ಕನ್ನಡಪ್ರಭ ವಾರ್ತೆ ಬೆಂಗಳೂರು
ಅಯೋಧ್ಯೆಯಲ್ಲಿ ಸೋಮವಾರ ನಡೆಯಲಿರುವ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಡೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಕೇಸರಿಮಯ, ರಾಮಮಯವಾಗಿದೆ. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವ ದೇವಸ್ಥಾನಗಳಲ್ಲಿ ಸೋಮವಾರ ವಿಶೇಷ ಪೂಜೆ ನಡೆಸಲು ಎಲ್ಲ ಸಿದ್ಧತೆ ಮಾಡಲಾಗಿದೆ. ವಿಶೇಷವಾಗಿ ಪ್ರಾಣ ಪ್ರತಿಷ್ಠಾನೆಯ ನೇರ ಪ್ರಸಾರ ವೀಕ್ಷಣೆಗೆ ನೂರಾರು ಕಡೆ ವ್ಯವಸ್ಥೆ ಮಾಡಲಾಗಿದೆ.ನಗರದ ಬಹುತೇಕ ಬಡಾವಣೆಗಳಲ್ಲಿ ಪ್ರತಿಷ್ಠಾಪನೆ ಪ್ರಯುಕ್ತ ಒಂದಲ್ಲಾ ಒಂದು ಬಗೆಯ ಕಾರ್ಯಕ್ರಮ ಏರ್ಪಾಡಾಗಿದೆ. ದೇವಸ್ಥಾನಗಳಲ್ಲಿ ರಾಮನಾಮ ಸಂಕೀರ್ತನೆ ಸೇರಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಬೆಳಗ್ಗೆ 9ರಿಂದಲೇ ಪ್ರಾಣ ಪ್ರತಿಷ್ಠಾಪನೆ ನೇರ ಪ್ರಸಾರ ವೀಕ್ಷಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಸಾಮೂಹಿಕ ಶ್ರೀರಾಮ ತಾರಕ ಮಂತ್ರ ಪಠಣ, ಪ್ರವಚನ ಆಲಿಕೆ, ಕರಸೇವೆಯ ಹೋರಾಟದ ಮೆಲುಕು, ಅನ್ನಪ್ರಸಾದ ವಿತರಣೆ, ದೀಪೋತ್ಸವ ನಡೆಯಲಿದೆ. ಶ್ರೀರಾಮ ವೇಷಭೂಷಣ ತೊಟ್ಟ ಮಕ್ಕಳ ಮೆರವಣಿಗೆ ಸಹ ಕೆಲವು ಕಡೆ ಏರ್ಪಡಿಸಲಾಗಿದೆ.
ಶ್ರೀರಾಮ, ಆಂಜನೇಯ ದೇವಸ್ಥಾನದಲ್ಲಿ ಪೂಜೆ:ವಿಲ್ಸನ್ ಗಾರ್ಡನ್‌ನಲ್ಲಿರುವ ಶ್ರೀರಾಮ ದೇವಸ್ಥಾನ, ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿರುವ ರಾಮಮಂದಿರ, ಬಸವನಗುಡಿಯ ಮಾಡೆಲ್ ಹೌಸ್ ಸ್ಟ್ರೀಟ್‌ನಲ್ಲಿರುವ ಶ್ರೀರಾಮ ದೇವಸ್ಥಾನ, ಜೆ.ಪಿ.ನಗರ 33ನೇ ಮುಖ್ಯ ರಸ್ತೆಯಲ್ಲಿರುವ ಶ್ರೀರಾಮ ದೇವಸ್ಥಾನ, ಇಂದಿರಾನಗರದ ಧೂಪನಹಳ್ಳಿಯ ಶ್ರೀ ಕೋದಂಡರಾಮ, ಈಜಿಪುರದ ಶ್ರೀರಾಮ ದೇವಸ್ಥಾನ, ವಿದ್ಯಾರಣ್ಯಪುರ ಎಚ್‌ಎಂಟಿ ಲೇಔಟ್‌ನ ಶ್ರೀರಾಮ ಮಂದಿರ, ಕೋರಮಂಗಲದ ಶಶಿಕಲಾ ಅಪಾರ್ಟ್‌ಮೆಂಟ್ ಬಳಿಯಿರುವ ಶ್ರೀರಾಮ ದೇವಸ್ಥಾನ, ಸಿಬಿಐ ಸಮೀಪದಲ್ಲಿರುವ ಆಂಜನೇಯ ದೇವಾಲಯ, ಜಯನಗರ 9ನೇ ಬ್ಲಾಕ್‌ನ ಆಂಜನೇಯ ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ.ಶ್ರೀರಾಮತಾರಕ ಮಹಾಯಾಗ
ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ರಾಣಿ ಅಬ್ಬಕ್ಕ ಮೈದಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಭಾನುವಾರ ತ್ರಯೋದಶ ಲಕ್ಷ ಶ್ರೀರಾಮತಾರಕ ಮಹಾಯಾಗ, ಸೀತಾ ಕಲ್ಯಾಣೋತ್ಸವ ನಡೆಯಿತು. ಸೋಮವಾರ ಶ್ರೀರಾಮತಾರಕ ಮಹಾಯಾಗ ಕಲಶಾಭಿಷೇಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಾಮತಾರಕ ಮಹಾಯಾಗದ ಪೂರ್ಣಾಹುತಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.ಶೇಷಾದ್ರಿಪುರ ಕಾಲೇಜಿನಲ್ಲಿ ಯದುಗಿರಿ ಯತಿರಾಜ ಮಠದಿಂದ ‘ಶ್ರೀರಾಮ ಭಕ್ತಿ ಸಾಮ್ರಾಜ್ಯಮ್’ ವಿಶೇಷ ಪೂಜೆ ನೆರವೇರಿತು. ರಾಮಾನುಜ ನಾರಾಯಣ ಜೀಯರ್ ಸ್ವಾಮೀಜಿ ನೇತೃತ್ವದಲ್ಲಿ ಸೀತಾರಾಮ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ಜರುಗಿಸಲಾಯಿತು. ಕಬ್ಬನ್‌ಪೇಟೆ ಮುಖ್ಯ ರಸ್ತೆಯಲ್ಲಿ ಗಾಣಿಗರಪೇಟೆ ರಾಮ ಭಕ್ತ ಮಂಡಳಿಯಿಂದ ರಾಮ ವಿಗ್ರಹ ಮೆರವಣಿಗೆ ನಡೆಯಿತು.ಮೆರವಣಿಗೆ
ಭಾನುವಾರ ಚಿಕ್ಕಪೇಟೆಯಲ್ಲಿ ಅಶ್ವದ ಮೇಲೆ ಶ್ರೀರಾಮ, ಆಂಜನೇಯ, ಸೀತಾ, ಲಕ್ಷಣರ ವೇಷಧಾರಿ ಚಿಣ್ಣರ ಮೆರವಣಿಗೆ ನಡೆಯಿತು. ಜಯನಗರದಲ್ಲೂ ಶ್ರೀರಾಮನ ವೇಷಧಾರಿಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ನೂರಾರು ಭಕ್ತರು ಸೇರಿ ದಾರಿಯುದ್ದಕ್ಕೂ ಜಯಘೋಷ ಹಾಕಿದರು.ಗಿರಿನಗರದಲ್ಲಿ ಅಯೋಧ್ಯೆ ರಾಮ ಮಂದಿರಗಿರಿನಗರದ ವಾಸವಿ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿ ಅನಾವರಣ ಮಾಡಲಾಗಿದೆ. ರಾಮಭಕ್ತರು ಇಲ್ಲಿಯೇ ರಾಮಮಂದಿರದ ಭವ್ಯತೆ ದರ್ಶಿಸಿ, ರಾಮನನ್ನು ಕಣ್ತುಂಬಿಸಿಕೊಂಡು ಧನ್ಯರಾಗಬಹುದು. ಈ ಅಯೋಧ್ಯೆ ರಾಮಮಂದಿರದ ಪ್ರತಿಕೃತಿಯನ್ನು ವಾಸವಿ ದೇಗುಲದ ಅಳತೆಗೆ ತಕ್ಕಂತೆ ರೂಪಿಸಲಾಗಿದೆ. 