ಹಾವೇರಿ: ಬೇಡ್ತಿ-ವರದಾ ನದಿ ಜೋಡಣೆ ಆಗಲೇಬೇಕು. ಇದರಲ್ಲಿ ಎರಡನೇ ಮಾತಿಲ್ಲ. ವರದಾ-ಬೇಡ್ತಿ ಜೋಡಣೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ತೊಂದರೆಯಾಗುವುದಿಲ್ಲ. ಅವರ ಜೊತೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.ಜಿಲ್ಲೆಯ ಮಣ್ಣಿನ ಗುಣ ಬಹಳ ಉತ್ತಮವಾಗಿದೆ. ಆದರೂ ಕೂಡ ನಮ್ಮ ನಿರೀಕ್ಷೆಗೆ ತಕ್ಕ ಹಾಗೆ ಉತ್ಪಾದನೆ ಆಗುತ್ತಿಲ್ಲ. ಅದಕ್ಕೆ ವಿಶೇಷವಾದ ಗಮನ ಕೊಡಬೇಕು. ರಾಣಿಬೆನ್ನೂರು, ಹಿರೇಕೆರೂರು, ಬ್ಯಾಡಗಿ ಭಾಗದಲ್ಲಿ ತುಂಗಾ ಮೇಲ್ದಂಡೆ ಯೋಜನೆಯನ್ನು ಸಂಪೂರ್ಣವಾಗಿ ಉಪಯೋಗ ಮಾಡಿಕೊಳ್ಳಬೇಕು. ನೀರಾವರಿ ಇಲಾಖೆ ಇದರ ಬಗ್ಗೆ ಮುತುವರ್ಜಿ ವಹಿಸಬೇಕು. ನಾವಿದ್ದಾಗ ಯೋಜನೆ ಪೂರ್ಣಗೊಳಿಸಿದ್ದೇವೆ. ಆದರೆ, ಇನ್ನು ಕೆಲವು ಭಾಗಗಳಲ್ಲಿ ನೀರು ತಲುಪುತ್ತಿಲ್ಲ. ಆ ಕಡೆ ವರದಾ ನದಿ ನೀರನ್ನು ಸಂಪೂರ್ಣವಾಗಿ ಸದ್ಬಳಕೆಯಾಗಬೇಕು. ತುಂಗಭದ್ರಾ ನದಿ ನೀರು ರಾಣಿಬೆನ್ನೂರು ಕಡೆ ಬರುತ್ತದೆ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ನಾವು ಈಗ ಏನು ಹೋರಾಟ ಮಾಡುತ್ತಿದ್ದೇವೆ. ಬೇಡ್ತಿ-ವರದಾ ನದಿ ಜೋಡಣೆ ಆಗಲೇ ಬೇಕು. ಇದರಲ್ಲಿ ಎರಡನೇ ಮಾತು ಇಲ್ಲ. ವರದಾ-ಬೇಡ್ತಿ ಜೋಡಣೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ತೊಂದರೆಯಾಗುವುದಿಲ್ಲ. ಅದರಲ್ಲಿ ಹೆಚ್ಚು ಭೂಮಿ ಹೋಗುವುದಿಲ್ಲ. ವರದಾ ನದಿ ವರ್ಷಪೂರ್ತಿ ಇರುವುದಿಲ್ಲ. ಮಳೆಗಾಲದಲ್ಲಿ ನಾಲ್ಕೈದು ತಿಂಗಳು ಮಾತ್ರ ಇರುತ್ತದೆ. ಅದನ್ನು ಬೇಡ್ತಿಗೆ ಸೇರಿಸಿದರೆ ಎಂಟತ್ತು ತಿಂಗಳಾದರೂ ನೀರು ಬರುತ್ತದೆ. ಆಗ ಎರಡು ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಈಗಾಗಲೇ ಕೇಂದ್ರದ ಯೋಜನೆ ಅಡಿಯಲ್ಲಿದೆ. ಈ ಯೋಜನೆ ಕಾರ್ಯಸಾಧ್ಯತೆ ವರದಿ ಬಂದಿದೆ. ಅದನ್ನು ಮುಂದುವರೆಸುತ್ತೇವೆ. ಯೋಜನಾ ವರದಿಗೆ ಒಪ್ಪಿಗೆ ಸಿಕ್ಕ ತಕ್ಷಣ ಪ್ರಾಸ್ಪೆಕ್ಟಿವ್ ಪ್ಲ್ಯಾನ್ ಮಾಡಲು ಹೇಳಿದ್ದೇನೆ. ಅಂದರೆ ಕೇಂದ್ರ ಸರ್ಕಾರ ಹಣ ಕೊಡಲು ಸಾಧ್ಯವಾಗುತ್ತದೆ. ಕೇವಲ ರಾಜ್ಯ ಸರ್ಕಾರವೇ ಮಾಡಬೇಕೆಂದರೆ ಇವರ ಬಳಿ ಹಣವಿಲ್ಲ. ಅದು ಆಗುವುದಿಲ್ಲ. ಆದ್ದರಿಂದ ಪ್ರಾಸ್ಪೆಕ್ಟಿವ್ ಪ್ಲ್ಯಾನ್ ನಲ್ಲಿ ಹಾಕಿ ಕೇಂದ್ರದ ಹಣಕಾಸಿನ ನೆರವು ತೆಗೆದುಕೊಂಡು ಬೇಡ್ತಿ-ವರದಾ ನದಿ ಜೋಡಣೆ ಮಾಡಿದಾಗ ನಮ್ಮ ಹಾವೇರಿ, ಬ್ಯಾಡಗಿ, ಶಿಗ್ಗಾಂವಿ, ಸವಣೂರು ಭಾಗದ ರೈತರಿಗೆ ಅನುಕೂಲವಾಗುತ್ತದೆ. ಎಲ್ಲ ಯೋಜನೆಗೆ ನಾವೆಲ್ಲರು ಪಕ್ಷಾತೀತ ಮತ್ತು ಜಾತ್ಯತೀತವಾಗಿ ಒಂದಾಗಿ ಹೋರಾಟ ಮಾಡಬೇಕು ಎಂದರು.ಕೆಲವು ಸಂದರ್ಭದಲ್ಲಿ ದೊಡ್ಡ ಸಾಧನೆಯ ಗುರಿ ತಲುಪಲು ಸಣ್ಣ ಸಮಸ್ಯೆಗಳನ್ನು ಬದಿಗೊತ್ತಿ ಮುಂದೆ ಹೋದಾಗ ಮಾತ್ರ ಯಶಸ್ಸು ಸಿಗುತ್ತದೆ. ಸ್ವಾತಂತ್ರ್ಯ ಹೋರಾಟ ಮಾಡುವಾಗ ಹಲವಾರು ಸಂಘಟನೆಗಳಿದ್ದವು, ಹಲವಾರು ಚಿಂತನೆಗಳಿದ್ದವು, ಅದೆಲ್ಲ ಮರೆತು ಸ್ವಾತಂತ್ರ್ಯ ಪಡೆಯುವುದೇ ನಮಗೆ ಮುಖ್ಯ ಎಂದು ಹೋರಾಟ ಮಾಡಿದಾಗ ಜಯ ಸಿಕ್ಕಿತು. ಅದೇ ರೀತಿ ನಮ್ಮ ನೀರಿನ ಹಕ್ಕನ್ನು ಪಡೆದುಕೊಳ್ಳಲು ನಾವು ಹೋರಾಟ ಮಾಡಬೇಕು. ಉತ್ತರ ಕನ್ನಡದವರ ಜೊತೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬಗೆ ಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.