ರಾಜ್ಯದಲ್ಲಿ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಎಐ ಬಳಕೆ?

Published : Aug 07, 2026, 05:12 AM IST
cm dk shivakumar

ಸಾರಾಂಶ

‘ಸರ್ಕಾರಿ ವ್ಯವಸ್ಥೆಗಳಲ್ಲಿ ನಡೆವ ವಂಚನೆ ತಡೆಯಲು ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳು ನಡೆಸುವ ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ವ್ಯವಸ್ಥೆ ಸುಧಾರಿಸಲು ಕೃತಕ ಬುದ್ಧಿಮತ್ತೆ ಬಳಕೆ’ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಆಂಥ್ರೋಪಿಕ್‌ ಕಂಪನಿಯ ತಾಂತ್ರಿಕ ನೆರವು ಕೋರಿದ್ದಾರೆ.

ಬೆಂಗಳೂರು :  ‘ಸರ್ಕಾರಿ ವ್ಯವಸ್ಥೆಗಳಲ್ಲಿ ನಡೆಯುವ ವಂಚನೆ ತಡೆಯಲು ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳು ನಡೆಸುವ ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ವ್ಯವಸ್ಥೆ ಸುಧಾರಿಸಲು ಕೃತಕ ಬುದ್ಧಿಮತ್ತೆ (ಎಐ) ಬಳಕೆ’ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಆಂಥ್ರೋಪಿಕ್‌ ಕಂಪನಿಯ ತಾಂತ್ರಿಕ ನೆರವು ಕೋರಿದ್ದಾರೆ.

ರಾಜ್ಯದಲ್ಲಿ ಎಐ ಪರಿಸರ ವ್ಯವಸ್ಥೆ ನಿರ್ಮಿಸುವ ಪ್ರಕ್ರಿಯೆಯಲ್ಲಿ ಜಾಗತಿಕ ಎಐ ನಾಯಕರನ್ನು ತೊಡಗಿಸಿಕೊಳ್ಳುವ ಸಲುವಾಗಿ ಆಂಥ್ರೋಪಿಕ್‌ ನಿಯೋಗದೊಂದಿಗೆ ಐಟಿ-ಬಿಟಿ, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಗುರುವಾರ ಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದರು.

ಈ ವೇಳೆ ಶಿವಕುಮಾರ್‌ ಅವರು, ಆಡಳಿತ, ಉನ್ನತ ಶಿಕ್ಷಣ, ಆರೋಗ್ಯ ರಕ್ಷಣೆ, ಸಂಶೋಧನೆ ಹಾಗೂ ರಾಜ್ಯದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಬಳಕೆ ಹೆಚ್ಚಿಸಲು ಸುದೀರ್ಘ ಸಹಭಾಗಿತ್ವ ಸಾಧಿಸುವ ಕುರಿತು ಚರ್ಚಿಸಿದರು.

ಇದೇ ವೇಳೆ ಸರ್ಕಾರಿ ಸಂಸ್ಥೆಗಳಲ್ಲಿನ ವಂಚನೆ ತಡೆಯಲು, ಪರೀಕ್ಷಾ ವ್ಯವಸ್ಥೆ ಸುಧಾರಿಸಲು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಲ್ಲಿ ದಕ್ಷತೆ ಹಾಗೂ ಗೌಪ್ಯತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ (ಎಐ) ಹೇಗೆ ನೆರವಾಗುತ್ತದೆ ಎಂಬುದರ ಬಗ್ಗೆ ಆಂಥ್ರೋಪಿಕ್‌ನ ಪರಿಣತಿ ಹಾಗೂ ತಾಂತ್ರಿಕ ಸಲಹೆಯನ್ನು ಕೋರಿದರು.

ಎಐ ಶಿಕ್ಷಣ ಮತ್ತು ಸಂಶೋಧನೆಯನ್ನು ಬಲಪಡಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆಂಥ್ರೋಪಿಕ್‌ನ ‘ಕ್ಲಾಡ್ ಎಐ’ ವೇದಿಕೆಯ ಲಭ್ಯತೆಗೆ ರಿಯಾಯಿತಿ/ಸಬ್ಸಿಡಿ ನೀಡುವಂತೆ ಇದೇ ವೇಳೆ ಡಿ.ಕೆ. ಶಿವಕುಮಾರ್‌ ಅವರು ಪ್ರಸ್ತಾಪಿಸಿದರು.

ಜವಾಬ್ದಾರಿಯುತ ಎಐ ಬಳಕೆ, ಡೇಟಾ ಗೌಪ್ಯತೆ ಮತ್ತು ಡೇಟಾ ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳುವ ಮೂಲಕ, ಸರ್ಕಾರ ಹಾಗೂ ಉದ್ಯಮಗಳಿಗಾಗಿ ಅನ್ವಯಿಕ ಎಐ ಪರಿಹಾರಗಳ ಪ್ರಯೋಜನಕಾರಿ ಅಳವಡಿಕೆಗೆ ನೆರವಾಗಲಿದೆ ಎಂದು ಹೇಳಿದರು.

