ಬಳ್ಳಾರಿ: ನಗರದ ತಾಳೂರು ರಸ್ತೆಯಲ್ಲಿರುವ ಗುರುಕುಲ ವಸತಿ ಶಾಲೆಯಲ್ಲಿ ಶನಿವಾರ ರಾತ್ರಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಕಬ್ಬಿಣದ ರಾಡಿನಿಂದ ಏಕಾಏಕಿ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮೃತನನ್ನು ಆಂಧ್ರಪ್ರದೇಶದ ಹೊಳಲಗುಂದಿ ಮಂಡಲದ ಸಮ್ಮತಾಗೇರಿ ನಿವಾಸಿ ಡಿ. ಹೇಮಂತ್ (15) ಎಂದು ಗುರುತಿಸಲಾಗಿದೆ.
ಕಾನೂನು ಸಂಘರ್ಷಕ್ಕೆ ಒಳಗಾದ ವಿದ್ಯಾರ್ಥಿಯ ಪತ್ತೆಗಾಗಿ ಏಳು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಪತ್ತೆಯ ಬಳಿಕ ಮುಂದಿನ ಹಂತದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರೂಸ್‌ಪೇಟೆ ಠಾಣೆಯಲ್ಲಿ ದಾಳಿ ಮಾಡಿದ ಬಾಲಕ ಹಾಗೂ ಗುರುಕುಲ ವಸತಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಗರ ಶಾಸಕ ನಾರಾ ಭರತ್ ರೆಡ್ಡಿ, ಬಳ್ಳಾರಿ ವಲಯ ಐಜಿಪಿ ಡಾ. ಹರ್ಷ, ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಟ್ರಾಮಾ ಕೇರ್ ಸೆಂಟರ್‌ಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.ಉಂಡು ಮಲಗಿದ ಬಳಿಕ ಏಕಾಏಕಿ ದಾಳಿ:
ಬಾಲಕ ದಿಢೀರನೇ ದಾಳಿ ಮಾಡಿದ್ದು ಏಕೆ ಎಂಬುದು ಗೊತ್ತಾಗಿಲ್ಲ. ಗಾಯಗೊಂಡಿರುವ ಬಾಲಕರು ಘಟನೆಯ ಶಾಕ್‌ನಲ್ಲಿ ಇದ್ದಾರೆ. ಹೀಗಾಗಿ ದಾಳಿ ಮಾಡಿದ ಬಾಲಕನನ್ನು ವಶಕ್ಕೆ ಪಡೆದ ಬಳಿಕ ಮಾಹಿತಿ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿ ವೇಳೆ ಮೃತಪಟ್ಟ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ವಿಮ್ಸ್‌ನ ಶವಾಗಾರ ಬಳಿ ಜಮಾಯಿಸಿದ್ದ ಮೃತ ಬಾಲಕನ ತಂದೆ-ತಾಯಿ ಹಾಗೂ ಕುಟುಂಬ ಸದಸ್ಯರು ಮಗನ ಸಾವಿನ ಸ್ಥಿತಿ ಕಂಡು ಗೋಳಿಟ್ಟರು.
ನಗರದಲ್ಲಿ ಶಾಲಾ-ಕಾಲೇಜುಗಳಲ್ಲಿ ಗಾಂಜಾ ಬಳಕೆಯಾಗುತ್ತಿದೆ ಎಂಬ ಆರೋಪಗಳು ದಟ್ಟವಾಗಿದ್ದು, ಇತ್ತೀಚೆಗಷ್ಟೇ ನಗರದ ಖಾಸಗಿ ಶಾಲೆಯೊಂದರಲ್ಲಿ ಶಾಲಾ ವಿದ್ಯಾರ್ಥಿಗಳು ಗಾಂಜಾ ಬಳಕೆ ಮಾಡುತ್ತಿದ್ದಾರೆ. ಆಡಳಿತ ಯಾವುದೇ ಕ್ರಮ ವಹಿಸಿಲ್ಲ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಗುರುಕುಲ ವಸತಿ ಶಾಲೆಯಲ್ಲಾಗಿರುವ ಘಟನೆಯಿಂದ ಪೋಷಕರು ಕಂಗಾಲಾಗಿದ್ದಾರೆ. ದಾಳಿ ನಡೆಸಿದ ಬಾಲಕ ಗಾಂಜಾ ಬಳಕೆ ಮಾಡುತ್ತಿದ್ದನೋ ಎಂಬುದು ಗೊತ್ತಾಗಿಲ್ಲ. ಪೋಷಕರು ಆರೋಪಿಸಿರಬಹುದು. ಆದರೆ, ವಿಚಾರಣೆಯ ಬಳಿಕವಷ್ಟೇ ಸತ್ಯ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.