ಪಿಐ ವರ್ಗಾವಣೆ ಆದೇಶಕ್ಕೆ ಅಧೀನ ಕಾರ್ಯದರ್ಶಿ ಸಹಿ

Sujatha NRPublished : May 13, 2025 8:33 AM

ಸಿವಿಲ್ ವ್ಯಾಜ್ಯ ಪ್ರಕರಣ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್‌ಪೆಕ್ಟರ್ ಎ.ವಿ. ಕುಮಾರ್ ಅವರ ವರ್ಗಾವಣೆ ಆದೇಶಕ್ಕೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಸಹಿ ಮಾಡಿರುವುದು ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದೆ.

 ಬೆಂಗಳೂರು  : ಸಿವಿಲ್ ವ್ಯಾಜ್ಯ ಪ್ರಕರಣ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್‌ಪೆಕ್ಟರ್ ಎ.ವಿ. ಕುಮಾರ್ ಅವರ ವರ್ಗಾವಣೆ ಆದೇಶಕ್ಕೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಸಹಿ ಮಾಡಿರುವುದು ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದೆ.

ಸಾಮಾನ್ಯವಾಗಿ ಡಿವೈಎಸ್ಪಿ ಮೇಲ್ಮಟ್ಟದ ಅಧಿಕಾರಿಗಳ ವರ್ಗಾವಣೆಯನ್ನು ಸರ್ಕಾರ ಹಾಗೂ ಇನ್ಸ್‌ಪೆಕ್ಟರ್‌ ಹುದ್ದೆಯಿಂದ ಕೆಳಮಟ್ಟದ ಅಧಿಕಾರಿಗಳ ವರ್ಗಾವಣೆಯನ್ನು ಪೊಲೀಸ್ ಇಲಾಖೆ ನಡೆಸಲಿದೆ. ಹೀಗಾಗಿ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಆದೇಶಕ್ಕೆ ರಾಜ್ಯ ಪೊಲೀಸ್ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕರ (ಆಡಳಿತ) ಸಹಿ ಇರುತ್ತದೆ. ಆದರೆ ಮೇ 7 ರಂದು ಹೊರಡಿಸಲಾದ ಕುಮಾರ್ ಅವರ ವರ್ಗಾವಣೆ ಆದೇಶಕ್ಕೆ ಎಡಿಜಿಪಿ ಬದಲಿಗೆ ರಾಜ್ಯ ಸರ್ಕಾರ ಅಧೀನ ಕಾರ್ಯದರ್ಶಿ (ಒಳಾಡಳಿತ) ಧನಂಜಯ್ ರವರು ಮಾಡಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. 

ಕೆಲ ದಿನಗಳ ಹಿಂದೆ ಸಿವಿಲ್ ವ್ಯಾಜ್ಯ ಪ್ರಕರಣದಲ್ಲಿ ಪಿಐ ಕುಮಾರ್ ಅವರು ಡೀಲ್‌ ನಡೆಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಬಳಿಕ ಪಿಐ ಕುಮಾರ್ ಹಾಗೂ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಸೇರಿದಂತೆ ಐವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದ ಬಳಿಕ ಕುಮಾರ್ ಅವರನ್ನು ತಾತ್ಕಾಲಿಕವಾಗಿ ಅನ್ನಪೂರ್ಣೇಶ್ವರಿ ನಗರ ಠಾಣೆಯಿಂದ ಬಿಡುಗಡೆಗೊಳಿಸಿ ನಗರ ಶಾಖೆಗೆ ಆಯುಕ್ತ ಬಿ. ದಯಾನಂದ್ ನಿಯೋಜಿಸಿದ್ದರು. ಕೊನೆಗೆ ಅವರನ್ನು ವರ್ಗಾವಣೆ ಮಾಡಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ಸ್‌ಪೆಕ್ಟರ್‌ ಲತೇಶ್ ಕುಮಾರ್ ಅವರನ್ನು ನೇಮಿಸಲಾಗಿದೆ. ಆದರೆ ವರ್ಗಾವಣೆ ಆದೇಶವು ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಅ‍ವರಿಂದ ಹೊರಡಿಸಲಾಗಿದೆ.

ಅವಧಿ ಪೂರ್ವ ವರ್ಗಾವಣೆ?

ಪ್ರಸುತ್ತ ರಾಜ್ಯ ಪೊಲೀಸ್ ಇಲಾಖೆಯ ವರ್ಗಾವಣೆ ಕಾಯ್ದೆ ಅನುಸಾರ ಒಂದೇ ಕಾರ್ಯಸ್ಥಾನದಲ್ಲಿ ಪೊಲೀಸರಿಗೆ ಎರಡು ವರ್ಷಗಳು ಸೇವಾವಧಿ ಇರುತ್ತದೆ. ಅಂತೆಯೇ ಕುಮಾರ್ ಅವರಿಗೆ ಅನ್ನಪೂರ್ಣೇಶ್ವರಿ ಠಾಣೆಯಿಂದ ವರ್ಗಾವಣೆಗೆ ಇನ್ನು ನಾಲ್ಕು ತಿಂಗಳ ಸಮಯವಿತ್ತು. ಹೀಗಾಗಿ ಅವಧಿ ಪೂರ್ವ ವರ್ಗಾವಣೆ ಕಾರಣಕ್ಕೆ ಪೊಲೀಸ್ ಇಲಾಖೆಯ ಬದಲಿಗೆ ಸರ್ಕಾರವೇ ನೇರವಾಗಿ ವರ್ಗಾವಣೆಗೊಳಿಸಿದೆ ಎನ್ನಲಾಗಿದೆ.