ನಾಲ್ಕನೇ ದಿನ ಕೊಪ್ಪಳ ಜಿಲ್ಲೆಗೆ ಪ್ರವೇಶಿಸಲಿರುವ ಬಳ್ಳಾರಿ ಚಲೋ

KannadaprabhaNewsNetwork |  
Published : Sep 04, 2026, 01:30 AM IST
03ಕೆಪಿಆರ್‌ಸಿಆರ್‌ 08:  | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟದ ಹಾದಿ ಹಿಡಿದಿರುವ ಬಿಜೆಪಿ ಅದರ ಭಾಗವಾಗಿ ಕೈಗೊಂಡಿರುವ ಬಳ್ಳಾರಿ ಚಲೋ ಬೃಹತ್‌ ಪಾದಯಾತ್ರೆಯು ಮೂರು ದಿನಗಳ ಕಾಲ ರಾಯಚೂರಿನಲ್ಲಿ ಸಂಚರಿಸಿ ನಾಲ್ಕನೇ ದಿನವಾದ ಶುಕ್ರವಾರ ಪಕ್ಕದ ಕೊಪ್ಪಳ ಜಿಲ್ಲೆಯನ್ನು ಪ್ರವೇಶಿಸುತ್ತಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟದ ಹಾದಿ ಹಿಡಿದಿರುವ ಬಿಜೆಪಿ ಅದರ ಭಾಗವಾಗಿ ಕೈಗೊಂಡಿರುವ ಬಳ್ಳಾರಿ ಚಲೋ ಬೃಹತ್‌ ಪಾದಯಾತ್ರೆಯು ಮೂರು ದಿನಗಳ ಕಾಲ ರಾಯಚೂರಿನಲ್ಲಿ ಸಂಚರಿಸಿ ನಾಲ್ಕನೇ ದಿನವಾದ ಶುಕ್ರವಾರ ಪಕ್ಕದ ಕೊಪ್ಪಳ ಜಿಲ್ಲೆಯನ್ನು ಪ್ರವೇಶಿಸುತ್ತಿದೆ.

ಪರಿಶೀಷ್ಟ ಜಾತಿ ಮೀಸಲು ಕ್ಷೇತ್ರವಾದ ಜಿಲ್ಲೆಯ ಲಿಂಗಸುಗೂರು ಕ್ಷೇತ್ರದಿಂದ ಕಳೆದ ಸೆ.1 ರಂದು ಆರಂಭಕಂಡಿದ್ದ ಪಾದಯಾತ್ರೆಯು ಮೊದಲ ದಿನ 10 ಕಿಮೀ ಕ್ರಮಿಸಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾದ ಮಸ್ಕಿ ಪ್ರವೇಶಿಸಿತು. ಸೆ.2ರಂದು ಮಸ್ಕಿಯಲ್ಲಿ 22 ಕಿ.ಮೀ. ಸಾಗಿದ ಯಾತ್ರೆಯು ಸೆ.3ರಂದು 23 ಕಿ.ಮೀ. ಸಾಗಿ ಸಾಮಾನ್ಯ ಕ್ಷೇತ್ರ ಸಿಂಧನೂರು ತಲುಪಿದ್ದು, ಸೆ.4 ಶುಕ್ರವಾರ ಬೆಳಗ್ಗೆ ಸಿಂಧನೂರು ನಗರದಿಂದ ಪುನರಾರಂಭಗೊಳ್ಳಲಿರುವ ನಾಲ್ಕನೇ ದಿನದ ಪಾದಯಾತ್ರೆಯು ಮಧ್ಯಾಹ್ನದ ವೇಳೆಗೆ ಸಿಂಧನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಂಚಿನಾಳ ಕ್ಯಾಂಪ್‌ ತಲುಪಿ ಅಲ್ಲಿಂದ ಪಕ್ಕದ ಕೊಪ್ಪಳ ಜಿಲ್ಲೆ ಪ್ರವೇಶಿಸಿ ಕಾರಟಗಿಯನ್ನು ತಲುಪಲಿದೆ.

ನಿರೀಕ್ಷೆಗೂ ಮೀರಿ ಸ್ಪಂದನೆ : ಇದೇ ಸೆ.10 ವರೆಗೆ ಸುಮಾರು 175 ಕಿಮೀ ದೂರದ ಸಾಗಲಿರುವ ಬಿಜೆಪಿ ಬಳ್ಳಾರಿ ಚಲೋ ಬೃಹತ್‌ ಪಾದಯಾತ್ರೆಗೆ ರಾಯಚೂರು ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿದ ಸ್ಪಂದನೆ ಲಭಿಸಿರುವುದು ಬಿಜೆಪಿಗರ ಉತ್ಸಾಹವನ್ನು ಹಿಮ್ಮಡಿಗೊಳಿಸಿದೆ.

ಮೂರು ದಿನಗಳ ಪಾದಯಾತ್ರೆಯಲ್ಲಿ ಕೇವಲ ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಂದ ಅಷ್ಟೇ ಅಲ್ಲದೇ ಅಕ್ಕ-ಪಕ್ಕದ ಜಿಲ್ಲೆಗಳಾದ ಬೀದರ್‌, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ದಕ್ಷಿಣ ಕರ್ನಾಟಕ ಪ್ರಾಂತದ ಬೆಂಗಳೂರು, ಮೈಸೂರು ಇತರೆ ಜಿಲ್ಲೆಗಳಿಂದಲೂ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಪಾದಯಾತ್ರೆಯ ಯಶಸ್ವಿಗೆ ಕೈ ಜೋಡಿಸಿದರು.

