ಪಾರದರ್ಶಕ ವರ್ಗಾವಣೆಗೆ ಹೊಸ ಮಾರ್ಗಸೂಚಿ ಪ್ರಕಟ

Published : May 13, 2025, 09:45 AM IST
Vidhan soudha

ಸಾರಾಂಶ

ರಾಜ್ಯದ ಸರ್ಕಾರಿ ನೌಕರರ 2025-16ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟ

 ಬೆಂಗಳೂರು : ರಾಜ್ಯದ ಸರ್ಕಾರಿ ನೌಕರರ 2025-16ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಇಲಾಖೆಗಳಲ್ಲಿ ವೃಂದ ಬಲದ ಶೇ.6ರಷ್ಟು ಮೀರದಂತೆ ಪಾರದರ್ಶಕವಾಗಿ ವರ್ಗಾವಣೆ ಪ್ರಕ್ರಿಯೆ ನಡೆಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ.

ವರ್ಗಾವಣೆ ವೇಳೆ ಎ ಮತ್ತು ಬಿ ಗ್ರೂಪ್‌ ಅಧಿಕಾರಿಗಳಿಗೆ 2 ವರ್ಷ, ಸಿ ವೃಂದದ ಸಿಬ್ಬಂದಿಗೆ 4 ವರ್ಷ, ಡಿ ವೃಂದದ ನೌಕರರು 7 ವರ್ಷ ಒಂದು ಸ್ಥಳದಲ್ಲಿ ಸೇವೆ ಸಲ್ಲಿಸಿದರೆ ಮಾತ್ರ ವರ್ಗಾವಣೆಗೆ ಪರಿಗಣಿಸಬಹುದು. ಅಂಗವಿಕಲ ಸಿಬ್ಬಂದಿಗೆ ಮಾತ್ರ ಷರತ್ತಿಗೆ ಒಳಪಟ್ಟು ಕೆಲ ವಿನಾಯಿತಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ ಶೇ.6 ರಷ್ಟನ್ನು ಮೀರದಂತೆ ಮೇ 15 ರಿಂದ ಜೂ.14ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಅವಕಾಶ ನೀಡಲಾಗಿದೆ.

ಗ್ರೂಪ್‌-ಎ, ಗ್ರೂಪ್‌-ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿ ಆಯಾ ಇಲಾಖಾ ಸಚಿವರು ಹಾಗೂ ಗ್ರೂಪ್‌-ಸಿ, ಗ್ರೂಪ್‌-ಡಿ ವೃಂದದ ನೌಕರರಿಗೆ ಸಂಬಂಧಿಸಿ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ವರ್ಗಾವಣೆ ಅಧಿಕಾರ ನೀಡಲಾಗಿದೆ.

ಇನ್ನು ‘ಚಲನವಲನ’ ಆದೇಶಗಳಿಗೂ ಅವಕಾಶ ನೀಡಲಾಗಿದ್ದು, ಈ ಪ್ರಕರಣಗಳನ್ನು ವರ್ಗಾವಣೆ ಎಂದು ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಚಲನವಲನ ಎಂದರೆ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಒಂದೇ ಕೇಂದ್ರ ಸ್ಥಾನದಲ್ಲಿರುವ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಸ್ಥಳ ನಿಯುಕ್ತಿಗೊಳಿಸುವುದು ಎಂದರ್ಥ.

ಪಾರದರ್ಶಕ ಪ್ರಕ್ರಿಯೆ ಅನುಸರಿಸಿ:

ವರ್ಗಾವಣೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಪಾರದರ್ಶಕವಾಗಿ ಮಾಡಬೇಕು. ವರ್ಗಾವಣೆ ವೇಳೆ ಯಾವುದೇ ನೌಕರರು ಸ್ಥಳ ನಿಯುಕ್ತಿಗಾಗಿ ಕಾಯದಂತೆ ಕಡ್ಡಾಯವಾಗಿ ಸ್ಥಳ ನಿಯುಕ್ತಿ ನೀಡಬೇಕು. ಯಾವುದೇ ನೌಕರನ ವಿರುದ್ಧದ ಗಂಭೀರ ಸ್ವರೂಪದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ, ಕ್ರಿಮಿನಲ್‌ ನಡವಳಿ ಪ್ರಾರಂಭಿಸಿದ್ದರೆ ಅಥವಾ ಬಾಕಿಯಿದ್ದರೆ ಅಂತಹವರನ್ನು ಕಾರ್ಯಕಾರಿಯೇತರ (ನಾನ್‌ ಎಕ್ಸಿಕ್ಯೂಟಿವ್) ಮಾತ್ರ ಹುದ್ದೆಗಳಿಗೆ ನೇಮಿಸಬೇಕು.

