ಮೂರು ದಿನಗಳ ದಕ್ಷಿಣ ಕುಂಭಮೇಳಕ್ಕೆ ವೈಭವಯುತ ತೆರೆ - ಮಾಘ ಹುಣ್ಣಿಮೆ ದಿನ 2.5 ಲಕ್ಷ ಮಂದಿಯಿಂದ ಪುಣ್ಯಸ್ನಾನ

Published : Feb 13, 2025, 10:18 AM IST
Mahakumb

ಸಾರಾಂಶ

ಮೈಸೂರು ಜಿಲ್ಲೆ ತಿರುಮಕೂಡಲ ಟಿ.ನರಸೀಪುರದಲ್ಲಿ ನಡೆದ ಮೂರು ದಿನಗಳ ಕುಂಭಮೇಳಕ್ಕೆ ಬುಧವಾರ ವೈಭವಯುತ ತೆರೆ ಬಿತ್ತು.

 ಮಹೇಂದ್ರ ದೇವನೂರು

 ಮೈಸೂರು : ಮೈಸೂರು ಜಿಲ್ಲೆ ತಿರುಮಕೂಡಲ ಟಿ.ನರಸೀಪುರದಲ್ಲಿ ನಡೆದ ಮೂರು ದಿನಗಳ ಕುಂಭಮೇಳಕ್ಕೆ ಬುಧವಾರ ವೈಭವಯುತ ತೆರೆ ಬಿತ್ತು. ದಕ್ಷಿಣ ಭಾರತದ ಕುಂಭಮೇಳವಾದ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕಡೆಯ ದಿನವಾದ ಬುಧವಾರ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಂಸದ ಸದಾನಂದ ಗೌಡ ಸೇರಿ ಲಕ್ಷಾಂತರ ಮಂದಿ ಪುಣ್ಯಸ್ನಾನ ಮಾಡಿದರು.

ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿ ಸ್ಫಟಿಕ ಸರೋವರದ ಸಂಗಮವಾದ ಅಗಸ್ತೇಶ್ವರಸ್ವಾಮಿ ದೇವಸ್ಥಾನ ಆವರಣಕ್ಕೆ ಮುಂಜಾನೆಯಿಂದಲೇ ಲಕ್ಷಾಂತರ ಮಂದಿ ಹರಿದು ಬರತೊಡಗಿದರು. ರಾಜ್ಯದ ಮೂಲೆ ಮೂಲೆಯಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು, ಪುಣ್ಯಸ್ನಾನ ಮಾಡಿ ಪುನೀತರಾದರು. ಇದರಿಂದಾಗಿ ಅಗಸ್ತೇಶ್ವರ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಹೆಚ್ಚಿನ ಜನಸಂದಣಿ ಉಂಟಾಯಿತು. ಅನೇಕರು ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಪುಣ್ಯಸ್ನಾನ ಮಾಡಿದರು. ಕೆಲವರು ಭಿಕ್ಷೇಶ್ವರ ದೇವಸ್ಥಾನ ದಡದಲ್ಲಿ ಮಿಂದೆದ್ದರು.

ಬೆಳಗ್ಗೆಯಿಂದಲೇ ಧಾರ್ಮಿಕ ಆಚರಣೆಗಳು ಆರಂಭವಾದವು. ಚಂಡಿಕಾ ಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜಿಸಲಾಯಿತು. ಬಳಿಕ, ಯಾಗಮಂಟಪದಿಂದ ವೇದ ಮಂತ್ರ ಘೋಷಗಳೊಡನೆ ಕೈಲಾಸಾಶ್ರಮ ಮಹಾಸಂಸ್ಥಾನ ಮಠದ ಜಯೇಂದ್ರಪುರಿ ಸ್ವಾಮೀಜಿ ಸಮ್ಮುಖದಲ್ಲಿ ನಡುಹೊಳೆ ಬಸಪ್ಪ ಬಳಿಗೆ ಆಗಮಿಸಿ ನದಿಪೂಜೆ, ಬ್ರಹ್ಮಪೂಜೆ, ದಶೋದ್ಧಾರ ಪೂಜೆ, ದ್ರವ್ಯಧಾತಿ, ಮಹಾಪೂರ್ಣಾಹುತಿ ನಡೆಸಿ, ದೇವತೆಗಳಿಗೆ ಪೂಜೆ ಸಲ್ಲಿಸಲಾಯಿತು.