24 ಅಡಿ ಉದ್ದ, 18 ಅಡಿ ಅಗಲದ ರಾಮಮಂದಿರದ ಗೋಪುರ 16 ಅಡಿಯಿದೆ. ಜ.22ರಂದು ರಾಮನಿಗೆ ಅಭಿಷೇಕ, ಪೂಜೆ, ಭಜನೆಗಳು ಇಡೀ ದಿನ ನಡೆಯಲಿದ್ದು, ಇದರ ನೇರ ಪ್ರಸಾರದ ಆಯೋಜನೆಯಾಗಿದೆ. ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರು ಉದ್ಘಾಟಿಸುವರು. ಜ.30ರವರೆಗೆ ಜನತೆ ವೀಕ್ಷಿಸಬಹುದು.ಮುಜರಾಯಿ ಇಲಾಖೆಯಿಂದ ಪೂಜೆ
ಮುಜರಾಯಿ ಇಲಾಖೆ ಅಡಿ ಬರುವ ಎಲ್ಲ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್ ಸಮಯದಲ್ಲಿ ಪೂಜೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಎಲ್ಲ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಮಹಾಮಂಗಳಾರತಿ ನಡೆಯಲಿದೆ. ದೇಶಕ್ಕೆ, ರಾಜ್ಯಕ್ಕೆ ಎಲ್ಲರಿಗೂ ಶ್ರೀರಾಮನ ರಕ್ಷಣೆ ಇರಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಇಲಾಖೆ ತಿಳಿಸಿದೆ.ಸಾವಿರ ದೇಗುಲದಲ್ಲಿ ಪೂಜೆವಿಶ್ವ ಹಿಂದೂ ಪರಿಷತ್‌ನಿಂದ ನಗರದ ಒಂದು ಸಾವಿರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆಯ ನೇರಪ್ರಸಾರವನ್ನು ಏರ್ಪಡಿಸಲಾಗುತ್ತಿದೆ. ಜತೆಗೆ ಭಜನೆ, ರಾಮತಾರಕ ಮಂತ್ರ ಪಠಣ ನಡೆಯಲಿದೆ. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುವುದು. ಸಂಜೆ ಎಲ್ಲೆಡೆ ದೀಪೋತ್ಸವ ಏರ್ಪಡಿಸಲಾಗುವುದು ಎಂದು ವಿಹಿಂಪ ತಿಳಿಸಿದೆ. ಅದೇ ರೀತಿ ಶ್ರೀರಾಮ ಸೇವಾ ಮಂಡಳಿ, ಹಿಂದೂ ಜನಜಾಗೃತಿ ವೇದಿಕೆ ಸೇರಿ ಹಲವು ಹಿಂದೂ ಸಂಘಟನೆಗಳು ದೇವಸ್ಥಾನದಲ್ಲಿ ಪೂಜೆ ಏರ್ಪಡಿಸಿವೆ.ಕರಸೇವಕರಿಗೆ ಸನ್ಮಾನ