ಎಐ ಪರಿಸರ ವ್ಯವಸ್ಥೆ ಸೃಷ್ಟಿ:

ಪ್ರಸ್ತಾವಿತ ‘ಎಐ ವಿಶ್ವವಿದ್ಯಾಲಯ’, ಬೃಹತ್ ಮಟ್ಟದ ಕೌಶಲ್ಯಾಭಿವೃದ್ಧಿ ಯೋಜನೆಗಳು ಮತ್ತು ಡೀಪ್-ಟೆಕ್ ಅನ್ವೇಷಣೆಗಳಿಗೆ ಬೆಂಬಲ ನೀಡುವ ಮೂಲಕ ಸಮಗ್ರ ಎಐ ಪರಿಸರ ವ್ಯವಸ್ಥೆ ನಿರ್ಮಿಸಲು ಉದ್ದೇಶಿಸಿದ್ದೇವೆ ಎಂದು ಮುಖ್ಯಮಂತ್ರಿಗಳು, ರಾಜ್ಯದ ‘ನಿಪುಣ’ ಕಾರ್ಯಕ್ರಮದಡಿ ‘ಕ್ಲಾಡ್’ ಸರ್ಟಿಫಿಕೇಶನ್ ಸೇರಿದಂತೆ ಎಐ-ಸಂಬಂಧಿತ ಸರ್ಟಿಫಿಕೇಶನ್ ಕೋರ್ಸ್‌ಗಳನ್ನು ಪರಿಚಯಿಸುವ ಬಗ್ಗೆ ಚರ್ಚಿಸಿದರು.

ಇದೇ ವೇಳೆ ಆರೋಗ್ಯ ರಕ್ಷಣೆ ಮತ್ತು ಲೈಫ್ ಸೈನ್ಸಸ್ ಕ್ಷೇತ್ರಗಳಲ್ಲಿ ಎಐ ಬಳಕೆ, ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಹಯೋಗದೊಂದಿಗೆ ವೈಜ್ಞಾನಿಕ ಸಂಶೋಧನೆಗಾಗಿ ಎಐ ಬಳಸುವ ಕುರಿತು ಚರ್ಚೆಗಳು ನಡೆದವು.

ಗೃಹ ಇಲಾಖೆಯಲ್ಲಿ ಎಐ ಅಳವಡಿಕೆ:

ಇ-ಆಡಳಿತ, ಗೃಹ ಇಲಾಖೆ ಹಾಗೂ ಇತರ ಸರ್ಕಾರಿ ಸಂಸ್ಥೆಗಳಲ್ಲಿ ಎಐ ಅಳವಡಿಸುವಿಕೆಗೆ ಇಲಾಖಾವಾರು ಕಾರ್ಯಪಡೆಗಳನ್ನು ರಚಿಸುವ ಕುರಿತೂ ಸಭೆಯಲ್ಲಿ ಪರಿಶೀಲಿಸಲಾಯಿತು. ಸೈಬರ್ ಬೆದರಿಕೆಗಳ ವಿರುದ್ಧದ ಸುರಕ್ಷತಾ ಕ್ರಮಗಳು, ನಾಗರಿಕರ ಡೇಟಾ ಮತ್ತು ಗೌಪ್ಯತೆಯ ರಕ್ಷಣೆ ಸೇರಿದಂತೆ ಜವಾಬ್ದಾರಿಯುತ ಎಐ ಪದ್ಧತಿಗಳನ್ನು ಭವಿಷ್ಯದ ಯೋಜನಾ ಅಳವಡಿಕೆಗಳ ಅಗತ್ಯ ಅಂಶಗಳಾಗಿ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.

ಸಭೆಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾದ ಡಾ. ಮಂಜುಳಾ, ಎನ್. ಮುನೀಶ್ ಮೌದ್ಗಿಲ್ ಹಾಗೂ ಮುಖ್ಯಮಂತ್ರಿ ಅವರ ಹಣಕಾಸು ಸಲಹೆಗಾರ ಎಲ್.ಕೆ.ಅತೀಕ್, ಆಂಥ್ರೋಪಿಕ್ ಸಂಸ್ಥೆಯ ಪರವಾಗಿ ಅಂತಾರಾಷ್ಟ್ರೀಯ ನೀತಿ ವಿಭಾಗದ ಮುಖ್ಯಸ್ಥ ಮೈಕೆಲ್ ಸೆಲ್ಲಿಟೋ, ಅಂತಾರಾಷ್ಟ್ರೀಯ ಮಾರುಕಟ್ಟೆಗಳ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ ಸಿಯೌರಿ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಜೆನ್‌ಝೀ ಪ್ರತಿಭಟನೆಗೆ ಮಣಿದ ಡಿಕೆ ಸರ್ಕಾರ
ರಘುನಾಥಪುರದಲ್ಲಿ ನೀರಿನ ಸಮಸ್ಯೆ