ಇಡೀ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶದ ಕಿಡಿಯನ್ನೇ ಕಾರುತ್ತಾ ಸಾಗಿದ್ದಾರೆ ಇವರ ಜೊತೆಗೆ ಇತರೆ ನಾಯಕರು, ಮುಖಂಡರು ಸಹ ಕಾಂಗ್ರೆಸ್‌ ಆಡಳಿತ ಧೋರಣೆಯನ್ನು ಖಂಡಿಸುತ್ತಾ ಹೊರಟಿರುವುದು ಸಿಎಂ ಡಿ.ಕೆ.ಶಿವಕುಮಾರ ಸೇರಿ ಇತರೆ ಸಚಿವರು ಮುಜುಗರಕ್ಕೊಳಗಾಗುವಂತೆ ಮಾಡುತ್ತಿದೆ.

ದಿನಕ್ಕೊಂದು ವಿಷಯ ಆಯ್ಕೆಯ ವಿಶೇಷ: ಬಿಜೆಪಿ ಪಾದಯಾತ್ರೆಯಲ್ಲಿ ದಿನಕ್ಕೊಂದು ವಿಷಯ ಆಯ್ಕೆ ಮಾಡಿಕೊಂಡು ಸಾಗುತ್ತಿರುವುದು ವಿಶೇಷವಾಗಿದೆ. ಮೊದಲ ದಿನ ಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಒಟ್ಟಾರೆ ಕಾಂಗ್ರೆಸ್‌ ಸರ್ಕಾರದ ವೈಫಲ್ಯ, ಅಕ್ರಮ, ದಲಿತ,ರೈತ,ಯುವಕ, ಮಹಿಳಾ ಮತ್ತು ಜನಸಾಮಾನ್ಯರ ವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಲಾಗಿತ್ತು. ಎರಡನೇ ದಿನವಾದ ಬುಧವಾರ ದಲಿತ ಹಾಗೂ ಶೋಷಿತ ಸಮುದಾಯಗಳಿಗೆ ಸರ್ಕಾರದ ದ್ರೋಹಗಳನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಇಡೀ ಪಾದಯಾತ್ರೆಯಲ್ಲಿ ನೀಲಿ ಶಾಲು ಹಾಕಿಕೊಂಡು ನಾಯಕರು ಹೆಜ್ಜೆ ಹಾಕಿದರೆ, ರಾಜ್ಯಾಧ್ಯಕ್ಷರು ದಲಿಯ ಸಮುದಾಯಗಳೊಂದಿಗೆ ಸಮಾಲೋಚನೆ ನಡೆಸಿ ಅವರ ಕಷ್ಟ-ಕಾರ್ಪಣ್ಯ ಹಾಗೂ ಸರ್ಕಾರದ ದ್ರೋಹದ ಕುರಿತು ಚರ್ಚಿಸಿದ್ದರು. ಮೂರನೇ ದಿನವಾದ ಗುರುವಾರ ರೈತರ ವಿಚಾರವನ್ನು ಮುಂದಿಟ್ಟುಕೊಂಡು ಯಾತ್ರೆ ನಡೆಯಿತು. ಅದಕ್ಕಾಗಿಯೇ ಬಿ.ವೈ.ವಿಜಯೇಂದ್ರ ಅವರು ಸಹ ಬಿಳಿ ಬಣ್ಣದ ಅಂಗಿ ಹಾಗೂ ಲುಂಗಿಯಲ್ಲಿ ಪಾದಯಾತ್ರೆ ಕೈಗೊಂಡು, ಜೋಡೆತ್ತನ್ನು ಹತ್ತಿ ನೊಗೆಯನ್ನು ಹೆಗಲ ಮೇಲೆ ಹೊತ್ತು ಪಾದಯಾತ್ರೆಗೆ ಚಾಲನೆ ನೀಡಿದರು. ಗೆಸರು ಗದ್ದೆಗಿಳಿದು ಭತ್ತದ ಸಸಿಮಡಿಯನ್ನು ಹಿಡಿದು ಬಿತ್ತಿದರು. ಅಷ್ಟೇ ಅಲ್ಲದೇ ರೈತ ಮಹಿಳೆಯರು ತಂದಿದ್ದ ಬುತ್ತಿಯನ್ನು ಉಂಡು, ಅವರೊಂದಿಗೆ ಕೇಂದ್ರ ಬಿಜೆಪಿ ಸರ್ಕಾರದ ಯೋಜನೆಗಳು, ಈ ಹಿಂದೆ ಯಡಿಯೂರಪ್ಪ ಅವರು ನೀಡಿದ ಕೊಡುಗೆಗಳು ಮತ್ತು ಹೀಗಿನ ಕಾಂಗ್ರೆಸ್‌ ಸರ್ಕಾರದ ವಂಚನೆ ಕುರಿತು ಚರ್ಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್‌ ಸುರಕ್ಷತೆ ಎತ್ತಿ ಹಿಡಿಯಲು ಗುತ್ತಿಗೆದಾರರ ಒತ್ತಾಯ
ಅಂಗಡಿ ಬಾಗಿಲಿಗೆ ಬೀದಿದೀಪದ ಕಂಬಗಳು!