ಚಂದ್ರಶೇಖರ್ ಅಜಾದ್ ಚಾರಿಟೇಬಲ್ ಟ್ರಸ್ಟ್ ಯಲಹಂಕ ಉಪನಗರದ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಸಂಜೆ 6ಗಂಟೆಗೆ ‘ಕರಸೇವಕರಿಗೆ ಸನ್ಮಾನ’ ಕಾರ್ಯಕ್ರಮ ಏರ್ಪಡಿಸಿದೆ. ಸಪ್ತಋಷಿ ವೈದಿಕ ಆಶ್ರಮದ ರಾಮಾನುಜಾಚಾರ್ಯ ತ್ರಿದಂಡಿ, ಶಾಸಕ ಎಸ್.ಆರ್.ಶ್ರೀನಿವಾಸ್ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2ಕ್ಕೆ ಮದರ್ ಡೈರಿ ಮುಖ್ಯರಸ್ತೆಯ ವೀರಾಂಜನೆಯ ಸ್ವಾಮಿ ದೇಗುಲದಿಂದ ಸಭಾಂಗಣದವರೆಗೆ ಬೆಳ್ಳಿ ರಥ ಶೋಭಾ ಯಾತ್ರೆ, ಕುಂಬ ಕಳಶ ಮೆರವಣಿಗೆ ನಡೆಯಲಿದೆ.ಕಾಫಿಯಲ್ಲಿ ಶ್ರೀರಾಮಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಾಫಿ ಕನೆಕ್ಷನ್ಸ್ ಓವನ್ ಫ್ರೆಷ್ ಕಾಫಿ ಶಾಪ್‌ನಲ್ಲಿ ಕಪ್ ಕಾಫಿಯಲ್ಲಿ ರಾಮ ಮಂದಿರ ಚಿತ್ರಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಇದಕ್ಕೆ ಹದಿನೈದು ದಿನಗಳಿಂದ ಪೂರ್ವಸಿದ್ಧತೆಯೂ ನಡೆದಿದೆ. ರಾತ್ರಿ ಅದನ್ನು ಶುದ್ಧ ಸ್ಥಳದಲ್ಲಿ ಹಾಕಿ ಅಲ್ಲಿ ಸಸಿ ನೆಡಲಾಗುತ್ತಿದೆ ಎಂದು ಕಾಫಿ ಶಾಪ್ ಮಾಲೀಕ ಜೆ.ಕೆ.ಪ್ರಮೋದ್ ತಿಳಿಸಿದರು.ಇಂದು ವಿವಿಧೆಡೆ ಕಾರ್ಯಕ್ರಮ
ಬಸವನಗುಡಿ ದೊಡ್ಡಗಣಪತಿ ದೇವಸ್ಥಾನದಲ್ಲಿ ಶ್ರೀರಾಮನ ವಿಶೇಷ ಪೂಜೆ ಜೊತೆಗೆ ಲಕ್ಷದೀಪೋತ್ಸವ ಆಯೋಜಿಸಲಾಗಿದೆ. ಬನಶಂಕರಿ ಅಮ್ಮನವರ ದೇವಾಲಯದಲ್ಲಿ ರಾಮತಾರಕ ಜಪ, ಮೆರವಣಿಗೆ ನಡೆಯಲಿದೆ. ಬನಶಂಕರಿ 2ನೇ ಹಂತದ ರಾಘವೇಂದ್ರ ಸ್ವಾಮಿಗಳ ಮಠದ ಮೇಲ್ಭಾಗದ ಛತ್ರದಲ್ಲಿ ಸಾಮೂಹಿಕ ಭಜನೆ, ಎಲ್‌ಇಡಿ ಪರದೆಯಲ್ಲಿ ಸಾಮೂಹಿಕ ವೀಕ್ಷಣೆ ಹಾಗೂ ಹೋರಾಟದ ಕಿರುಪರಿಚಯ ಕಾರ್ಯಕ್ರಮ ಏರ್ಪಡಿಸಲಾಗಿದೆ.ಗೋವಿಂದರಾಜನಗರದ ಮಾರುತಿ ಮಂದಿರದಲ್ಲಿ ಬಿಜೆಪಿಯ ಅರುಣ್ ಸೋಮಣ್ಣ ನೇತೃತ್ವದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ನೇರಪ್ರಸಾರ ಏರ್ಪಡಿಸಲಾಗಿದೆ. ಬೆಳಗ್ಗೆ 9ರಿಂದಲೇ ನೇರ ಪ್ರಸಾರ ಇರಲಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಪ್ರಸಾದ ವಿನಿಯೋಗ ನಡೆಸಲಾಗುತ್ತಿದೆ.