ಧರ್ಮಸ್ಥಳ ಅವಹೇಳನ ವಿರುದ್ಧ ಬಿಜೆಪಿ ಕಹಳೆ

Published : Sep 02, 2025, 07:26 AM IST
BJP Dharmasthala Rally

ಸಾರಾಂಶ

‘ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾದ ನೂರಾರು ಶವ ಹೂಳಲಾಗಿದೆ’ ಎಂಬ ಆರೋಪದ ಹಿಂದೆ ಷಡ್ಯಂತ್ರ ಇದೆ. ಈ ‘ಬುರುಡೆ ಕೇಸ್‌’ ಕುರಿತ ಸಂಪೂರ್ಣ ತನಿಖೆಯನ್ನು ಎನ್‌ಐಎಗೆ (ರಾಷ್ಟ್ರೀಯ ತನಿಖಾ ದಳ) ವಹಿಸಬೇಕು’ ಎಂದು ಒತ್ತಾಯಿಸಿ ಬಿಜೆಪಿ ವತಿಯಿಂದ ‘ಧರ್ಮಸ್ಥಳ ಚಲೋ’

 ಬೆಳ್ತಂಗಡಿ :  ‘ಧರ್ಮಸ್ಥಳದಲ್ಲಿ ಅತ್ಯಾ*ರಕ್ಕೆ ಒಳಗಾಗಿ ಕೊಲೆಗೀಡಾದ ನೂರಾರು ಶವ ಹೂಳಲಾಗಿದೆ’ ಎಂಬ ಆರೋಪದ ಹಿಂದೆ ಷಡ್ಯಂತ್ರ ಇದೆ. ಈ ‘ಬುರುಡೆ ಕೇಸ್‌’ ಕುರಿತ ಸಂಪೂರ್ಣ ತನಿಖೆಯನ್ನು ಎನ್‌ಐಎಗೆ (ರಾಷ್ಟ್ರೀಯ ತನಿಖಾ ದಳ) ವಹಿಸಬೇಕು’ ಎಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಸೋಮವಾರ ‘ನಮ್ಮ ನಡಿಗೆ ಧರ್ಮದೆಡೆಗೆ’ ಹೆಸರಿನಲ್ಲಿ ಬೃಹತ್‌ ‘ಧರ್ಮಸ್ಥಳ ಚಲೋ’ ನಡೆಯಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಈ ಕುರಿತ ‘ಬೃಹತ್‌ ಸಮಾವೇಶದಲ್ಲಿ ರಾಜ್ಯಾದ್ಯಂತ ಆಗಮಿಸಿದ 15 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ವೇಳೆ, ಮಂಜುನಾಥೇಶ್ವರನ ದರ್ಶನ ಪಡೆದ ಬಿಜೆಪಿ ನಾಯಕರು, ಧರ್ಮಸ್ಥಳ ಧರ್ಮಾಧಿಕಾರಿ ಡಾ। ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದರು.

ಬಳಿಕ ಸಮಾವೇಶದಲ್ಲಿ ಮಾತನಾಡಿದ ನಾಯಕರು, ‘ಮತ ಬ್ಯಾಂಕಿಗೋಸ್ಕರ ಕಾಂಗ್ರೆಸ್ ಹಿಂದೂ ಸಮಾಜವನ್ನು ಒಡೆಯಲು ಸಂಚು ರೂಪಿಸುತ್ತಿದೆ. ಈ ಷಡ್ಯಂತ್ರದ ಸತ್ಯಾಂಶ ಹೊರಬೀಳಲು ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಸಿದ್ದು ವಿರುದ್ಧ ನಾಯಕರ ಕಿಡಿ:

