಾಲೆಗೆ ನಡೆದು ಬರುವ ಮಕ್ಕಳು ಅಂಜಿಕೆಯಲ್ಲಿದ್ದಾರೆ ಎಂದು ಚಿಕ್ಕಮಾದಿನಾಳ ಗ್ರಾಮಸ್ಥ ಗುರುಶಾಂತಪ್ಪ ಹೇಳಿದರು.

ಕರಡಿ ಹಿಡಿಯಲಾಗುವುದು: ಕೊಪ್ಪಳ ತಾಲೂಕಿನ ಕೆಲವು ಗ್ರಾಮಗಳ ಅರಣ್ಯ ಪ್ರದೇಶದಿಂದ ಚಿಕ್ಕಮಾದಿನಾಳ, ರಾಮದುರ್ಗಾ ಗ್ರಾಮದ ಕಡೆ ಕರಡಿ ಬಂದಿರುವ ಮಾಹಿತಿ ಇದೆ. ಯಾರೂ ಒಂಟಿಯಾಗಿ ಓಡಾಡದಂತೆ ಡಂಗುರ ಸಾರಲಾಗುವುದು. ಆಯಕಟ್ಟಿನ ಜಾಗದಲ್ಲಿ ಬೋನುಗಳನ್ನು ಇರಿಸಿ ಕರಡಿಗಳನ್ನು ಹಿಡಿಯಲಾಗುವುದು. ಗ್ರಾಮಸ್ಥರು ಸಹಕರಿಬೇಕು ಎಂದು ಗಂಗಾವತಿ ವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಡಿಕೇರಿ: 3 ಲಕ್ಷ ರು. ಮೌಲ್ಯದ ಸವಲತ್ತು ವಿತರಣೆ
ಹವಾಮಾನ ವೈಪರೀತ್ಯ: ಜಿಲ್ಲೆಯಲ್ಲಿ ಭತ್ತ ಕೃಷಿ ಭಾರಿ ಕುಸಿತ