ನಂತರ, ಬೆಳಗ್ಗೆ 11 ರಿಂದ 11.30ರ ಮೇಷಲಗ್ನದ ಶುಭ ಮುಹೂರ್ತದಲ್ಲಿ ಮಠಾಧೀಶರು, ಸಾಧುಸಂತರು, ವಟುಗಳು ಪುಣ್ಯಸ್ನಾನ ಮಾಡಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಶಿವಾನಂದಪುರಿ ಸ್ವಾಮೀಜಿ, ಕೈಲಾಸನಂದ ಮಠದ ಜಯೇಂದ್ರಪುರಿ ಸ್ವಾಮೀಜಿ ಸೇರಿದಂತೆ ಅನೇಕ ಸಾಧು-ಸಂತರು ಪುಣ್ಯಸ್ನಾನದಲ್ಲಿ ಭಾಗಿಯಾದರು.

ಸಾರ್ವಜನಿಕರಿಗೆ ಮಧ್ಯಾಹ್ನ 1.30 ರಿಂದ 2 ಗಂಟೆವರೆಗೆ ಪುಣ್ಯಸ್ನಾನಕ್ಕೆ ಸಮಯ ನಿಗದಿಪಡಿಸಲಾಗಿತ್ತು. ನಂತರ, ಧರ್ಮಸಭೆ ನಡೆದು, ಕುಂಭಮೇಳಕ್ಕೆ ತೆರೆ ಬಿತ್ತು.

ಟ್ರಾಫಿಕ್‌ ಜಾಮ್‌, ನೂಕು ನುಗ್ಗಲು:

ಇದುವರೆಗಿನ ಕುಂಭಮೇಳದ ಇತಿಹಾಸದಲ್ಲಿಯೇ ಈ ಬಾರಿಯ ಕುಂಭಮೇಳದಲ್ಲಿ ಅತ್ಯಧಿಕ ಜನ ಭೇಟಿ ನೀಡಿದ್ದು, ದಾಖಲೆಯಾಯಿತು. ಪ್ರತಿ ಮೂರು ವರ್ಷಕ್ಕೊಮ್ಮೆ ಮೂರು ದಿನ ಕುಂಭಮೇಳ ನಡೆದರೂ ಇಷ್ಟೊಂದು ಜನರು ಭೇಟಿ ನೀಡಿದ ಉದಾಹರಣೆ ಇಲ್ಲ. ಆದರೆ, ಈ ಬಾರಿ ಗಣ್ಯರ ಸಂಖ್ಯೆಯಂತೆಯೇ ಸಾರ್ವಜನಿಕರ ಸಂಖ್ಯೆಯೂ ಹೆಚ್ಚಾಯಿತು.

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಿಂದ ಪ್ರೇರಿತರಾಗಿ ಮತ್ತು ಅಲ್ಲಿಗೆ ತೆರಳಲು ಸಾಧ್ಯವಾಗದವರು ನರಸೀಪುರಕ್ಕೆ ಭೇಟಿ ನೀಡಿದ್ದರಿಂದ ಹೆಚ್ಚಿನ ಒತ್ತಡ ಉಂಟಾಯಿತು. ಮೊದಲೆರಡು ದಿನ ಅಂದಾಜು ತಲಾ 50 ಸಾವಿರ ಮಂದಿ ಪುಣ್ಯ ಸ್ನಾನ ಮಾಡಿದ್ದರು. ಕೊನೆಯ ದಿನ ಸುಮಾರು 2.50 ಲಕ್ಷ ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಇದರಿಂದಾಗಿ ಪುಣ್ಯಸ್ನಾನಕ್ಕೆ ಸ್ನಾನಘಟ್ಟದ ಬಳಿ ನೂಕು ನುಗ್ಗಲು ಉಂಟಾಯಿತು. ಅಗಸ್ತೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳುವ ಎಲ್ಲಾ ಮಾರ್ಗಗಳಲ್ಲೂ ಕಿ.ಮೀ.ಗಟ್ಟಲೇ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಕಾವೇರಿ ನದಿಗೆ ಕಟ್ಟಲಾಗಿದ್ದ ಸೇತುವೆ ಮೇಲೆಯೂ ವಾಹನಗಳನ್ನು ನಿಲುಗಡೆ ಮಾಡಲಾಗಿತ್ತು. ಮೈಸೂರಿನಿಂದ ತೆರಳುವ ಖಾಸಗಿ ಬಸ್‌ಗಳೂ ಕಡಿಮೆ ದರದಲ್ಲಿ (40 ರೂ.) ತೆರಳಲು ಭಕ್ತರಿಗೆ ಅವಕಾಶ ಮಾಡಿಕೊಟ್ಟಿದ್ದರು. ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಸಂಖ್ಯೆಯೂ ಹೆಚ್ಚಿತ್ತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