ಜೆನ್‌ಝೀ ಪ್ರತಿಭಟನೆಗೆ ಮಣಿದ ಡಿಕೆ ಸರ್ಕಾರ

Published : Aug 07, 2026, 05:06 AM IST
priyank kharge

ಸಾರಾಂಶ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್‌ ಮಂತರ್‌ನಲ್ಲಿ ಜೆನ್‌ಝೀಗಳು ನಡೆಸಿದ ಪ್ರತಿಭಟನೆಯ ತೀವ್ರತೆ ಮನಗಂಡು ಎಚ್ಚೆತ್ತಿರುವ ರಾಜ್ಯ ಸರ್ಕಾರ, ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಕೃಷಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಸ್ಪಂದಿಸಿದೆ

ಬೆಂಗಳೂರು :  ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್‌ ಮಂತರ್‌ನಲ್ಲಿ ಜೆನ್‌ಝೀಗಳು ನಡೆಸಿದ ಪ್ರತಿಭಟನೆಯ ತೀವ್ರತೆ ಮನಗಂಡು ಎಚ್ಚೆತ್ತಿರುವ ರಾಜ್ಯ ಸರ್ಕಾರ, ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಕೃಷಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಸ್ಪಂದಿಸಿದೆ. ಆಗಸ್ಟ್ 8 ಮತ್ತು 9 ರಂದು ನಿಗದಿಯಾಗಿದ್ದ 945 ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ.

ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಕೃಷಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಗ್ಗೆ ಸಮಗ್ರ ಪರಿಶೀಲನೆಗಾಗಿ ವಿಶೇಷ ತಜ್ಞರ ಸಮಿತಿ ರಚಿಸಿ, 15 ದಿನಗಳೊಳಗೆ ವರದಿ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಯುವಕರು ಪ್ರತಿಭಟನೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಬಾರದು. ಅವರು ಓದಬೇಕು, ಉದ್ಯೋಗ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಸರ್ಕಾರ ಈಗಾಗಲೇ 74 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಅಗತ್ಯ ಸಿದ್ಧತೆ ಮಾಡುತ್ತಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಕಾನೂನು ತರಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಕೃಷಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರಲಾಗಿದೆ. 2021-22ರಲ್ಲಿ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಬಗ್ಗೆ ಆಗಲೇ ಎಚ್ಚರಿಕೆ ವಹಿಸಬೇಕಿತ್ತು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಇದು ನಿಮ್ಮ ಸರ್ಕಾರ. ನಮ್ಮಿಂದ ಯಾವುದೇ ತಪ್ಪು ಆಗಿದ್ದರೆ ಅದನ್ನು ಸರಿಪಡಿಸುವ ಅಧಿಕಾರವೂ ನಮ್ಮದೇ. ಖಂಡಿತವಾಗಿ ಅದನ್ನು ಸರಿಪಡಿಸುತ್ತೇವೆ. ಬಹಳ ವರ್ಷಗಳ ನಂತರ ಕೃಷಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ಆತಂಕವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ವಿದ್ಯಾರ್ಥಿಗಳು ಮಂಡಿಸಿರುವ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಶೀಲಿಸಲಿದೆ ಎಂದರು.

945 ಹುದ್ದೆಗಳ ನೇಮಕಾತಿ ಸಂಬಂಧ ಹೊರಡಿಸಿರುವ ಅಧಿಸೂಚನೆ

ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ 945 ಹುದ್ದೆಗಳ ನೇಮಕಾತಿ ಸಂಬಂಧ ಹೊರಡಿಸಿರುವ ಅಧಿಸೂಚನೆಯಲ್ಲಿ ಅರ್ಹ ಮಾನದಂಡವಿಲ್ಲದೇ ಬಿಇ (ಬಯೋಟೆಕ್ನಾಲಜಿ) ಹಾಗೂ ಹಾಗೂ ಬಿಟೆಕ್ (ಬಯೋಟೆಕ್ನಾಲಜಿ) ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಇದರಿಂದ ಅರ್ಹ ಕೃಷಿ ಪದವೀಧರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ನೇಮಕಾತಿ ಅರ್ಹತಾ ನಿಯಮ ತಿದ್ದುಪಡಿ ಮಾಡಿ ಪರಿಷ್ಕೃತ ಅಧಿಸೂಚನೆ ಹೊರಡಿಸುವಂತೆ ಹಾಗೂ ಐಸಿಎಆರ್ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ ಕೃಷಿ ಪದವೀಧರರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಕೃಷಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದರು.

ವಿದ್ಯಾರ್ಥಿಗಳ ಪ್ರತಿಭಟನೆಗೆ ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ, ನಿವೃತ್ತ ಪ್ರಾಧ್ಯಾಪಕ ನಾರಾಯಣಸ್ವಾಮಿ, ರೈತ ಮುಖಂಡ ಗೋಪಾಲ್ ಸೇರಿದಂತೆ ಹಲವರು ಬೆಂಬಲಿಸಿದ್ದರು.

ನಮ್ಮದು ಯುವಜನರ ಧ್ವನಿಗೆ ಮಿಡಿಯುವ ಸರ್ಕಾರ: ಡಿಕೆಶಿ

ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ‘ಎಕ್ಸ್‌’ ಖಾತೆಯಲ್ಲಿ, ನಮ್ಮದು ಯುವಜನರ ಧ್ವನಿಗೆ ಮಿಡಿಯುವ ಸರ್ಕಾರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವೇ ನಮ್ಮ ಗುರಿ. ಆ.4ರಂದು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನನ್ನನ್ನು ಭೇಟಿಯಾಗಿ ತಮ್ಮ ನೋವನ್ನು ತೋಡಿಕೊಂಡಾಗ, ಅವರ ಆತಂಕಕ್ಕೆ ನಮ್ಮ ಸರ್ಕಾರ ತಕ್ಷಣವೇ ಸ್ಪಂದಿಸಿದೆ. ವಿದ್ಯಾರ್ಥಿಗಳ ಅಳಲಿಗೆ ಸದಾ ಕಿವಿಗೊಡುವ ನಮ್ಮ ಸರ್ಕಾರ, ಕೃಷಿ ಅಧಿಕಾರಿ ನೇಮಕಾತಿಯ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಿದೆ. ನಮ್ಮ ಕೃಷಿ ಪದವೀಧರರಿಗೆ ಕಿಂಚಿತ್ತೂ ಅನ್ಯಾಯವಾಗದಂತೆ, ಪರೀಕ್ಷೆ ನಡೆಸಲು ದೃಢಸಂಕಲ್ಪ ಮಾಡಿದೆ. ವಿದ್ಯಾರ್ಥಿಗಳೇ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತಾ ಸಿಗಲಿದೆ. ನಿಮ್ಮ ಕನಸುಗಳನ್ನು ನನಸಾಗಿಸುವುದು ಹಾಗೂ ನಿಮ್ಮ ಭವಿಷ್ಯವನ್ನು ಕಾಪಾಡುವುದು ನಮ್ಮ ಜವಾಬ್ದಾರಿ’ ಎಂದು ಹೇಳಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಘುನಾಥಪುರದಲ್ಲಿ ನೀರಿನ ಸಮಸ್ಯೆ
ಯಂಟಗಾನಹಳ್ಳಿ-ಮರಸರಹಳ್ಳಿ ನಕಾಶೆ ರಸ್ತೆ ತೆರವು