ಮದರಸಾದಲ್ಲಿ ಭಾರತ ವಿರೋಧಿ ಪಾಠ : ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿವಾದ

ಸಾರಾಂಶ

ಮದರಸಾಗಳಲ್ಲಿ ಭಾರತ ವಿರೋಧಿ ಪಾಠ ಹೇಳಿ ಕೊಡಲಾಗುತ್ತಿದೆ ಎಂಬ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯು ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್‌, ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿ ಕೋಲಾಹಲ ಸೃಷ್ಟಿಸಿತು.

ವಿಧಾನಸಭೆ : ಮದರಸಾಗಳಲ್ಲಿ ಭಾರತ ವಿರೋಧಿ ಪಾಠ ಹೇಳಿ ಕೊಡಲಾಗುತ್ತಿದೆ ಎಂಬ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯು ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್‌, ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿ ಕೋಲಾಹಲ ಸೃಷ್ಟಿಸಿತು.

ಯತ್ನಾಳ್‌ ಮಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯ ರಿಜ್ವಾನ್‌ ಅರ್ಷದ್‌, ಹಿರಿಯ ಸದಸ್ಯರಾಗಿರುವ ಯತ್ನಾಳ್‌ಗೆ ಮಾನ-ಮರ್ಯಾದೆ ಇದೆಯೇ? ಅವರೊಬ್ಬ ದೇಶದ್ರೋಹಿ ಎಂದು ಕೆಂಡಾಮಂಡಲರಾದರು.

ಗುರುವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಮಾತನಾಡುತ್ತಿದ್ದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌, ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಅತಿ ಹೆಚ್ಚು ಆದ್ಯತೆ ನೀಡಲಾಗಿದೆ. 100 ಉರ್ದು ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ. ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಜೊತೆ ಔಪಚಾರಿಕ ಶಿಕ್ಷಣಕ್ಕೆ ಒತ್ತು ಕೊಡಲು ಅನುದಾನ ಕೊಡಲಾಗಿದೆ‌. ಆದರೆ, ಮದರಸಾಗಳಲ್ಲಿ ಭಾರತದ ವಿರುದ್ಧ ಪಾಠ ಕಲಿಸಲಾಗುತ್ತಿದೆ ಎಂದು ಆರೋಪಿಸಿದರು.

ಇದರಿಂದ ಕುಪಿತಗೊಂಡ ರಿಜ್ವಾನ್‌ ಅರ್ಷದ್‌, ‘ಏನ್ರಿ ಮಾತನಾಡುತ್ತಿದ್ದೀರಿ. ಭಾರತದ ವಿರುದ್ಧ ಅಂದರೆ ಏನು? ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದೀರಾ? ಸುಮ್ಮನೆ ಇರ್ರೀ’ ಎಂದು ಕಿಡಿಕಾರಿದರು. ಇದೇ ವೇಳೆ ಕಾಂಗ್ರೆಸ್‌ ಸದಸ್ಯರು ರಿಜ್ವಾನ್‌ ಅರ್ಷದ್‌ ಬೆಂಬಲಕ್ಕೆ ನಿಂತರು. ಈ ನಡುವೆ, ಬಿಜೆಪಿ ಸದಸ್ಯರು ಯತ್ನಾಳ್‌ ಬೆಂಬಲಕ್ಕೆ ನಿಂತ ಕಾರಣ ಸದನದಲ್ಲಿ ಗದ್ದಲ, ಕೋಲಾಹಲ ಸೃಷ್ಟಿಯಾಯಿತು.

ಮಾತು ಮುಂದುವರಿಸಿದ ರಿಜ್ವಾನ್‌ ಅರ್ಷದ್‌, ಹಿರಿಯರು ಎಂದು ಮರ್ಯಾದೆ ಕೊಟ್ಟರೆ ನಿಮಗೆ ಮಾನ ಮರ್ಯಾದೆ ಇಲ್ವಾ? ಯಾವ ಮದಸರಾದಲ್ಲಿ ಭಾರತ ವಿರೋಧಿ ಚಟುವಟಿಕೆ ಕಲಿಸುತ್ತಾರೆ. ಸಮಾಜಕ್ಕೆ ಬೆಂಕಿ ಹಚ್ಚುತ್ತೀರಾ, ನೀವು ಭಾರತದ ವಿರೋಧಿಗಳು. ಯತ್ನಾಳ್ ದೇಶದ್ರೋಹಿ. ಅವರನ್ನು ಅಮಾನತುಗೊಳಿಸಬೇಕು. ಅಲ್ಲದೇ, ಸೂಕ್ತ ಕ್ರಮ ಕೈಗೊಳ್ಳುವುದರ ಜತೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಅಲ್ಲದೇ, ಕಡತದಿಂದ ಆ ಪದಗಳನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‌, ಈ ಬಗ್ಗೆ ಪರಿಶೀಲಿಸಿ ಅಸಂವಿಧಾನಿಕ ಪದಗಳಿದ್ದರೆ ಕಡತದಿಂದ ತೆಗೆದುಹಾಕಲಾಗುವುದು ಎಂದರು.

ಮಾತು ಮುಂದುವರಿಸಿದ ಯತ್ನಾಳ್‌, ರಾಜ್ಯದಲ್ಲಿ ತಾಲಿಬಾನ್‌ ಬಜೆಟ್‌ ಮಂಡನೆ ಆಗಿದ್ದು, ರೈತರು, ದೀನದಲಿತರ ಪರವಾಗಿಲ್ಲ. ಈ ಬಜೆಟ್‌ ಪಾಕಿಸ್ತಾನ ಬಜೆಟ್‌, ಹಲಾಲ್‌ ಬಜೆಟ್‌ ಆಗಿದೆ ಎಂದು ಟೀಕಿಸಿದರು.

Share this article