ಉದ್ಯೋಗ ಹುಡುಕುವವರಾಗದೆ ನೀಡುವವರಾಗಿ

KannadaprabhaNewsNetwork |  
Published : Jun 18, 2026, 01:15 AM IST
00000 | Kannada Prabha

ಸಾರಾಂಶ

ಉದ್ಯೋಗಗಳನ್ನು ಹುಡುಕುವವರಾಗದೆ ಉದ್ಯೋಗ ನೀಡುವವರಾಗಿ ಬೆಳೆಯಬೇಕು. ಉದ್ಯಮ ಪ್ರಾರಂಭಿಸಲು ಕೋಟ್ಯಂತರ ರುಪಾಯಿಗಳ ಅಗತ್ಯವಿಲ್ಲ ಜ್ಞಾನ, ಕೌಶಲ್ಯ ಮತ್ತು ನಾವೀನ್ಯತೆಯ ಆಲೋಚನೆಗಳಿದ್ದರೆ ಹೂಡಿಕೆದಾರರು ತಾವಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ.

ಕನ್ನಡಪ್ರಭ ವಾರ್ತೆ ತುಮಕೂರು ಪದವೀಧರರು ತಮ್ಮ ವೃತ್ತಿಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಪೋಷಕರು, ಗುರುಗಳು, ಹಿರಿಯರನ್ನು ಗೌರವಿಸುವುದನ್ನು ಮರೆಯಬಾರದು. ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಸಮಾಜಕ್ಕೆ ಮತ್ತು ತಮ್ಮ ಸಂಸ್ಥೆಗೆ ಕೈಲಾದ ಕೊಡುಗೆ ನೀಡಬೇಕು ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಎಸ್.ವಿದ್ಯಾಶಂಕರ್ ತಿಳಿಸಿದರು.ನಗರ ಹೊರವಲಯದ ಲಿಂಗಾಪುರದಲ್ಲಿರುವ ಅಕ್ಷಯ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಉದ್ಯೋಗಗಳನ್ನು ಹುಡುಕುವವರಾಗದೆ ಉದ್ಯೋಗ ನೀಡುವವರಾಗಿ ಬೆಳೆಯಬೇಕು, ಉದ್ಯಮ ಪ್ರಾರಂಭಿಸಲು ಕೋಟ್ಯಂತರ ರುಪಾಯಿಗಳ ಅಗತ್ಯವಿಲ್ಲ ಜ್ಞಾನ, ಕೌಶಲ್ಯ ಮತ್ತು ನಾವೀನ್ಯತೆಯ ಆಲೋಚನೆಗಳಿದ್ದರೆ ಹೂಡಿಕೆದಾರರು ತಾವಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಇನ್ಫೋಸಿಸ್‌ನ ನಾರಾಯಣ ಮೂರ್ತಿ, ಧೀರೂಭಾಯಿ ಅಂಬಾನಿ, ವಿಪ್ರೋದ ಅಜೀಂ ಪ್ರೇಮ್‌ಜೀ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರ ಸಾಧನೆಗಳೇ ಇದಕ್ಕೆ ಉದಾಹರಣೆ ಎಂದರು. ಕೃತಕ ಬುದ್ಧಿಮತ್ತೆ ಮತ್ತು ಕೃಷಿ ವಲಯ 2030ರ ವೇಳೆಗೆ ಮತ್ತಷ್ಟು ಸುಧಾರಣೆಯಾಗುತ್ತವೆ. ಕೃತಕ ಬುದ್ಧಿಮತ್ತೆಯು ಸುಧಾರಿತಗೊಂಡು ''''''''ಆರ್ಟಿಫಿಶಿಯಲ್ ಸೂಪರ್ ಇಂಟೆಲಿಜೆನ್ಸ್'''''''' ಆಗಿ ಬದಲಾಗಲಿದೆ. ಈಗಾಗಲೇ ಚೆಸ್, ಗೋ ಗೇಮ್ಸ್ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಪ್ರೊಟೀನ್ ರಚನೆಯನ್ನು ಪತ್ತೆಹಚ್ಚುವಲ್ಲಿ ಮಾನವ ಬುದ್ಧಿಮತ್ತೆಯನ್ನು ಮೀರಿಸಿದೆ. ತಂತ್ರಜ್ಞಾನದ ಈ ಬೆಳವಣಿಗೆಯಿಂದ ಉದ್ಯೋಗಗಳು ನಷ್ಟವಾಗುವುದಿಲ್ಲ, ಬದಲಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದರು.