ಕನ್ನಡಪ್ರಭ ವಾರ್ತೆ ಬೇಲೂರು
ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವಸ್ವಾಮಿಯ ನಾಡ ರಥೋತ್ಸವ ಸಹಸ್ರಾರು ಭಕ್ತರ ನಡುವೆ ಶುಕ್ರವಾರ ಅದ್ಧೂರಿಯಾಗಿ ನಡೆದು ಸ್ವಸ್ಥಾನಕ್ಕೆ ಸೇರಲ್ಪಟ್ಟಿತು.ಶ್ರೀ ಚನ್ನಕೇಶವಸ್ವಾಮಿ ನಾಡಿನ ದಿವ್ಯ ರಥೋತ್ಸವ ಮಧ್ಯಾಹ್ನ 3. 30ಕ್ಕೆ ಆರಂಭಗೊಂಡು ದೇಗುಲ ಮೂರು ಮೂಲೆಯನ್ನು ಸುತ್ತಿ ನಂತರ ಸ್ವಸ್ಥಾನಕ್ಕೆ ತಂದು ನಿಲ್ಲಿಸಲಾಯಿತು ಸಲಾಯಿತು.
ನಾಡ ರಥಕ್ಕೆ ಚಾಲನೆ:ಸುತ್ತಮುತ್ತ ಗ್ರಾಮದಿಂದ ಬಂದಿದ್ದ ನಾಡಪಟೇಲರು ಹಾಗೂ ಭಕ್ತರು ಬೆಳಗಿನಿಂದಲೇ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಬಳಿ ಜಮಾಯಿಸಿದ್ದರು. ಮಧ್ಯಾಹ್ನದ ವೇಳೆಗೆ ದೇಗುಲ ಸುತ್ತ ಜನಸಾಗರವೇ ನೆರೆದಿತ್ತು. ಶ್ರೀಯವರ ದಿವ್ಯ ರಥವನ್ನು ಶುಕ್ರವಾರ ಮಧ್ಯಾಹ್ನ 3.30ರ ಸಮಯದಲ್ಲಿ ಎಳೆಯಲು ಚಾಲನೆ ನೀಡಲಾಯಿತು.ರಥವನ್ನು ಎಳೆಯುವ ಸಂದರ್ಭದಲ್ಲಿ ಭಕ್ತರು ಗೋವಿಂದ ನಾಮಸ್ಮರಣೆ ಮಾಡಿದರು. ದೇವರಿಗೆ ಬಾಳೆಹಣ್ಣು, ಧವನವನ್ನು ಎಸೆದು ಭಕ್ತಿಭಾವವನ್ನು ಮೆರೆದರು. ಬಯಲು ರಂಗಮಂದಿರದ ಮೂಲೆಯಿಂದ ಹೊರಟ ರಥವು ನಂತರ ದೇವಸ್ಥಾನದ ಹಿಂಭಾಗವನ್ನು ದಾಟಿ ಕಾಮನ ಮೂಲೆ ಬಳಸಿಕೊಂಡು ರಥದ ಮನೆ ಜಾಗದ ಮುಂಭಾಗ ತಂದು ನಿಲ್ಲಿಸಲಾಯಿತು.
ವಿಷ್ಣು ಮೋಹಿನಿ ಅವತಾರ:ಗುರುವಾರ ನಡೆದ ಬ್ರಹ್ಮ ರಥೋತ್ಸವದಂದು ರಥವನ್ನು ರಂಗಮಂದಿರ ಮುಂಭಾಗದವರೆಗೆ ಎಳದು ನಿಲ್ಲಿಸಲಾಗುತ್ತದೆ. ರಥ ನಿಲ್ಲುವ ಜಾಗವು- ಶ್ರೀ ವಿಷ್ಣು ಭಗವಾನ್ ಮೋಹಿನಿ ಅವತಾರವನ್ನು ತಾಳಿ ಭಸ್ಮಾಸುರನ್ನು ಕೊಂದ ಸ್ಥಳ ಎಂಬ ಪ್ರತೀತಿಯಿದೆ. ಅಲ್ಲದೆ ವಾರ, ತಿಥಿ, ನಕ್ಷತ್ರದ ಶುಭಗಳಿಗೆಯನ್ನು ನೋಡಿ ರಥವನ್ನು ಎಳೆಯುವುದರಿಂದ ಗಳಿಗೆ ತೇರು ಎಂದು ಕರೆಯಲಾಗುತ್ತದೆ. ಶುಕ್ರವಾರ ನಡೆದ ನಾಡಿನ ತೇರನ್ನು ಎಳೆಯಲು ಸಮಯ, ಶಾಸ್ತ್ರ ನಿಗದಿ ಇರುವುದಿಲ್ಲ.