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ‘ಕಾಂಗ್ರೆಸ್‌ ಸ್ನೇಹಿತ ಚಿನ್ನಯ್ಯನಿಗೆ ಬುರುಡೆ ಎಲ್ಲಿಂದ ತಂದೆ ಅಂತ ಸಿದ್ದರಾಮಯ್ಯ ಸರ್ಕಾರ ಕೇಳಿಲ್ಲ. ಆತನ ಮಾತು ಕೇಳಿ ಧರ್ಮಸ್ಥಳದ ಬಾಹುಬಲಿ ಬೆಟ್ಟ ಸಹಿತ ಅನೇಕ ಕಡೆ ಅಗೆತ ಮಾಡಿದಿರಿ. ಇದೇ ರೀತಿ ಅನ್ಯಮತೀಯರ ಜಾಗದಲ್ಲಿ ಮಾಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಹಿಂದುಗಳ ಸಹನೆಯನ್ನು ಸಿದ್ದರಾಮಯ್ಯ ಸರ್ಕಾರ ಕೆಣಕುತ್ತಿದೆ. ಅದಕ್ಕೆ ತಕ್ಕ ಉತ್ತರ ನೀಡಲು ಸಿದ್ಧ’ ಎಂದು ಎಚ್ಚರಿಸಿದರು.

ವಿಜಯೇಂದ್ರ ಮಾತನಾಡಿ, ‘ಧರ್ಮಸ್ಥಳದ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡ ರೀತಿ ಸರಿಯಿಲ್ಲ. ಹೀಗಾಗಿ, ಧರ್ಮಸ್ಥಳ ಭಕ್ತರ ಸಹನೆ ಕಟ್ಟೆ ಒಡೆದಿದೆ. ಭಕ್ತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ದೇಶದ್ರೋಹಿಗಳು ಈ ಪ್ರಕರಣದಲ್ಲಿದ್ದಾರೆ. ಹೊರದೇಶದಿಂದ ಹಣ ಪಡೆದು ಅಪಪ್ರಚಾರ ನಡೆಸಲಾಗುತ್ತಿದೆ. ಕಾಂಗ್ರೆಸ್‌ನಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ಹೀಗಾಗಿ, ಸಿಬಿಐ ಅಥವಾ ಎನ್‌ಐಎ ತನಿಖೆ ಆಗಲೇಬೇಕು. ‘ಧರ್ಮಸ್ಥಳ ಚಲೋ’ವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ’ ಎಂದು ಎಚ್ಚರಿಸಿದರು.

ಧರ್ಮಸ್ಥಳದ ದ್ವಾರದಿಂದ ಪ್ರತಿಭಟನಾ ಪಾದಯಾತ್ರೆ:

ಸಮಾವೇಶದ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯಿಂದಲೇ ಕಾರ್ಯಕರ್ತರು, ನಾಯಕರು ಧರ್ಮಸ್ಥಳಕ್ಕೆ ಆಗಮಿಸತೊಡಗಿದ್ದರು. ಸೋಮವಾರ ಬೆಳಗ್ಗೆ ಪವಿತ್ರ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ, ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆದರು. ನಂತರ, ಧರ್ಮಸ್ಥಳದ ದ್ವಾರದಿಂದ ಸಮಾವೇಶದ ವೇದಿಕೆವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಯಿತು.

ದೇವಸ್ಥಾನದ ಹೊರ ಆವರಣದಲ್ಲಿ ಸಮಾವೇಶಕ್ಕಾಗಿ ಬೃಹತ್‌ ಪೆಂಡಾಲ್‌ ಹಾಕಲಾಗಿತ್ತು. ಸಮಾವೇಶ ಉದ್ಘಾಟಿಸಿದ ನಾಯಕರು, ಮಂಜುನಾಥ ಸ್ವಾಮಿಯ ಮತ್ತು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಸಮಾರಂಭಕ್ಕೆ ಮೊದಲು ವೇದಿಕೆಯಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.

