‘ವ್ಹೀಲಿಂಗ್‌ ತಡೆಗೆ ಕಠಿಣ ನಿಯಮ ಸೇರಿಸಿ’ : ಕೋರ್ಟ್ ಅಸಮಾಧಾನ

Follow Us

ಸಾರಾಂಶ

ವ್ಹೀಲಿಂಗ್‌ನಂಥ ಅಪಾಯಕಾರಿ ಚಟುವಟಿಕೆ ತಡೆಗಟ್ಟಲು ಭಾರತೀಯ ನಾಗರಿಕ ಸಂಹಿತೆ (ಬಿಎನ್‌ಎಸ್‌) ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆಗೆ ಕಠಿಣ ನಿಯಮ ಸೇರ್ಪಡೆಗೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

 ಬೆಂಗಳೂರು :  ವ್ಹೀಲಿಂಗ್‌ನಂಥ ಅಪಾಯಕಾರಿ ಚಟುವಟಿಕೆ ತಡೆಗಟ್ಟಲು ಭಾರತೀಯ ನಾಗರಿಕ ಸಂಹಿತೆ (ಬಿಎನ್‌ಎಸ್‌) ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆಗೆ ಕಠಿಣ ನಿಯಮ ಸೇರ್ಪಡೆಗೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ವೀಲ್ಹಿಂಗ್‌ ಮಾಡಿ, ಅದನ್ನು ಪ್ರಶ್ನಿಸಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿತ ಕೊಪ್ಪಳ ಜಿಲ್ಲೆಯ ಗಂಗಾವತಿಯ ಅರ್ಬಾಜ್‌ ಖಾನ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ನಿರ್ದೇಶನ ನೀಡಿದೆ.

ಪ್ರಸ್ತುತ ಅಪಾಯಕಾರಿ ವ್ಹೀಲಿಂಗ್‌ನಂಥ ಕೃತ್ಯಗಳು ಹೆಚ್ಚಾಗುತ್ತಿವೆ. ಇದು ಸಾರ್ವಜನಿಕ ಸುವ್ಯವಸ್ಥೆ, ಜನರ ರಕ್ಷಣೆ ಹಾಗೂ ಭದ್ರತೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೊದಲಿಗೆ ವ್ಹೀಲಿಂಗ್‌ ವಿಶಾಲವಾದ ನಗರ ಪ್ರದೇಶಗಳ ಹೆದ್ದಾರಿಗಳಿಗೆ ಸೀಮಿತವಾಗಿತ್ತು. ಈಗ ಅಪಾಯಕಾರಿ ಚಟುವಟಿಕೆಯು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನಿರ್ಲಕ್ಷ್ಯ, ಅತಿವೇಗ ಹಾಗೂ ವಿವೇಚನಾರಹಿತ ಚಾಲನೆ ನಿಯಂತ್ರಿಸಲು ಹಾಲಿ ಕಾನೂನುಗಳು ಸಾಕಾಗಲ್ಲ. ಹಾಗಾಗಿ ಶಾಸಕಾಂಗವು ಸರಿಹೊಂದುವ ಮತ್ತು ಕಠಿಣ ನಿಯಮಗಳನ್ನು ಬಿಎನ್‌ಎಸ್‌ ಮತ್ತು ಮೋಟಾರು ವಾಹನಗಳ ಕಾಯ್ದೆಗೆ ಸೇರಿಸಿ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಸರ್ಕಾರಕ್ಕೆ ಆದೇಶದಲ್ಲಿ ಪೀಠ ಹೇಳಿದೆ.

ಈ ಪ್ರಕರಣದಲ್ಲಿ ಅರ್ಜಿದಾರನ ವಿರುದ್ಧದ ಆರೋಪಗಳು ಜಾಮೀನು ಸಹಿತವಾಗಿವೆ ಹಾಗೂ ತನಿಖೆ ಪೂರ್ಣಗೊಂಡು ಆರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದ ಮಾತ್ರಕ್ಕೆ ಜಾಮೀನು ನೀಡಬೇಕು ಎಂದೇನಿಲ್ಲ. ಆರೋಪಿ ಪದೇ ಪದೆ ಇಂಥ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಹಾಗಾಗಿ, ಆತನಿಗೆ ಜಾಮೀನು ನೀಡಲಾಗದು ಎಂದು ಪೀಠ ಹೇಳಿದೆ.

ಪ್ರಕರಣದ ವಿವರ:  ಅ.9ರಂದು ಗಂಗಾವತಿಯ ಹೇಮಗುಡ್ಡ ದುರ್ಗಮ್ಮ ದೇವಸ್ಥಾನದ ಬಳಿ ಅರ್ಜಿದಾರ ಅರ್ಬಾಜ್‌ ಸೇರಿ ಮೂವರು ಯಮಹಾ ಆರ್‌ಎಕ್ಸ್‌ ಬೈಕಿನಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದರು. ಗಸ್ತಿನಲ್ಲಿದ್ದ ಪೊಲೀಸರು ಅವರನ್ನು ಹಿಡಿಯಲು ಮುಂದಾದಾಗ ಬೈಕ್‌ ಆಯತಪ್ಪಿತು. ಇದರಿಂದ ವ್ಹೀಲಿಂಗ್‌ ಮಾಡುತ್ತಿದ್ದವರು ನೆಲಕ್ಕೆ ಬಿದ್ದಿದ್ದರು. ಆಗ ಅವರ ನೆರವಿಗೆ ಧಾವಿಸಿದ ಪೊಲೀಸರನ್ನು ನೆಲಕ್ಕೆ ಬಿದ್ದವರೇ ನಿಂದಿಸಿ ಹಲ್ಲೆ ನಡೆಸಿದರು ಹಾಗೂ ಪೊಲೀಸರ ಫೋನ್‌ ಕಸಿದು ತುಂಗಭದ್ರಾ ಕಾಲುವೆಗೆ ಎಸೆದಿದ್ದರು.

ಇದರಿಂದ ಪೊಲೀಸರು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಹಲ್ಲೆ, ಕೊಲೆ ಯತ್ನ, ಸ್ವಯಂಪ್ರೇರಣೆಯಿಂದ ನೋವುಂಟು ಮಾಡುವುದು, ಜೀವ ಬೆದರಿಕೆ, ಸಾಕ್ಷ್ಯ ನಾಶ, ಜೀವಕ್ಕೆ ಹಾಗೂ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡಿದ, ರಸ್ತೆಯಲ್ಲಿ ಅತಿವೇಗದಿಂದ ವಾಹನ ಚಲಾಯಿಸಿದ ಆರೋಪದಡಿ ಪ್ರಕರಣ ದಾಖಲಿಸಿ ಅರ್ಜಿದಾರನನ್ನು ಬಂಧಿಸಿದ್ದರು. ಜಾಮೀನು ಕೋರಿ ಆರೋಪಿ ಹೈಕೋರ್ಟ್‌ ಮೊರೆ ಹೋಗಿದ್ದ.