ಸಾರ್ವತ್ರಿಕ ವರ್ಗಾವಣೆಗೆ ನಿಗದಿ ಮಾಡಿರುವ ಸೀಮಿತ ಅವಧಿ ಬಳಿಕ ವರ್ಗಾವಣೆ ಮಾಡುವಂತಿಲ್ಲ. ಒಂದೊಮ್ಮೆ ನೌಕರರನ್ನು ಸೇವೆಯಿಂದ ಅಮಾನತಿನಲ್ಲಿಡುವ ಬದಲು ವರ್ಗಾವಣೆ ಮಾಡಲು ಉದ್ದೇಶಿಸಿದರೆ ಹೊಸ ಕಚೇರಿ, ಹುದ್ದೆ ಸೃಜಿಸಿದಾಗ, ಬಡ್ತಿ, ರಾಜೀನಾಮೆ, ಹಿಂಬಡ್ತಿ, ವಜಾ, ಮರಣದಿಂದ ಕಡ್ಡಾಯವಾಗಿ ನಿವೃತ್ತಿಯ ಕಾರಣದಿಂದ ಹುದ್ದೆಗಳು ತೆರವಾದಾಗ, ಅನಿರೀಕ್ಷಿತ ಪರಿಸ್ಥಿತಿ ಉದ್ಭವಿಸಿದರೆ ಮಾತ್ರ ವರ್ಗಾವಣೆ ಮಾಡಬಹುದು ಎಂದು ಹೇಳಲಾಗಿದೆ.

ಒಟ್ಟಾರೆ ಶೇ.6ರಷ್ಟು ಮಿತಿ ನಿಗದಿಪಡಿಸಲಾಗಿದೆ. ವಿಶೇಷ ಕಾರಣಗಳಿಗೆ ವಾರ್ಷಿಕ ವರ್ಗಾವಣೆಗಳ ಸಂಖ್ಯೆಗಿಂತ ಕಡಿಮೆ ವರ್ಗಾವಣೆ ಆಗಬೇಕಾಗಿದ್ದರೆ ಅದಕ್ಕೆ ಮುಖ್ಯಮಂತ್ರಿಗಳಿಂದ ಅನುಮತಿ ಪಡೆಯಬೇಕು ಎಂದು ಸೂಚಿಸಲಾಗಿದೆ.

ಏನಿದು ನಿಯಮ?

- ಮೇ 15-ಜೂ.14ರವರೆಗೆ ವರ್ಗಕ್ಕೆ ಅವಕಾಶ । ವೃಂದ ಬಲದ ಶೇ.6ರಷ್ಟು ಮೀರದಂತೆ ವರ್ಗ

- ಎ, ಬಿ ಗ್ರೂಪ್‌ ಅಧಿಕಾರಿಗಳು 2 ವರ್ಷ ಸೇವೆ ಸಲ್ಲಿಸಿದರೆ ಮಾತ್ರ ವರ್ಗಾವಣೆಗೆ ಪರಿಗಣನೆ

- ‘ಸಿ’ ವೃಂದ ಸಿಬ್ಬಂದಿ 4 ವರ್ಷ, ‘ಡಿ’ ಸಿಬ್ಬಂದಿ 7 ವರ್ಷ 1 ಸ್ಥಳದಲ್ಲಿ ಸೇವೆ ಸಲ್ಲಿಸಿರಬೇಕು

- ಈ ಅವಧಿ ಮೀರಿದರೆ ಮಾತ್ರ ವರ್ಗಾವಣೆ । ಈ ಷರತ್ತಿನಿಂದ ಅಂಗವಿಕಲರಿಗೆ ವಿನಾಯ್ತಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಮನುಷ್ಯ ಕಾಯಿಲೆಗಳಿಗೆ ಆಹಾರ ಪದ್ಧತಿಯೇ ಕಾರಣ
ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಆದ್ಯತೆ: ಎಂಬಿಪಾ