ನಾಡಪಟೇಲರಿಗೆ ಗೌರವ :ಸುತ್ತಮುತ್ತ ನಾಡಿನ ಪಟೇಲರು ಬಂದು ಪ್ರಾರ್ಥನೆ ಸಲ್ಲಿಸಿ ಗೌರವ ಪಡೆದ ನಂತರ ರಥ ಎಳೆಯುವುದು ವಾಡಿಕೆಯಾಗಿ ಬೆಳೆದು ಬಂದಿದೆ. ನಾಡ ತೇರಿಗೆ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ನಾಡಗೌಡರನ್ನು ಪ್ರಮುಖ ದಿಕ್ಕುಗಳ ಪುರ ಪ್ರವೇಶದಲ್ಲಿ ಗೌರವದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಗ್ರಾಮಗಳ ಸುತ್ತಮುತ್ತ ಪಟೇಲರು ಬೃಹತ್ ಹಾರವನ್ನು ವಾದ್ಯ, ಸಂಗೀತದೊಡನೆ ಟ್ರ್ಯಾಕ್ಟರ್‌ನಲ್ಲಿ ತಂದು ಅರ್ಪಿಸಿದ ನಂತರ ಎಳೆಯಲು ಚಾಲನೆ ನೀಡಲಾಯಿತು.ಬಿಗಿ ಬಂದೋಬಸ್ತ್:
ಶ್ರೀ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಭಾರಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ದೇಗುಲ ಮುಂಭಾಗದವರೆಗೆ ವಾಹನಗಳನ್ನು ನಿಷೇಧಿಸಲಾಗಿತ್ತು. ದೇಗುಲದ ಸುತ್ತ ವಾಹನಗಳ ವಿಲುಗಡೆಯನ್ನು ಮಾಡದಂತೆ ಸೂಚಿಸಲಾಗಿತ್ತು. ಪಾರ್ಕಿಂಗ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗಿತ್ತು . ಪ್ರತಿ ರಥೋತ್ಸವ ಸಂದರ್ಭದಲ್ಲಿ ಸರಗಳರು ಹಾಗೂ ಪಿಕ್ ಪ್ಯಾಕೆಟ್ ಸರಗಳ್ಳರ ಹಾವಳಿ ಹೆಚ್ಚಾಗಿತ್ತು ಆದರೆ ಈ ಬಾರಿ ಅಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರಲಿಲ್ಲಸ್ವಾಗತ ಕಮಾನು ನಿರ್ಮಾಣ:
ಈ ಬಾರಿ ರಥೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿತ್ತು. ಬಗೆಬಗೆಯ ವಿದ್ಯುತ್ ದೀಪಗಳಿಂದ ಪಟ್ಟಣದ ಪ್ರಮುಖ ಬೀದಿಗಳನ್ನು ಅಲಂಕರಿಸಲಾಗಿತ್ತು. ಸಹಸ್ರಾರು ಜನರು ಬರುತ್ತಿದ್ದರಿಂದ ತ್ಯಾಜ್ಯ ವಸ್ತುಗಳ ರಾಶಿ ಹೆಚ್ಚಾಗಿತ್ತು. ಆದರೆ ಪಟ್ಟಣ ಪುರಸಭೆಯ ಸಿಬ್ಬಂದಿ ಹೆಚ್ಚು ಪರಿಶ್ರಮವನ್ನು ಹಾಕಿ ಸ್ವಚ್ಛತೆ ಮಾಡಿ ಮೆಚ್ಚುಗೆಗೆ ಪಾತ್ರರಾದರು.ಮಜ್ಜಿಗೆ ಉಪಹಾರ ವಿತರಣೆ:
ವಿವಿಧ ಸಂಘಟನೆಗಳು, ಸಂಘಸಂಸ್ಥೆಗಳು, ಎಸ್‌ಬಿಐ ಬ್ಯಾಂಕ್, ಲಕ್ಷ್ಮಿ ಮೆಡಿಕಲ್ ಸೇರಿದಂತೆ ಇತರ ಪ್ರಮುಖರು ಬಿಸಿಲಲ್ಲಿ ಬಾಯಾರಿದ ಭಕ್ತರಿಗೆ ತಂಪಾದ ಮಜ್ಜಿಗೆ ಪಾನಕ ಹಾಗೂ ಬೆಳಗ್ಗೆ ಉಪಹಾರ ಮಧ್ಯಾಹ್ನ ಪ್ರಸಾದ ವಿತರಣೆಯ ವ್ಯವಸ್ಥೆಯನ್ನು ಏರ್ಪಾಡು ಮಾಡಿದ್ದರು. ಕಳೆದ ವರ್ಷದಂತೆ ಈ ಬಾರಿ ತಿಂದ ತಟ್ಟೆಯನ್ನು ಎಲ್ಲೆಂದರಲ್ಲೂ ಬಿಸಾಡದೆ ಸೂಕ್ತ ಸ್ಥಳದಲ್ಲಿ ಹಾಕುತ್ತಿದ್ದು ಕಂಡು ಬಂತು.