ಚಿಲಿ ದೇಶದ ವಿವಿ ಜೊತೆ ಬಳ್ಳಾರಿ ವಿವಿ ಶೈಕ್ಷಣಿಕ ಒಡಂಬಡಿಕೆ

KannadaprabhaNewsNetwork |  
Published : Jun 06, 2025, 01:09 AM IST
ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಜೀವವಿಜ್ಞಾನ ಸಭಾಂಗಣದಲ್ಲಿ ಬುಧವಾರ ಜರುಗಿದ ಕಾರ್ಯಕ್ರಮದಲ್ಲಿ ಬಳ್ಳಾರಿ ವಿವಿಯು ಚಿಲಿ ದೇಶದ ವಿವಿಯೊಂದಿಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಲಾಯಿತು.  | Kannada Prabha

ಸಾರಾಂಶ

ಚಿಲಿಯ ಬರ್ನಾರ್ಡೊ ಒ ಹಿಗ್ಗಿನ್ಸ್ ವಿಶ್ವವಿದ್ಯಾಲಯದ ಜೊತೆ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದು, ವಿಶ್ವವಿದ್ಯಾಲಯದ ಜೀವವಿಜ್ಞಾನ ಸಭಾಂಗಣದಲ್ಲಿ ಬುಧವಾರ ಒಡಂಬಡಿಕೆಯ ಪ್ರಕ್ರಿಯೆ ಜರುಗಿತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಚಿಲಿಯ ಬರ್ನಾರ್ಡೊ ಒ ಹಿಗ್ಗಿನ್ಸ್ ವಿಶ್ವವಿದ್ಯಾಲಯದ ಜೊತೆ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದು, ವಿಶ್ವವಿದ್ಯಾಲಯದ ಜೀವವಿಜ್ಞಾನ ಸಭಾಂಗಣದಲ್ಲಿ ಬುಧವಾರ ಒಡಂಬಡಿಕೆಯ ಪ್ರಕ್ರಿಯೆ ಜರುಗಿತು.

ಇದೇ ವೇಳೆ ಮಾತನಾಡಿದ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು, ಶಿಕ್ಷಣದ ಭವಿಷ್ಯ, ಆವಿಷ್ಕಾರಗಳು ಹಾಗೂ ಗುಣಮಟ್ಟದ ಸಂಶೋಧನೆ ಉತ್ತೇಜಿಸಲು ವಿಶ್ವಮಟ್ಟದ ವಿಶ್ವವಿದ್ಯಾಲಯಗಳೊಂದಿಗಿನ ಶೈಕ್ಷಣಿಕ ಒಡಂಬಡಿಕೆಗಳು ಮಹತ್ವದ್ದಾಗಿವೆ ಎಂದು ಅಭಿಪ್ರಾಯಪಟ್ಟರು.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅಂತಾರಾಷ್ಟ್ರೀಯ ವಿವಿಗಳೊಂದಿಗಿನ ಮೂರನೇ ಶೈಕ್ಷಣಿಕ ಒಡಂಬಡಿಕೆಯಾಗಿದೆ. ವಿಶ್ವದ ವಿವಿಧ ವಿವಿಗಳ ಜೊತೆ ಶೈಕ್ಷಣಿಕ ಒಪ್ಪಂದಗಳನ್ನು ಮಾಡಿಕೊಂಡು ಶೈಕ್ಷಣಿಕ ಗುಣಮಟ್ಟವನ್ನು ಮತ್ತಷ್ಟೂ ಸುಧಾರಿಸಿಕೊಳ್ಳುವ ದಿಸೆಯಲ್ಲಿ ವಿವಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಗುಣಮಟ್ಟದ ಸಂಶೋಧನಾ ಲೇಖನಗಳು ಮತ್ತು ಉತ್ತಮ ಶಿಕ್ಷಣಕ್ಕೆ ಬೇಕಾದ ಅಂಶಗಳನ್ನು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲು ಸಹ ಅಂತಾರಾಷ್ಟ್ರೀಯ ಮಟ್ಟದ ಒಡಂಬಡಿಕೆಗಳು ಹೆಚ್ಚು ಸಹಕಾರಿಯಾಗಲಿವೆ.

ಬಳ್ಳಾರಿ ವಿವಿಯನ್ನು ಮಾದರಿ ವಿವಿಯನ್ನಾಗಿಸುವ ಸಂಕಲ್ಪ ನಮ್ಮದಾಗಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಗುಣಮಟ್ಟದ ಜೊತೆಗೆ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಅನುಕೂಲತೆಗಳನ್ನು ಕಲ್ಪಿಸಿಕೊಡಲು ವಿವಿ ಅವಿರತವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಬರ್ನಾರ್ಡೊ ಒ ಹಿಗ್ಗಿನ್ಸ್ ವಿಶ್ವವಿದ್ಯಾಲಯದ ಪ್ರೊ. ಸೀಸರ್ ಮೊರೇಲ್ಸ್ ವರ್ಡೆಜೊ ಮಾತನಾಡಿ, ಉನ್ನತ ಶಿಕ್ಷಣವನ್ನು ಜಗತ್ತಿನ ವಿಶ್ವವಿದ್ಯಾಲಯಗಳೊಂದಿಗೆ ಹಂಚಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಬೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದರಿಂದ ಜಾಗತಿಕ ಮಟ್ಟದ ಸಂಶೋಧನೆಗಳಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ವಿವಿಯ ಮೌಲ್ಯಮಾಪನ ಕುಲಸಚಿವ ಡಾ. ಎನ್.ಎಂ. ಸಾಲಿ, ಶುದ್ಧ ವಿಜ್ಞಾನ ನಿಕಾಯದ ಡೀನರಾದ ಡಾ. ಹನುಮೇಶ್ ವೈದ್ಯ ಉಪಸ್ಥಿತರಿದ್ದರು.

ಸುನಿಲ್ ಕುಮಾರ್ ಕೆ. ಕಾರ್ಯಕ್ರಮ ನಿರ್ವಹಿಸಿದರು. ಔದ್ಯೋಗಿಕ ರಸಾಯನಶಾಸ್ತ್ರದ ಮುಖ್ಯಸ್ಥ ಪ್ರೊ. ಅಂಶುಮಾಲಿ ಅತಿಥಿಯನ್ನು ಪರಿಚಯಿಸಿದರು.

ವಿವಿಧ ನಿಕಾಯಗಳ ಡೀನರು, ಎಲ್ಲ ವಿಜ್ಞಾನ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮುನಿರಾಜು ಹಾಗೂ ಬರ್ನಾರ್ಡೊ ಒ ಹಿಗ್ಗಿನ್ಸ್ ವಿಶ್ವವಿದ್ಯಾಲಯದ ನಿರ್ದೇಶಕರು ಶೈಕ್ಷಣಿಕ ಒಡಂಬಡಿಕೆಗೆ ಪರಸ್ಪರ ಸಹಿ ಹಾಕುವುದರ ಮೂಲಕ ಒಪ್ಪಂದ ಮಾಡಿಕೊಳ್ಳಲಾಯಿತು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