69 ವರ್ಷಗಳ ನಂತರ ಬೆಂಗಳೂರು ಪೊಲೀಸ್ ಇಲಾಖೆ ಮೂರು ಹೋಳು

KannadaprabhaNewsNetwork |  
Published : Jul 11, 2026, 03:45 AM IST
ಕಮಿಷನರ್‌ ಕಚೇರಿ  | Kannada Prabha

ಸಾರಾಂಶ

ರಾಜಧಾನಿ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡಮಟ್ಟದ ಬದಲಾವಣೆಗೆ ರಾಜ್ಯ ಸರ್ಕಾರ ಯೋಜಿಸಿದ್ದು, ಮಹಾರಾಷ್ಟ್ರದ ಮುಂಬೈ ಮಾದರಿಯಲ್ಲಿ ‘ಬೆಂಗಳೂರು ಕಮೀಷನರೇಟ್’ ವಿಭಜನೆಗೆ ಮಹತ್ವದ ತೀರ್ಮಾನಕ್ಕೆ ಬಂದಿದೆ.

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡಮಟ್ಟದ ಬದಲಾವಣೆಗೆ ರಾಜ್ಯ ಸರ್ಕಾರ ಯೋಜಿಸಿದ್ದು, ಮಹಾರಾಷ್ಟ್ರದ ಮುಂಬೈ ಮಾದರಿಯಲ್ಲಿ ‘ಬೆಂಗಳೂರು ಕಮೀಷನರೇಟ್’ ವಿಭಜನೆಗೆ ಮಹತ್ವದ ತೀರ್ಮಾನಕ್ಕೆ ಬಂದಿದೆ.

ಈ ಸಂಬಂಧ ಕೆಲವೇ ದಿನಗಳಲ್ಲಿ ಅಂತಿಮ ಆದೇಶ ಹೊರಬೀಳಲಿದ್ದು, ಎರಡು ಅಥವಾ ಮೂರು ಕಮೀಷನರ್‌ಗಳು ಹಾಗೂ ಸಂಚಾರ ವಿಭಾಗಕ್ಕೆ ಪ್ರತ್ಯೇಕವಾಗಿ ಡಿಜಿಪಿ ಮಟ್ಟದ ಅಧಿಕಾರಿಯನ್ನು ವಿಶೇಷ ಆಯುಕ್ತರಾಗಿ ನೇಮಿಸುವ ಸಾಧ್ಯತೆಗಳಿವೆ.

ಜಾಗತಿಕ ಮಟ್ಟದಲ್ಲಿ ನಾಗಲೋಟದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದ ಸುರಕ್ಷತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಕಮೀಷನರೇಟ್‌ ವಿಭಜನೆಗೆ ಅಗತ್ಯವಿದೆ. ಅದೇ ರೀತಿ ಮೂಲಭೂತ ಸಮಸ್ಯೆಯಾಗಿ ಕಾಡುತ್ತಿರುವ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಹಿರಿಯ ಐಪಿಎಸ್ ಅಧಿಕಾರಿಗೆ ಸ್ವತಂತ್ರ ನಿರ್ವಹಣೆಗೆ ವಹಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ,ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಚಿಂತನ ಮಂಥನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮುಂಬೈ ಮಾದರಿಯಲ್ಲಿ ಕಮೀಷನರೇಟ್ ವಿಭಜನೆ ಬಹುತೇಕ ಖಚಿತವಾಗಿದೆ. ಆದರೆ ಎರಡು ಅಥವಾ ಮೂರು ಕಮೀಷನರೇಟ್ ಸೃಜಿಸಬೇಕೇ ಎಂಬುದು ಇನ್ನು ತೀರ್ಮಾನವಾಗಿಲ್ಲ. ಸಂಚಾರ ವಿಭಾಗಕ್ಕೆ ವಿಶೇಷ ಆಯುಕ್ತರ ನೇಮಕ ಅಂತಿಮವಾಗಿದ್ದು, ಈ ಹುದ್ದೆಗೆ ಡಿಜಿಪಿ ಹಾಗೂ ಕೆಲ ಎಡಿಜಿಪಿ ಮಟ್ಟದ ಅಧಿಕಾರಿಗಳು ಹೆಸರು ಮುಂಚೂಣಿಗೆ ಬಂದಿದೆ. ಅಲ್ಲದೆ ಸರ್ಕಾರದ ಉನ್ನತ ಮಟ್ಟದಲ್ಲೇ ವಿಶೇಷ ಆಯುಕ್ತರಾಗಲೂ ಹಿರಿಯ ಅಧಿಕಾರಿಗಳು ಲಾಬಿ ಮಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರದ್ದುಗೊಳಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚಿಸಿದ ಆರಂಭದಲ್ಲೇ ಪೊಲೀಸ್ ಕಮೀಷನರೇಟ್ ವಿಭಜನೆಗೂ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಇದಕ್ಕೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಪು ನಿಶಾನೆ ತೋರಿದ ಪರಿಣಾಮ ವಿಂಗಡಿಸುವ ಪ್ರಸ್ತಾಪನೆ ತಣ್ಣಾಗಿತ್ತು. ಆದರೆ ಜಿಬಿಎ ರಚನೆಯ ಮೂಲ ಪುರುಷರಾಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕಮೀಷನರೇಟ್ ವಿಭಜನೆಗೆ ಒಲವು ತೋರಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

