ಹೊಸ ವರ್ಷದ ಸ್ವಾಗತಕ್ಕೆ ಬೆಳಗಾವಿ ಸಜ್ಜು

KannadaprabhaNewsNetwork | Published : Dec 31, 2024 1:02 AM

ಸಾರಾಂಶ

ಹೊಸ ವರ್ಷದ ಸ್ವಾಗತಕ್ಕೆ ಬೆಳಗಾವಿ ನಗರ ಸಜ್ಜಾಗಿದೆ. ಹಿಂದಿನ ವರ್ಷದ ಕಹಿ ನೆನಪು ಮರೆತು, ಸಿಹಿ ನೆನಪುಗಳೊಂದಿಗೆ ಹೊಸ ವರ್ಷ ಬರಮಾಡಿಕೊಳ್ಳಲು ಜನತೆ ಸಜ್ಜಾಗಿದ್ದಾರೆ. ಹೊಸ ವರ್ಷಾಚರಣೆಯನ್ನು ಅದ್ಧೂರಿಯಾಗಿ ನಡೆಸಲು ನಗರದ ಬಹುತೇಕ ಪ್ರದೇಶಗಳಲ್ಲಿ ಸಿದ್ಧತೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹೊಸ ವರ್ಷದ ಸ್ವಾಗತಕ್ಕೆ ಬೆಳಗಾವಿ ನಗರ ಸಜ್ಜಾಗಿದೆ. ಹಿಂದಿನ ವರ್ಷದ ಕಹಿ ನೆನಪು ಮರೆತು, ಸಿಹಿ ನೆನಪುಗಳೊಂದಿಗೆ ಹೊಸ ವರ್ಷ ಬರಮಾಡಿಕೊಳ್ಳಲು ಜನತೆ ಸಜ್ಜಾಗಿದ್ದಾರೆ. ಹೊಸ ವರ್ಷಾಚರಣೆಯನ್ನು ಅದ್ಧೂರಿಯಾಗಿ ನಡೆಸಲು ನಗರದ ಬಹುತೇಕ ಪ್ರದೇಶಗಳಲ್ಲಿ ಸಿದ್ಧತೆ ಮಾಡಲಾಗಿದೆ.

ನಗರದ ಕ್ಲಬ್, ಹೋಟೆಲ್‌, ರೆಸ್ಟೋರೆಂಟ್ ಹಾಗೂ ರೆಸಾರ್ಟ್‌, ನಗರದ ಗಲ್ಲಿ ಗಲ್ಲಿ ಹೊಸ ವರ್ಷಾಚರಣೆಗೆ ಭರ್ಜರಿ ತಯಾರಿ ಮಾಡಲಾಗಿದೆ. ನಗರದ ಅನೇಕ ಕಡೆಗಳಲ್ಲಿ ಹಳೆಯ ವರ್ಷದ ಪ್ರತೀಕವಾಗಿ ಓಲ್ಡ್ ಮ್ಯಾನ್ ಪ್ರತಿಕೃತಿ ಮಾಡಲಾಗಿದೆ. ಡಿ.31ರ ಮಧ್ಯರಾತ್ರಿ 12ಕ್ಕೆ ಈ ಪ್ರತಿಕೃತಿ ದಹಿಸಿ ಹೊಸ ವರ್ಷ ಬರಮಾಡಿಕೊಳ್ಳಲಾಗುತ್ತದೆ. ಕ್ಯಾಂಪ್ ಪ್ರದೇಶದಲ್ಲಿ ನಾಲ್ಕೈ ದು ದಶಕಗಳಿಂದಲೂ ವಿಭಿನ್ನವಾದ ಅತಿ ಎತ್ತರದ ಓಲ್ಡ್ ಮ್ಯಾನ್ ಪ್ರತಿಕೃತಿ ನಿರ್ಮಿಸಲಾಗುತ್ತದೆ.

ಬೆಳಗಾವಿಯ ಹಲವೆಡೆ ಅದ್ಧೂರಿ ಪಾರ್ಟಿ ಆಯೋಜಿಸಲಾಗಿದೆ. ಈ ಹೋಟೆಲ್‌ಗಳಲ್ಲಿ ಕಲ್ಪಿಸಲಾಗುವ ಸೇವೆ, ಗುಣಮಟ್ಟ ಮತ್ತು ಮನರಂಜನಾ ಕಾರ್ಯಕ್ರಮಗಳ ಆಧಾರದ ಮೇರೆಗೆ ಶುಲ್ಕ ವಿಧಿಸಲಾಗುತ್ತದೆ. ಡಿಸ್ಕೋ ಜಾಕಿ (ಡಿಜೆ)ಗಳ ಅಬ್ಬರವೂ ನಗರದಲ್ಲಿ ಕಂಡು ಬರಲಿದೆ. ಹೊಸ ವರ್ಷಾಚರಣೆಗೆ ಗೋವಾ ರಾಜ್ಯಕ್ಕೆ ತೆರಳುವರ ಸಂಖ್ಯೆಯೂ ಹೆಚ್ಚಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಹೆಚ್ಚುತ್ತಿದೆ ಪಾರ್ಟಿ ಸಂಸ್ಕೃತಿ: ಮಬ್ಬುಗತ್ತಲಿನ ನಡುವೆ ಮಿಂಚಿ ಮರೆಯಾಗುವ ವರ್ಣರಂಜಿತ ದೀಪಗಳ ಮಧ್ಯೆ, ಕಿವಿಗಡಚಿಕ್ಕುವ ಸಂಗೀತದಲ್ಲಿ ಸಂಗಾತಿ, ಸ್ನೇಹಿತರೊಂದಿಗೆ ಹೆಜ್ಜೆ ಹಾಕಲು ಯುವಕರು ತುದಿಗಾಲಲ್ಲಿ ನಿಂತಿದ್ದಾರೆ. ರೆಸ್ಟೋರೆಂಟ್‌ಗಳು, ಕ್ಲಬ್ ಮತ್ತು ಬಹುತೇಕ ಹೋಟೆಲ್‌ಗಳು ಹೊಸ ವರ್ಷದ ಸಂಭ್ರಮಾಚರಣೆಯ ಆತಿಥ್ಯಕ್ಕೆ ಹೊಸ ಹೊಸ ಯೋಜನೆಗಳೊಂದಿಗೆ ಸಜ್ಜಾಗಿವೆ. ಪಾರ್ಟಿ ಸಂಸ್ಕೃತಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು, ಇಂತಹ ಆಚರಣೆಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯೂ ಏರುತ್ತಿದೆ.

Share this article