ಬೆಂಗಳೂರು : ಏಳು ದಿನಗಳವರೆಗೆ ಕೆಲಕಾಲ ಮಳೆ - ಹವಮಾನ ಇಲಾಖೆ

Follow Us

ಸಾರಾಂಶ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿ ಸೋಮವಾರದಿಂದ ಏಳು ದಿನಗಳವರೆಗೆ ಕೆಲಕಾಲ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ತಿಳಿಸಿದೆ.

 ಬೆಂಗಳೂರು : ಕಳೆದ ಕೆಲ ದಿನಗಳಿಂದ ನಗರದಲ್ಲಿ ಬಿಡುವಾಗಿದ್ದ ಮಳೆ ಸೋಮವಾರ ಹಲವೆಡೆ ಸಣ್ಣದಾಗಿ ಸುರಿದಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿ ಸೋಮವಾರದಿಂದ ಏಳು ದಿನಗಳವರೆಗೆ ಕೆಲಕಾಲ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನದ ವೇಳೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತಾದರೂ ಮಳೆ ಸುರಿದಿರಲಿಲ್ಲ. ರಾತ್ರಿ 8 ಗಂಟೆ ನಂತರ ನಗರದ ಹಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದೆ. 

ಮುಂದಿನ 7 ದಿನಗಳವರೆಗೆ ಇದೇ ರೀತಿಯ ವಾತಾವರಣ ಇರಲಿದ್ದು, ಎಲ್ಲೆಡೆ ಮೋಡ ಕವಿದ ವಾತಾವರಣ ಇರಲಿದೆ ಹಾಗೂ ಸಂಜೆ ವೇಳೆಗೆ ಸಾಧಾರಣ ಮಳೆಯಾಗಲಿದೆ. ನಗರದ ಕೆಲವೆಡೆ ಗಾಳಿ ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಅದರ ಪರಿಣಾಮ ನಗರದಲ್ಲಿ ಉಷ್ಣಾಂಶ ಗರಿಷ್ಠ 33 ಮತ್ತು ಕನಿಷ್ಠ 22 ಡಿಗ್ರಿ ಸೆಲ್ಷಿಯಸ್‌ ದಾಖಲಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.