ಬಳ್ಳಾರಿ: ನಗರದ ಹೊರವಲಯದ ಹೊಸ ಬೈಪಾಸ್ ನ ವೇಣಿವೀರಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 67 ಯೋಜನೆಯಡಿ ವೇಣಿವೀರಾಪುರದಿಂದ ಹಗರಿವರೆಗೆ ನಿರ್ಮಿಸಲಾದ ಬಳ್ಳಾರಿ ಬೈಪಾಸ್ ರಸ್ತೆಯನ್ನು ಸಂಸದ ಈ.ತುಕಾರಾಂ ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ನಗರದ ಹೊಸ ಬೈಪಾಸ್ ರಸ್ತೆಯಿಂದ ಸುಧಾಕ್ರಾಸ್ ಮೂಲಕ ಕೌಲ್ ಬಜಾರ್ ವರೆಗೆ 4 ಲೇನ್ ರಸ್ತೆ ಮಾಡಲು ಈಗಾಗಲೇ ಡಿಪಿಆರ್ ಸಿದ್ಧಗೊಳ್ಳುತ್ತಿದೆ. ಸುಂದರವಾದ ರಸ್ತೆ ನಿರ್ಮಾಣ ಮಾಡಲಾಗುವುದು ಮತ್ತು ಸುಧಾಕ್ರಾಸ್ ಬಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಈಗಾಗಲೇ ಆರಂಭಗೊಂಡು ಪ್ರಗತಿಯಲ್ಲಿದೆ. ದುರ್ಗಮ್ಮ ಗುಡಿ ಬಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ರೈಲ್ವೆ ಇಲಾಖೆಗೆ ಈಗಾಗಲೇ ₹9 ಕೋಟಿ ನೀಡಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಬಳ್ಳಾರಿಯಿಂದ ವೇಣಿ ವೀರಾಪುರ ಮೂಲಕ ಸಿರುಗುಪ್ಪ ರಸ್ತೆಗೆ ರಿಂಗ್ ರೋಡ್ ಮಾಡಲು ಡಿಪಿಆರ್ ಸಿದ್ಧಗೊಳ್ಳುತ್ತಿದೆ. ₹230 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಒಟ್ಟಾರೆಯಾಗಿ ಬಳ್ಳಾರಿಯಲ್ಲಿ ಪೂರ್ಣ ರಿಂಗ್ ರೋಡ್ ಮೂಲಕ ಅಖಂಡ ಬಳ್ಳಾರಿಯನ್ನು ಅಭಿವೃದ್ಧಿ ಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.ಉತ್ತಮ್ ಗಾಲ್ವಾ ಕಂಪನಿಯು ಮಾರ್ಚ್ ತಿಂಗಳಲ್ಲಿ ಪರಿಸರ ಸ್ನೇಹಿ ಉದ್ಯಮ ಸ್ಥಾಪಿಸಲು ₹36,000 ಕೋಟಿ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದು, ಇತ್ತೀಚೆಗೆ ಮುಖ್ಯಮಂತ್ರಿಯವರೊಂದಿಗೆ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ ಎಂದರು.
ಬಳಿಕ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ 2024-25ನೇ ಸಾಲಿನ ಸಂಸದರ ₹10 ಲಕ್ಷ ಅನುದಾನದಲ್ಲಿ ಬಸ್ ತಂಗುದಾಣದ ಭೂಮಿಪೂಜೆ ನೆರವೇರಿಸಿದರು.
ಇದೇ ವೇಳೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಕುಡಿಯಲು ನೀರಿಗಾಗಿ 2000 ಲೀ. ಸಾಮರ್ಥ್ಯದ ಕುಡಿಯುವ ನೀರಿನ ಆರ್‌ಓ ಘಟಕ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಡಾ.ಬಾಬು ಜಗನ್ ಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಆನಂದ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು-ಗುತ್ತಿಗೆದಾರರು, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.