ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ - 15 ದಿನದಲ್ಲಿ ವರದಿ ಬಾರದಿದ್ದರೆ ವಿಮಾನಯಾನ ಸಚಿವರ ಭೇಟಿ : ಎಂಬಿಪಾ

Published : Jun 14, 2025, 06:48 AM IST
 Large and Medium Industries Minister MB Patil (Photo/ANI)

ಸಾರಾಂಶ

ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡ ಇನ್ನು 15 ದಿನಗಳಲ್ಲಿ ಅಂತಿಮ ಸ್ಥಳ ನಿಗದಿ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ನೀಡುವ ನಿರೀಕ್ಷೆಯಿದೆ

 ಬೆಂಗಳೂರು : ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡ ಇನ್ನು 15 ದಿನಗಳಲ್ಲಿ ಅಂತಿಮ ಸ್ಥಳ ನಿಗದಿ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ನೀಡುವ ನಿರೀಕ್ಷೆಯಿದೆ. ಒಂದು ವೇಳೆ ವರದಿ ನೀಡದಿದ್ದರೆ, ನಾಗರಿಕ ವಿಮಾನಯಾನ ಸಚಿವರನ್ನು ಭೇಟಿಯಾಗಲು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ನಿರ್ಧರಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಮೇಲಿನ ಒತ್ತಡ ನಿವಾರಣೆಗಾಗಿ ಬೆಂಗಳೂರಿಗಾಗಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಮೂರು ಸ್ಥಳಗಳನ್ನು ಗುರುತಿಸಿ ಎಎಐಗೆ ಕಳುಹಿಸಿತ್ತು. ಎಎಐ ಉನ್ನತ ಮಟ್ಟದ ತಂಡ ಈ ಸ್ಥಳಗಳನ್ನು ಪರಿಶೀಲಿಸಿ, ಒಂದು ತಿಂಗಳಲ್ಲಿ ವರದಿ ನೀಡುವುದಾಗಿ ತಿಳಿಸಿತ್ತು. ಆದರೆ, ಎರಡು ತಿಂಗಳಾದರೂ ಈವರೆಗೆ ಅಂತಿಮ ವರದಿಯನ್ನು ನೀಡಿಲ್ಲ.

ಅನುಮೋದನೆ ನಂತರ ಡಿಎಫ್‌ಆರ್‌:

ಎಎಐ ಸ್ಥಳ ನಿಗದಿ ಮಾಡಿದ ನಂತರ ವಿಮಾನ ನಿಲ್ದಾಣಕ್ಕೆ ವಿವರ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ನವಿ ಮುಂಬೈನ ವಿಮಾನನಿಲ್ದಾಣ ಸೇರಿ ಮತ್ತಿತರ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳನ್ನೂ ಪರಿಶೀಲಿಸಲಾಗುತ್ತದೆ. ಕಾರ್ಯಸಾಧ್ಯತಾ ವರದಿಯಲ್ಲಿ ನಿಗದಿ ಮಾಡಲಾಗುವ ಸ್ಥಳದಲ್ಲಿ ಯಾವ ಭಾಗದಲ್ಲಿ ಟರ್ಮಿನಲ್‌ ನಿರ್ಮಿಸಬೇಕು? ಎಲ್ಲಿ ಎಟಿಸಿ ನಿರ್ಮಿಸಬೇಕು ಎಂಬಂತಹ ಅಂಶಗಳಿರಲಿವೆ. ನಂತರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೂಡಿಕೆ ಆಕರ್ಷಿಸುವುದು ಸೇರಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.

ಯಾವ ಸ್ಥಳಗಳ ಗುರುತು?:

ರಾಜ್ಯ ಸರ್ಕಾರ ಕನಕಪುರ ರಸ್ತೆಯಲ್ಲಿನ ಚೂಡಹಳ್ಳಿ ಮತ್ತು ಸೋಮನಹಳ್ಳಿಯಲ್ಲಿ ಹಾಗೂ ನೆಲಮಂಗಲದ ಕುಣಿಗಲ್‌ ರಸ್ತೆಯಲ್ಲಿ ಸ್ಥಳ ನಿಗದಿ ಮಾಡಿದೆ. ಸೂಕ್ತ ಸ್ಥಳ ಗುರುತಿಸಲು ಕೆಎಸ್‌ಐಐಡಿಸಿಯು ಎಎಐಗೆ 1.21 ಕೋಟಿ ರು. ಶುಲ್ಕ ನೀಡಿದೆ. ಈ ತಂಡ 10 ವರ್ಷಗಳ ಹವಾಮಾನ ವರದಿ, ಜಾಗಗಳ ಜಾಮಿತಿಯ ಲಕ್ಷಣ ವಿವರಿಸುವ ಚಿತ್ರ, ಭಾರತೀಯ ಸರ್ವೇ ಇಲಾಖೆ ನಕ್ಷೆ, ಉದ್ದೇಶಿತ ವಿಮಾನ ನಿಲ್ದಾಣದಲ್ಲಿನ ಕಾರ್ಯಾಚರಣೆ ಸ್ವರೂಪದ ವರದಿ ಪರಿಶೀಲಿಸಿದೆ.

ಬೆಂಗಳೂರಿಗೆ ಎರಡನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಎಎಐನ ಉನ್ನತ ಮಟ್ಟದ ತಂಡದಿಂದ ಸ್ಥಳ ಪರಿಶೀಲಿಸಿ ಎರಡು ತಿಂಗಳಾಗಿದ್ದು, ಸೂಕ್ತ ಸ್ಥಳದ ಕುರಿತಂತೆ ವರದಿ ನೀಡಿಲ್ಲ. ಮುಂದಿನ 15 ದಿನಗಳಲ್ಲಿ ಅಂತಿಮ ವರದಿ ಬರುವ ನಿರೀಕ್ಷೆಯಿದೆ. ಒಂದು ವೇಳೆ ವರದಿ ಬರದಿದ್ದರೆ, ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್‌ಮೋಹನ್‌ ನಾಯ್ಡು ಅವರನ್ನು ಭೇಟಿಯಾಗಿ ಶೀಘ್ರ ವರದಿ ನೀಡುವಂತೆ ಕೋರಲಾಗುವುದು.

- ಎಂ.ಬಿ. ಪಾಟೀಲ್‌. ಮೂಲಸೌಕರ್ಯ ಅಭಿವೃದ್ಧಿ ಸಚಿವ

PREV
Read more Articles on

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