69 ವರ್ಷಗಳ ಬಳಿಕ ವಿಭಜನೆ

1963ರಲ್ಲಿ ಬೆಂಗಳೂರು ನಗರದ ಕಮೀಷನರೇಟ್ ಅನ್ನು ಸರ್ಕಾರ ಸ್ಥಾಪಿಸಿತ್ತು. ಆನಂತರ ಕಾಲಾನು ಕಾಲಕ್ಕೆ ಕಮೀಷನರೇಟ್ ಆಡಳಿತದಲ್ಲಿ ಬದಲಾವಣೆಗಳಾಗಿವೆ. ಇಲ್ಲಿ ಹೊಸ ಡಿಸಿಪಿ ವಿಭಾಗಗಳು, ಹೆಚ್ಚುವರಿ ಆಯುಕ್ತ, ಜಂಟಿ ಆಯುಕ್ತರ ಹುದ್ದೆಗಳು ಸೃಜನೆಯಾಗಿದ್ದವು. ಆದರೆ ಇಡೀ ಕಮೀಷನರೇಟ್‌ ಅನ್ನು ವಿಭಜಿಸುವ ತೀರ್ಮಾನಕ್ಕೆ ಸರ್ಕಾರಗಳು ಬಂದಿರಲಿಲ್ಲ. ಈಗ 69 ವರ್ಷಗಳ ಬಳಿಕ ಮೊದಲ ಬಾರಿಗೆ ಕಮೀಷನರೇಟ್ ಹೋಳಾಗುವ ಸಾಧ್ಯತೆಗಳು ಕಂಡು ಬಂದಿದೆ. ಪ್ರಸುತ್ತ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾನೂನು ವಿಭಾಗದ 11 ಡಿಸಿಪಿಗಳು ಹಾಗೂ ಸಂಚಾರದ ನಾಲ್ಕು ಡಿಸಿಪಿ ವಲಯಗಳಿವೆ. ಕಮೀಷನರ್ ಹುದ್ದೆಯೂ ಎಡಿಜಿಪಿ ಮಟ್ಟದ ಅಧಿಕಾರಿ ಇದ್ದಾರೆ. ಈಗ ವಿಭಜಿಸಿ ಸೃಜನೆಯಾಗುವ ಕಮೀಷನರೇಟ್‌ಗಳಿಗೆ ಎಡಿಜಿಪಿ ಅಥವಾ ಐಜಿಪಿ ಮಟ್ಟದ ಅಧಿಕಾರಿಗಳನ್ನು ಆಯುಕ್ತರಾಗಿ ನೇಮಿಸಬೇಕೇ ಎಂಬುದು ತೀರ್ಮಾನವಾಗಿಲ್ಲ. ಆದರೆ ಎಡಿಜಿಪಿ ಮಟ್ಟದ ಅಧಿಕಾರಿಗಳ ಹೆಸರು ಮುನ್ನಲೆಗೆ ಬಂದಿವೆ ಎಂದು ತಿಳಿದು ಬಂದಿದೆ. ಮುಂಬೈ ಮಾದರಿ ಹೇಗೆ?

