ವಾಮನಮುದ್ರೆ ಕಲ್ಲು ಪತ್ತೆ: ಡಾ. ಕೋಲ್ಕಾರ

KannadaprabhaNewsNetwork |  
Published : Mar 09, 2026, 02:15 AM IST
ಕಾರಟಗಿ ತಾಲೂಕಿನ ಬೂದಗುಂಪ ಗ್ರಾಮದ ಹರಿಜನವಾಡಾದಲ್ಲಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಅಗೆಯುವಾಗ ಕಂಡು ಬಂದ ವಾಮನಮುದ್ರೆಕಲ್ಲು | Kannada Prabha

ಸಾರಾಂಶ

ಬಾಲಕನ ಪುಟ್ಟಪಾದಕ್ಕೆ ಎಷ್ಟು ಭೂಮಿ ಹೋಗುತ್ತದೆ ಎಂದುಕೊಂಡ ಬಲಿ ಒಪ್ಪುತ್ತಾನೆ.

ಕಾರಟಗಿ: ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ವಾಮನಮುದ್ರೆಕಲ್ಲು ಪತ್ತೆಯಾಗಿದೆ ಎಂದು ಗ್ರಾಮದ ಹಿರಿಯ ಇತಿಹಾಸ ಸಂಶೋಧಕ ಹಾಗೂ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ.

ಗ್ರಾಮದ ಹರಿಜನವಾಡಾದಲ್ಲಿ ಶನಿವಾರ ಮಧ್ಯಾಹ್ನ ಶಾಲೆಯ ಕಟ್ಟಡಕ್ಕಾಗಿ ಭೂಮಿ ಅಗೆದಾಗ ಈ ಶಿಲ್ಪ ಕಂಡುಬಂದಿದೆ. ಶಿಲ್ಪ ದೊರೆತ ಬಗ್ಗೆ ಗ್ರಾಮಸ್ಥರಾದ ಬಸವಣ್ಣಯ್ಯ ಹಿರೇಮಠ ಮತ್ತು ಜಡೆಪ್ಪ ಮಾಹಿತಿ ನೀಡಿದ್ದಾರೆ. ಸಂಶೋಧಕರ ಗಮನಕ್ಕೆ ತಂದ ಬಳಿಕ ಪರಿಶೀಲಿಸಿದ ಡಾ. ಕೋಲ್ಕಾರ್, ಇದು ವಾಮನಮುದ್ರೆಕಲ್ಲು ಎಂದು ಗುರುತಿಸಿದ್ದಾರೆ.

ಡಾ. ಕೋಲ್ಕಾರ್ ಹೇಳುವಂತೆ, ಕಲ್ಲುಗಳಲ್ಲಿ ವಿಷ್ಣು ಬಲಿಚಕ್ರವರ್ತಿಯ ಸಂಹಾರಕ್ಕಾಗಿ ವಾಮನರೂಪ ಧರಿಸಿ ಯಜ್ಞದ ಸಮಯದಲ್ಲಿ ಆತನಿಗೆ ಮೂರು ಹೆಜ್ಜೆಯ ಭೂಮಿ ದಾನ ಕೇಳುತ್ತಾನೆ. ಬಾಲಕನ ಪುಟ್ಟಪಾದಕ್ಕೆ ಎಷ್ಟು ಭೂಮಿ ಹೋಗುತ್ತದೆ ಎಂದುಕೊಂಡ ಬಲಿ ಒಪ್ಪುತ್ತಾನೆ. ಆಗ ವಾಮನ ರೂಪದ ವಿಷ್ಣು ತ್ರಿವಿಕ್ರಮರೂಪ ತಾಳಿ ಒಂದು ಹೆಜ್ಜೆ ಭೂಮಿಯ ಮೇಲೆ, ಎರಡನೆ ಹೆಜ್ಜೆ ಆಕಾಶದ ಮೇಲೆ ಇಡುತ್ತಾನೆ. ಮೂರನೇ ಹೆಜ್ಜೆ ಇಡಲು ಜಾಗವಿಲ್ಲದ್ದರಿಂದ ಬಲಿ ತನ್ನ ತಲೆಯ ಮೇಲೆ ಇಡಲು ತಿಳಿಸುತ್ತಾನೆ. ಆ ಪ್ರಕಾರ ವಾಮನ ಮೂರನೇ ಹೆಜ್ಜೆ ಬಲಿ ಚಕ್ರವರ್ತಿಯ ತಲೆಯ ಮೇಲೆ ಇರಿಸಿ, ಆತನನ್ನು ಪಾತಾಳಕ್ಕೆ ತುಳಿದು ಸಂಹರಿಸುತ್ತಾನೆ. ಭೂಮಿದಾನಕ್ಕೆ ಸಂಬಂಧಿಸಿದ ಈ ಪುರಾಣ ಪ್ರಸಂಗದ ವಾಮನನ ಚಿತ್ರ ವೈಷ್ಣವ ಮಠ ಇಲ್ಲವೆ ದೇವಾಲಯಗಳ ಭೂಮಿಯ ಗಡಿ ಗುರುತಿಸಲು ಹಾಕುವ ಪರಂಪರೆ ಬೆಳೆದುಬಂದಿತು ಎಂದು ಕೋಲ್ಕಾರ್ ವಿವರಿಸಿದರು.

ಪ್ರಸ್ತುತ ಬೂದಗುಂಪಾದಲ್ಲಿ ಕಂಡುಬಂದಿರುವ ವಾಮನ ಮುದ್ರೆಕಲ್ಲು ಭೂಗಡಿಗೆ ಸಂಬಂಧಿಸಿದೆ. ಹಿಂದೆ ಅಲ್ಲಿ ಯಾವುದೋ ವೈಷ್ಣವ ಮಠ ಇಲ್ಲವೇ ಗುಡಿಗೆ ಸಂಬಂಧಿಸಿದ ಜಮೀನು, ಜಾಗವಿದ್ದಿರಬಹುದು, ಇಲ್ಲವೇ ಈ ಕಲ್ಲನ್ನು ಬೇರೆ ಕಡೆಯಿಂದ ತಂದು ಇಲ್ಲಿ ಹಾಕಿರಬಹುದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುವುದು ಎಂದು ಡಾ. ಕೋಲ್ಕಾರ ತಿಳಿಸಿದ್ದಾರೆ.

ಕಲ್ಲು ನಾಲ್ಕೂವರೆ ಅಡಿ ಎತ್ತರವಾಗಿದೆ. ಅದರ ಮೇಲೆ ಸೂರ್ಯ ಚಂದ್ರರ ಚಿತ್ರಗಳಿವೆ, ಮಧ್ಯದಲ್ಲಿ ವಾಮನ ಚಿತ್ರವಿದೆ. ಬಲಗೈಯಲ್ಲಿ ಕಮಂಡಲ, ಎಡಗೈಯಲ್ಲಿ ಕೊಡೆ ಹಿಡಿದಿದ್ದಾನೆ. ಶೈಲಿಯಿಂದ ಇದು ಸುಮಾರು ೧೭ನೇ ಶತಮಾನದ್ದೆಂದು ಅವರು ತಿಳಿಸಿದ್ದಾರೆ.ಅ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಯೋಜನೆಗಳಿಂದ ಬಡತನ ನಿರ್ಮೂಲನೆ: ರಾಜೇಂದ್ರ ರಾಣೆ
ಸಿದ್ಧಾಂತದ ಅಡಿಯಲ್ಲಿ ಪಕ್ಷ ಕಟ್ಟುವುದು ಬಹಳ ಮುಖ್ಯ