ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು

Published : Dec 22, 2025, 10:26 AM IST
Gold

ಸಾರಾಂಶ

ರಾಜ್ಯದಲ್ಲಿ ವಜ್ರ, ಚಿನ್ನ, ತಾಮ್ರ, ಬಾಕ್ಸೈಟ್‌ ಸೇರಿದಂತೆ ಇನ್ನು ಅನೇಕ ಬೆಲೆಬಾಳುವ ಲೋಹ ನಿಕ್ಷೇಪಗಳನ್ನು ಪತ್ತೆ ಹಚ್ಚಲು ಹೊಸದಾಗಿ ಗಣಿಗಾರಿಕೆ ಸ್ಥಳ ಪ್ರಾಥಮಿಕ ಶೋಧಕ್ಕೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 6.71ಲಕ್ಷ ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದೆ.

 ಲಿಂಗರಾಜು ಕೋರಾ

 ಸುವರ್ಣ‍ ವಿಧಾನಸೌಧ :  ರಾಜ್ಯದಲ್ಲಿ ವಜ್ರ, ಚಿನ್ನ, ತಾಮ್ರ, ಬಾಕ್ಸೈಟ್‌ ಸೇರಿದಂತೆ ಇನ್ನು ಅನೇಕ ಬೆಲೆಬಾಳುವ ಲೋಹ ನಿಕ್ಷೇಪಗಳನ್ನು ಪತ್ತೆ ಹಚ್ಚಲು ಹೊಸದಾಗಿ ಗಣಿಗಾರಿಕೆ ಸ್ಥಳ ಪ್ರಾಥಮಿಕ ಶೋಧಕ್ಕೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 6.71ಲಕ್ಷ ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದೆ.

ಯಾವ ಜಿಲ್ಲೆಗಳಲ್ಲಿ ನಿಕ್ಷೇಪಾನ್ವೇಷಣೆ:

ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ವಿವಿಧೆಡೆ ವಜ್ರದ ನಿಕ್ಷೇಪ ಶೋಧಕ್ಕಾಗಿ 75 ಸಾವಿರ ಹೆಕ್ಟೇರ್‌ ಪ್ರದೇಶ, ಧಾರವಾಡ, ಚಾಮರಾಜನಗರ ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪ ಶೋಧನೆಗಾಗಿ ತಲಾ 10,000 ಹೆಕ್ಟೇರ್‌ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ವಿಜಯನಗರ ಜಿಲ್ಲೆಯಲ್ಲಿ ಬಾಕ್ಸೈಟ್‌ ಮತ್ತು ತಾಮ್ರ ನಿಕ್ಷೇಪ ಪತ್ತೆಗೆ 22,000ಕ್ಕೂ ಹೆಚ್ಚು ಹೆಕ್ಟೇರ್‌, ರಾಮನಗರ, ಹಾಸನ, ಬಾಗಲಕೋಟೆ, ರಾಯಚೂರು, ಯಾದಗಿರಿ, ತುಮಕೂರು ಜಿಲ್ಲೆಗಳಲ್ಲಿ ಭೂಗರ್ಭದಲ್ಲಿನ ಅಪರೂಪದ ವಸ್ತು ಮತ್ತು ಲೋಹಗಳ ಪತ್ತೆಗೆ ತಲಾ 10-12 ಸಾವಿರ ಹೆಕ್ಟೇರ್‌ ಪ್ರದೇಶಗಳನ್ನು ಗುರುತಿಸಲಾಗಿದೆ.  

ಇಷ್ಟೇ ಅಲ್ಲ ಬೆಳಗಾವಿಯಲ್ಲಿ ವನೇಡಿಯಂ ಪತ್ತೆಗೆ 10 ಸಾವಿರ ಹೆಕ್ಟೇರ್‌, ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳ ವಿವಿಧೆಡೆ ಇತರೆ ಖನಿಜಗಳಿರುವ ನಿರೀಕ್ಷೆಯಲ್ಲಿ ಪ್ರಾಥಮಿಕ ಶೋಧಕ್ಕೆ ಒಟ್ಟಾರೆ 2.95 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ನಿಗದಿಪಡಿಸಲಾಗಿದೆ. ರಾಯಚೂರು, ಕಲಬುರಗಿಯಲ್ಲಿ ಯುರೇನಿಯಂ ಶೋಧಕ್ಕೆ ಸಾವಿರಾರು ಹೆಕ್ಟೇರ್‌ ಪ್ರದೇಶ ಆಯ್ಕೆ ಮಾಡಲಾಗಿದೆ. ಹೀಗೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕ್ರೋಮೈಟ್‌, ಕಬ್ಬಿಣದ ಅದಿರು, ಪ್ಲಾಟಿನಂ, ತಾಮ್ರ, ಬಾಕ್ಸೈಟ್‌, ಕಯನೈಟ್‌, ಸಿಲ್ಲಿಮನೈಟ್‌, ಟಂಗ್‌ಸ್ಟನ್‌, ಬೇಸ್‌ಮೆಟಲ್‌, ನಿಕಲ್‌, ಕೋಬಾಲ್ಟ್‌, ಯುರೇನಿಯಂ ಹೀಗೆ ಖನಿಜ, ಲೋಹ ನಿಕ್ಷೇಪಗಳ ಪತ್ತೆಗೆ ಕನಿಷ್ಠ 75 ಹೆಕ್ಟೇರ್‌ನಿಂದ ಗರಿಷ್ಠ 15 ಹೆಕ್ಟೇರ್‌ವರೆಗೂ ಸ್ಥಳ ಗುರುತಿಸಲಾಗಿದೆ.

