ಹೊಸಪೇಟೆ: ಹೊಸಪೇಟೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳ ಅಭಿವೃದ್ಧಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ನಗರಸಭೆಯಿಂದ ಶನಿವಾರ ನಗರದಲ್ಲಿ ₹2.82 ಕೋಟಿ ಅನುದಾನದಲ್ಲಿ ನೆಹರು ಕಾಲೋನಿ, ಶ್ರೀವಾಸವಿ ದೇವಸ್ಥಾನ ಹಾಗೂ ಎಂ.ಪಿ.ಪ್ರಕಾಶ್ ನಗರದಲ್ಲಿ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಆರ್ಯವೈಶ್ಯ ಸಮಾಜದಿಂದ ವಾಸವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಮೊದಲ ಹಂತದಲ್ಲಿ ನೀಡಿದ ₹25 ಕೋಟಿ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ₹7 ಕೋಟಿ, ಲೋಕೋಪಯೋಗಿ ಇಲಾಖೆಗೆ, ₹8 ಕೋಟಿ, ಗ್ರಾಮೀಣ ಸೌಕರ್ಯ ಮತ್ತು ₹10 ಕೋಟಿ ನಗರದಲ್ಲಿ ರಸ್ತೆ ಸೌಕರ್ಯ ಅಭಿವೃದ್ಧಿಗೆ ಮಂಜೂರು ಮಾಡಿರುವೆ. ಹಳ್ಳಿಗಳಲ್ಲಿ ಒಳ ಮಾಗಾಣಿ ರಸ್ತೆಗಳು ನಗರದ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಇದರಿಂದ ರೈತರಿಗೆ ಅನುಕೂಲ ಆಗಿದೆ. ಅನುದಾನ ಮಂಜೂರಾಗಿದೆ ಎಂದು ಬೇಕಾಬಿಟ್ಟಿ ಬಳಸುವಂತಿಲ್ಲ. ಆದ್ಯತೆಯನುಸಾರ ಅವಶ್ಯಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸಮೀಕ್ಷೆಗಳನ್ನು ಕೈಗೊಂಡು ಕಾಮಗಾರಿ ಕೈಗೊಳ್ಳಲು ಬಹಳ ತಡವಾಗಿದೆ. ಎಪಿಎಂಸಿ ವೃತ್ತದಿಂದ ಪುನೀತ್ ರಾಜಕುಮಾತ್ ವೃತ್ತದವರೆಗೆ ಕಾರು ಮತ್ತು ಬೈಕ್ ಪಾರ್ಕಿಂಗ್ ಮಾಡಿಕೊಂಡು ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಇದಕ್ಕೆ ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರು ಸಹಕರಿಸಿದ್ದಾರೆ ಎಂದರು.
ನವೆಂಬರ್- ಡಿಸೆಂಬರ್ ವೇಳೆಗೆ ಹೊಸಪೇಟೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಅಗತ್ಯ ಬೇಡಿಕೆಗಳನ್ನು ಈಡೇರಿಸಲು ಆದ್ಯತೆ ನೀಡಿ ಕ್ರಮ ವಹಿಸಲಾಗುವುದು ಎಂದರು.ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತ ಮಾತನಾಡಿ, ನಗರದಲ್ಲಿ ವಾಸವಿ ವೃತ್ತ ನಿರ್ಮಾಣಕ್ಕೆ ನಗರಸಭೆಯ 27 ಸದಸ್ಯರು ಒಪ್ಪಿಗೆ ನೀಡಿದ್ದಾರೆ. ಠರಾವು ಪಾಸ್ ಮಾಡಿದ್ದು, ಕೂಡಲೇ ನಿರ್ಮಾಣಕ್ಕೆ ಸೂಚಿಸಬೇಕೆಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್ ಮಾತನಾಡಿದರು.ನಗರಸಭೆ ಸದಸ್ಯರಾದ ಅಬ್ದುಲ್ ಖದೀರ್, ಮಂಜುನಾಥ, ಮಹೇಶ್, ಪೌರಾಯುಕ್ತ ಯರಗುಡಿ ಶಿವಕುಮಾರ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಕಾಕುಬಾಳ ರಾಜೇಂದ್ರ, ಕಾರ್ಯದರ್ಶಿ ಪ್ರಹ್ಲಾದ್ ಭೂಪಾಳ್, ಕಾಕುಬಾಳ ಶ್ರೀನಿವಾಸ್, ಭೂಪಾಳ್ ಸತೀಶ್ ಮತ್ತಿತರರಿದ್ದರು.