ಘಟಿಕೋತ್ಸವ ಮತ್ತು ಪದವೀಧರರಿಗೆ ಅಭಿನಂದನೆ ಸಲ್ಲಿಸಿದ ಅವರು, ಗ್ರಾಮೀಣ ಭಾಗದಲ್ಲಿ ಮೌಲ್ಯಾಧಾರಿತ ಹಾಗೂ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುತ್ತಿರುವ ಅಕ್ಷಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಯುವ ಪದವೀಧರರಿಗೆ ಮತ್ತು ಅವರ ಹೆಮ್ಮೆಯ ಪೋಷಕರಿಗೆ ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಜಾಗತಿಕ ಅಗತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸುವ ಸಂಸ್ಥೆಯ ದೃಷ್ಟಿಕೋನ ಹೊಂದಿದೆ ಎಂದು ಶ್ಲಾಘಿಸಿದರು.ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದಕ್ಷಿಣ ಪಶ್ಚಿಮ ಪ್ರದೇಶದ ಪ್ರಾದೇಶಿಕ ನಿರ್ದೇಶಕ ಕೆ. ಲಕ್ಷ್ಮೀಪ್ರಸಾದ್ ಮಾತನಾಡಿ, ಪದವಿ ಮುಗಿಸಿದ ನಂತರ ಪ್ರತಿಯೊಬ್ಬರೂ ತಮ್ಮ ಜೀವನದ ಗುರಿಯನ್ನು ಈಗಲೇ ನಿರ್ಧರಿಸಬೇಕು. ಕೇವಲ ಮುಂದಿನ ಒಂದು ಅಥವಾ ಎರಡು ವರ್ಷಗಳ ಗುರಿಯಲ್ಲ, ಬದಲಿಗೆ ಮುಂಬರುವ ೫೦ ರಿಂದ ೬೦ ವರ್ಷಗಳ ಸುದೀರ್ಘ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಗುರಿ ನಿಗದಿಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಸ್ ಶಿವಕುಮಾರ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ಗಗನ ಕುಸುಮವಾಗಿದ್ದು ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಬಡವರ ಮಕ್ಕಳಿಗಾಗಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಓದುವ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಸೇರಿದಂತೆ ಜೀವನದ ಮೌಲ್ಯವನ್ನು ಗುರ್ತಿಸುವ ವಿದ್ಯಾರ್ಥಿಗಳಿಗೆ ಪದವಿ ಮುಗಿಯುವ ಹೊತ್ತಿಗೆ ಉದ್ಯೋಗದ ಭರವಸೆಯನ್ನು ನೀಡುತ್ತಿದ್ದು ಈಗಾಗಲೇ ನಮ್ಮ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ವ್ಯವಸ್ಥಾಪಕ ಟ್ರಸ್ಟಿ ಡಾ. ಶೋಭಾ ಎಸ್, ಪ್ರಾಂಶುಪಾಲರಾದ ಡಾ. ಯತೀಶ್ ಎಲ್, ಐಕ್ಯೂಎಸಿ ಸಂಯೋಜಕರಾದ ಡಾ.ಅಶ್ವಿನಿ ಎಸ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಕಾಲೇಜಿನ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಧಿಕಾರಿಗಳಿಂದ ರೈತರಿಂದ ಅರ್ಜಿಗಳ ಸ್ವೀಕಾರ
ಕಾಮಗಾರಿಗೆ ಶಾಸಕ ಸುರೇಶ್‌ಗೌಡ ಚಾಲನೆ