ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಚಿತ್ರದುರ್ಗ ನಗರದಲ್ಲಿ ಹತ್ತು ಹಾಸಿಗೆಗಳ ಡಯಾಲಿಸಿಸ್ ಕೇಂದ್ರ, ಕೌಶಲ್ಯಾಭಿವೃದ್ಧಿ ಕೇಂದ್ರ, ಪಿಸಿಯೋಥೆರಪಿ ಸೆಂಟರ್, ಲ್ಯಾಬೋರೇಟರಿ ಸ್ಥಾಪನೆ ಮಾಡಲಾಗಿದೆ ಎಂದು ಕ್ಲಬ್ ನ ಕಾರ್ಯದರ್ಶಿ ಕೆ.ಮಧುಪ್ರಸಾದ್ ತಿಳಿಸಿದರು.
ಬಾಲ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಯಾಲಿಸಿಸ್ ಕೇಂದ್ರದ ಉಪಕರಣಗಳಿಗಾಗಿ ರೋಟರಿ ಪೌಂಡೇಶನ್‍ನಿಂದ 1.12 ಕೋಟಿ ರು. ಗ್ರಾಂಟ್ ಪಡೆಯಲಾಗಿದೆ.ನಗರದ ವ್ಯಾಪಾರೋದ್ದಿಮೆಗಳಾದ ಎಸ್ಆರ್‌ಬಿಎಂಎಸ್ ನ ಮಾಲೀಕರಾದ ಲಕ್ಷಿಕಾಂತ ರೆಡ್ಡಿ ಹಾಗೂ ಎಸ್.ವೀರೇಶ್ ದೇಣಿಗೆಯಿಂದ ಚಳ್ಳಕೆರೆ ರಸ್ತೆಯಲ್ಲಿನ ಕೃಷ್ಣಪ್ಪ ಲೇ ಔಟ್‍ನಲ್ಲಿ ಸ್ಥಳ ಪಡೆಯಲಾಗಿದೆ. ರೋಟರಿ ಸೇವಾ ಭವನವನ್ನು ಚಿತ್ರದುರ್ಗ ರೋಟರಿ ಟ್ರಸ್ಟನ ಅಡಿಯಲ್ಲಿ ನಿರ್ಮಿಸಲಾಗಿದೆ. ಕಿಡ್ನಿ ರೋಗಿಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ 10 ಹಾಸಿಗೆಗಳ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿದೆ. ಯಂತ್ರಗಳು, ಕಟ್ಟಡಗಳು, ಸೋಲಾರ್ ಪ್ಯಾನಲ್‍ಗಳ ಸಂಪೂರ್ಣ ವೆಚ್ಚವನ್ನು ನಗರದ ರೋಟರಿ ಕ್ಲಬ್ ಸದಸ್ಯರು ಭರಿಸಿದ್ದಾರೆ ಎಂದರು.
ಚಿತ್ರದುರ್ಗ ಮತ್ತು ಅಕ್ಕಪಕ್ಕದ ಪಟ್ಟಣಗಳ ಪಾಲಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹತ್ತು ಡಯಾಲಿಸಿಸ್ ಯಂತ್ರೋಪಕರಣಗಳನ್ನು ಸ್ಥಾಪಿಸಲಾಗಿದೆ. ಬಡ ಮತ್ತು ನಿರ್ಗತಿಕ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಅವರ ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ.
ಕೈಗಾರಿಕೋದ್ಯಮಿಗಳಾದ ಪ್ರವೀಣ ಚಂದ್ರರವರು ಪ್ರತಿ ತಿಂಗಳು 200 ಡಯಾಲಿಸಿಸ್‍ಗಳನ್ನು ಉಚಿತವಾಗಿ ಪ್ರಾಯೋಜಿಸಿದ್ದಾರೆ. ಈ ಕಟ್ಟಡವನ್ನು ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದ್ದು. ಡಯಾಲಿಸಿಸ್ ಕೇಂದ್ರದ ಅನುಕೂಲಕ್ಕಾಗಿ ಹವಾನಿಯಂತ್ರಣ ಸೌಲಭ್ಯವನ್ನು ಒದಗಿಸಲಾಗಿದೆ. ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಶಿರಸಿಯ ಯುವಜಯ ಪೌಂಡೇಷನ್‍ನ ಸಹಯೋಗ ಪಡೆದಿದ್ದು ಇದರಲ್ಲಿ ಬಿಎ, ಬಿಕಾಂ, ಬಿಎಸ್ಸಿ ಪದವೀಧರರಿಗೆ 2 ರಿಂದ ಮೂರು ತಿಂಗಳ ತರಬೇತಿ ನೀಡಲಾಗುತ್ತದೆ.
ರೋಟರಿ ಟ್ರಸ್ಟ್ ಅಧ್ಯಕ್ಷ ಪಿ.ಎಸ್ ಶಂಭುಲಿಂಗಪ್ಪ ಮಾತನಾಡಿ, ಏ.30ರಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಡಾ.ಸಾಧು ಗೋಪಾಲ ಕೃಷ್ಣ ಡಯಾಲಿಸಿಸ್ ಕೇಂದ್ರದ ಉದ್ಘಾಟನೆ ನೆರವೇರಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಜಿ.ಎನ್ ವೀರಣ್ಣ, ಎಸ್.ವೀರೇಶ್, ಕೆ.ಎಸ್.ಚಂದ್ರಮೋಹನ್, ಜಯಶ್ರೀ ಷಾ, ತರುಣ್ ಷಾ, ಮೂರ್ತಿ, ವೆಂಕಟೇಶ್, ವಿಶ್ವನಾಥ್, ಸೂರ್ಯನಾರಾಯಣ ಇದ್ದರು.