ಕೇಸರಿಮಯವಾದ ಧರ್ಮಸ್ಥಳ:

ಸಮಾವೇಶದ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರ ಕೇಸರಿಮಯವಾಗಿ ಕಂಗೊಳಿಸಿತು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಪೆಂಡಾಲ್‌ನಲ್ಲಿ ಸಾವಿರಾರು ಕಾರ್ಯಕರ್ತರು ತುಂಬಿ ತುಳುಕುತ್ತಿದ್ದರು.

ಉಜಿರೆಯಿಂದ ಧರ್ಮಸ್ಥಳದವರೆಗೆ ಕೇಸರಿ ಬಣ್ಣದೊಂದಿಗೆ ಸ್ವಾಗತದ ಫಲಕಗಳು ಆಕರ್ಷಕವಾಗಿ ಕಂಗೊಳಿಸುತ್ತಿದ್ದವು. ವೇದಿಕೆಯಿಂದ ನೇತ್ರಾವತಿ ಸ್ನಾನ ಘಟ್ಟದ ವರೆಗೆ ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ವಾಹನಗಳನ್ನು ಶಿಸ್ತು ಬದ್ಧವಾಗಿ ನಿಲ್ಲಿಸಿದ್ದರಿಂದ ಯಾವುದೇ ಸಂಚಾರಕ್ಕೆ ಅಡೆತಡೆಯುಂಟಾಗಿಲ್ಲ. ಧರ್ಮಸ್ಥಳದ ದ್ವಾರದ ಬಳಿ ಮಾಹಿತಿ ಕಚೇರಿ ತೆರಯಲಾಗಿತ್ತು. ಅಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಎಲ್ಲರನ್ನೂ ಸ್ವಾಗತಿಸುತ್ತಿದ್ದರು. ಸಿಂದೂರ ಕಾರ್ಯಾಚರಣೆ ಯಶಸ್ವಿಯಾದ ಬಗ್ಗೆ ತಿಳಿಸಲು ಸೈಕಲ್ ಯಾತ್ರೆಯನ್ನು ಕೈಗೊಂಡ ಹರಿಯಾಣದ ದೀಪಕ್ ಶರ್ಮ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.

- ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವ ಹೂಳಲಾಗಿದೆ ಎಂಬ ಆರೋಪದ ಬಗ್ಗೆ ಬಿಜೆಪಿ ಕಿಡಿ

- ಇದು ಷಡ್ಯಂತ್ರ ಎಂದು ಆರೋಪಿಸಿ ನಾಯಕರು, 15000 ಕಾರ್ಯಕರ್ತರಿಂದ ಧರ್ಮಸ್ಥಳ ಚಲೋ

- ವಿಜಯೇಂದ್ರ, ಅಶೋಕ್‌, ಪ್ರಹ್ಲಾದ್‌ ಜೋಶಿ ಸೇರಿ ಅನೆಕರು ಭಾಗಿ । ಇಡೀ ಧರ್ಮಸ್ಥಳ ಕೇಸರಿಮಯ

- ದೇಶದ್ರೋಹಿಗಳು ಈ ಪ್ರಕರಣದಲ್ಲಿದ್ದಾರೆ, ಹೊರದೇಶದಿಂದ ಅಪಪ್ರಚಾರ ಆಗ್ತಿದೆ ಎಂದು ಆರೋಪ

- ಹೀಗಾಗಿ ಎಸ್‌ಐಟಿ ತನಿಖೆ ಬೇಡ, ಸಿಬಿಐ ಅಥವಾ ಎನ್‌ಐಎ ತನಿಖೆ ಆಗಲಿ ಎಂದು ನಾಯಕರ ಆಗ್ರಹ

- ಸಿದ್ದು ಸರ್ಕಾರ ಹಿಂದೂಗಳ ತಾಳ್ಮೆ ಕೆಣಕುತ್ತಿದೆ. ಜನರೇ ಉತ್ತರ ನೀಡುತ್ತಾರೆ ಎಂದು ಗುಡುಗು

PREV
Read more Articles on

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಪಿಯು ಆಂತರಿಕ ಅಂಕ : ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಆಗ್ರಹ