ಮುಂಬೈ ಮಹಾನಗರದ ಕಮೀಷನರೇಟ್ ಅನ್ನು ಜನಸಂಖ್ಯೆಗೆ ಅನುಗುಣವಾಗಿ ವಿಭಜಿಸಿ ಮುಂಬೈ, ನವಿ ಮುಂಬೈ ಹಾಗೂ ಥಾಣೆ ಎಂದು ಮೂರು ಭಾಗ ಮಾಡಲಾಯಿತು. ಅದೇ ರೀತಿ ಬೆಂಗಳೂರಿನಲ್ಲಿ ಸಹ ಪೂರ್ವ, ಪಶ್ಚಿಮ ಅಥವಾ ಕೇಂದ್ರ ಎಂದು 3 ಹೋಳು ಮಾಡಲು ಪ್ರಸ್ತಾಪವಾಗಿದೆ ಎನ್ನಲಾಗಿದೆ.

ಸಂಚಾರಕ್ಕೆ ವಿಶೇಷ ಆಯುಕ್ತ

ಸಂಚಾರ ವಿಭಾಗಕ್ಕೆ ವಿಶೇಷ ಆಯುಕ್ತರನ್ನು ನೇಮಿಸಲು ಸರ್ಕಾರ ಒಲವು ತೋರಿದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ವಿಶೇಷ ಆಯುಕ್ತರಾಗಿ ಡಿಜಿ-ಐಜಿಪಿ ಡಾ.ಎಂ.ಎ. ಸಲೀಂ ಕಾರ್ಯನಿರ್ವಹಿಸಿದ್ದರು. ಅಂದು ಸಂಚಾರ ವ್ಯವಸ್ಥೆ ಬಗ್ಗೆ ಜನಾಕ್ರೋಶ ವ್ಯಕ್ತವಾದ ಕಾರಣ ಸಂಚಾರ ಆಡಳಿತ ಸುಧಾರಣೆ ಹೊಣೆಗಾರಿಕೆಯನ್ನು ಸಲೀಂ ಅವರಿಗೆ ಸರ್ಕಾರ ವಹಿಸಿತ್ತು. ಅದೇ ರೀತಿ ಸಂಚಾರಕ್ಕೆ ವಿಭಾಗದ ಸ್ವತಂತ್ರ ನಿರ್ವಹಣೆಗೆ ಡಿಜಿಪಿ ಅಥವಾ ಎಡಿಜಿಪಿ ಮಟ್ಟದ ಅಧಿಕಾರಿಯನ್ನು ನಿಯೋಜಿಸಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಸಂಚಾರಕ್ಕಾಗಿ ಗೃಹ-ಜಿಬಿಎ ಪೈಪೋಟಿ

ಸಂಚಾರ ಪೊಲೀಸ್ ಘಟಕದ ಮೇಲುಸ್ತುವಾರಿಗೆ ಗೃಹ ಇಲಾಖೆ ಹಾಗೂ ಬೆಂಗಳೂರು ನಗರದ ಸಚಿವರ ಒಲವು ತೋರಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸ್ ಆಯುಕ್ತರ ಆಡಳಿತದಿಂದ ಸಂಚಾರ ಪೊಲೀಸ್ ಘಟಕವನ್ನು ಪ್ರತ್ಯೇಕಗೊಳಿಸಿ ಜಿಬಿಎ ವ್ಯಾಪ್ತಿಗೊಳಪಡಿಸುವಂತೆ ಬೆಂಗಳೂರು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆ ಸಹ ಪ್ರಮುಖವಾಗಿದೆ. ಇದರ ಪರಿಹಾರಕ್ಕೆ ಸಂಚಾರ ಪೊಲೀಸ್‌ ಘಟಕದ ನಿರ್ವಹಣೆ ಹೊಣೆಗಾರಿಕೆ ಕೊಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಗೃಹ ಇಲಾಖೆ ಅಧಿಕಾರಿಗಳು ಆಕ್ಷೇಪಿಸಿದ್ದಾರೆ. ಪೊಲೀಸ್ ವಿಭಾಗದ ಒಬ್ಬರೇ ಬಾಸ್ ಇರಬೇಕು. ಇಲ್ಲದೆ ಹೋದರೆ ಕಾನೂನು ಮತ್ತು ಸುವ್ಯವಸ್ಥೆಯ ತಾಳ-ಮೇಳ ತಪ್ಪಲಿದೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನಾಥ ವಾಹನಗಳ ತೆರವು ಆರಂಭಿಸಿದ ಜಿಬಿಎ
10ನೇ ದಿನ 26 ಕಿ.ಮೀ ಫುಟ್ಪಾತ್‌ ಒತ್ತುವರಿ ತೆರವು