ಮೇಲ್ಮನೆಯಲ್ಲಿ ಸದಸ್ಯರೊಬ್ಬರು ಕೇಳಿರುವ ಪ್ರಶ್ನೆಗೆ ಸರ್ಕಾರ ಜಿಲ್ಲಾವಾರು ವಿವರಣೆಯೊಂದಿಗೆ ಈ ಉತ್ತರ ನೀಡಿದೆ. ಕೇಂದ್ರ ಮತ್ತು ರಾಜ್ಯ ಖನಿಜ ಅನ್ವೇಷಣಾ ಸಂಸ್ಥೆಗಳಿಂದ ಖನಿಜ ಶೋಧಕ್ಕಾಗಿ ಒಟ್ಟಾರೆ 6,71,300 ಹೆಕ್ಟೇರ್‌ ಪ್ರದೇಶದ ಜಾಗವನ್ನು ಗುರುತಿಸಲಾಗಿದೆ ಎಂದು ತಿಳಿಸಿದೆ.

ಪ್ರಾಥಮಿಕ ಪರೀಕ್ಷೆಯಲ್ಲಿ ವಜ್ರ, ಚಿನ್ನ ಇರುವಿಕೆ ಪತ್ತೆ:

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಜಿ4 ಲೆವೆಲ್ ಸರ್ವೇ ಅಂತ ಹೇಳಿ ವಿಜ್ಞಾನಿಗಳು ರಾಜ್ಯದ ವಿವಿಧೆಡೆ ಕ್ಯಾಪ್ ಮಾಡಿ ಪರಿಶೀಲಿಸಿದಾಗ ಅಲ್ಲಿ ಸಿಕ್ಕ ಮಾದರಿಗಳ ಮೇಲೆ ಪರಿಶೀಲನೆ ನಡೆಸಿ ವರದಿ ನೀಡುತ್ತಾರೆ. ಪ್ರಾಥಮಿಕ ಹಂತದ ಅನ್ವೇಷಣೆಯಲ್ಲಿ ವಜ್ರ, ಚಿನ್ನ ಸೇರಿದಂತೆ ಇನ್ನು ಅನೇಕ ಲೋಹ, ಖನಿಜಗಳಿಗೆ ಸಂಬಂಧಿಸಿದ ಅಂಶಗಳು ಪತ್ತೆಯಾಗಿವೆ. ಅದರ ಆಧಾರದಲ್ಲಿ ಅವರು ಮುಂದೆ ಇನ್ನೂ 3 ಹಂತಗಳಲ್ಲಿ ಶೋಧ ಕಾರ್ಯ ನಡೆಸುತ್ತಾರೆ. ಆಗ ಆಯಾ ಲೋಹ, ಖನಿಜಾಂಶಗಳು ಕಂಡುಬಂದಿರುವ ಕೋರ್ ಏರಿಯಾದಲ್ಲಿ ಎಷ್ಟು ಟನ್ ಖನಿಜ, ಲೋಹ ಸಿಗುತ್ತದೆ ಹಾಗೂ ಅದು ಯಾವ ಗ್ರೇಡ್‌ನದ್ದು ಎಂಬುದು ಖಚಿತವಾಗಬೇಕಿದೆ.

ಶೋಧ ಕಾರ್ಯ ಪೂರ್ಣಕ್ಕೆ ಕನಿಷ್ಠ 2 ವರ್ಷ ಬೇಕಿದೆ. ಗಣಿಗಾರಿಕೆ ನಡೆಸಬಹುದು ಎಂದು ಅವರು ವರದಿ ನೀಡಿದರೆ ಕೇಂದ್ರ, ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಬಹುದಾಗಿರುತ್ತದೆ ಎಂದರು.

ಪ್ರಸ್ತುತ 32,449 ಹೆಕ್ಟೇರ್‌ನಲ್ಲಿ ಗಣಿಗಾರಿಕೆ

ಪ್ರಸ್ತುತ ರಾಜ್ಯದಲ್ಲಿ ಈಗಾಗಲೇ ಮುಖ್ಯ ಖನಿಜಗಳಿಗೆ ಸಂಬಂಧಿಸಿದಂತೆ 24,911 ಹೆಕ್ಟೇರ್‌ ಹಾಗೂ ಉಪ ಖನಿಜಗಳಿಗೆ ಸಂಬಂಧಿಸಿದಂತೆ 7537 ಹೆಕ್ಟೇರ್‌ ಪ್ರದೇಶ ಸೇರಿ ಒಟ್ಟು 32,449 ಹೆಕ್ಟೇರ್‌ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಈ ಗಣಿಗಾರಿಕೆಯಿಂದ ಪ್ರತಿ ವರ್ಷ 7500 ಕೋಟಿ ರು.ಗಳಿಗೂ ಹೆಚ್ಚು ಆದಾಯ ರಾಜ್ಯ ಸರ್ಕಾರಕ್ಕೆ ಬರುತ್ತಿದೆ. ಕಳೆದ 3 ವರ್ಷಗಳಲ್ಲಿ ಸಂಗ್ರಹವಾದ ರಾಜಧನವನ್ನು ನೋಡುವುದಾದರೆ 2023-24ರಲ್ಲಿ 7324 ಕೋಟಿ ರು., 2024-25- 7698 ಕೋಟಿ ರು. ಮತ್ತು 2025-26- 5332 ಕೋಟಿ ರು. (ನವೆಂಬರ್‌ವರೆಗೆ) ಸಂಗ್ರಹವಾಗಿರುವುದಾಗಿ ಸರ್ಕಾರ ಉತ್ತರ ನೀಡಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬೆಂಗಳೂರು ನಗರದಲ್ಲಿ ಶೇ.95 ರಷ್ಟು ಪಲ್ಸ್ ಪೋಲಿಯೋ