ನೈಸ್ ಎಕ್ಸ್‌ಪ್ರೆಸ್‌ವೇ ಹಣೆಬರಹ ನಿರ್ಧಾರಕ್ಕೆ ಸಂಪುಟ ಉಪಸಮಿತಿ - ಬಿಎಂಐಸಿ ಹೆದ್ದಾರಿ ಬೇಕೋ, ಬೇಡವೋ ತೀರ್ಮಾನ

Published : Apr 20, 2025, 07:45 AM IST
Nice Road

ಸಾರಾಂಶ

ಬೆಂಗಳೂರು-ಮೈಸೂರು ಮೂಲಸೌಲಭ್ಯ ಕಾರಿಡಾರ್‌ ಯೋಜನೆ’ (ಬಿಎಂಐಸಿ) ಪ್ರಗತಿ ಪರಿಶೀಲನೆ ನಡೆಸಿ ಯೋಜನೆ ಮುಂದುವರೆಸಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ಶಿಫಾರಸು ಮಾಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ಒಟ್ಟು 7 ಸದಸ್ಯರ ಸಚಿವ ಸಂಪುಟ ಉಪಸಮಿತಿ ರಚಿಸಿ ಸರ್ಕಾರ ಆದೇಶ

 ಬೆಂಗಳೂರು : ಬೆಂಗಳೂರು-ಮೈಸೂರು ನಡುವೆ ನೈಸ್‌ ಸಂಸ್ಥೆ ಮೂಲಕ 111 ಕಿ.ಮೀ. ಎಕ್ಸ್‌ಪ್ರೆಸ್‌ ವೇ ರಸ್ತೆ ಸೇರಿ ವಿವಿಧ ಯೋಜನೆ ನಿರ್ಮಿಸುವ ಪ್ರಸ್ತಾವನೆ ಒಳಗೊಂಡಿರುವ ‘ಬೆಂಗಳೂರು-ಮೈಸೂರು ಮೂಲಸೌಲಭ್ಯ ಕಾರಿಡಾರ್‌ ಯೋಜನೆ’ (ಬಿಎಂಐಸಿ) ಪ್ರಗತಿ ಪರಿಶೀಲನೆ ನಡೆಸಿ ಯೋಜನೆ ಮುಂದುವರೆಸಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ಶಿಫಾರಸು ಮಾಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ಒಟ್ಟು 7 ಸದಸ್ಯರ ಸಚಿವ ಸಂಪುಟ ಉಪಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಡಾ.ಜಿ.ಪರಮೇಶ್ವರ್‌ ಅವರ ಅಧ್ಯಕ್ಷತೆಯಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್‌, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೃಷ್ಣಬೈರೇಗೌಡ ಅವರನ್ನು ಸದಸ್ಯರನ್ನಾಗಿ ನೇಮಿಸಿ ಉಪಸಮಿತಿ ರಚಿಸಲಾಗಿದೆ.

ಯೋಜನೆಯಡಿ ಈವರೆಗೆ ಆಗಿರುವ ಪ್ರಗತಿ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ಸಮಿತಿಗೆ ಸೂಚನೆ ನೀಡಲಾಗಿದೆ.

ಏನಿದು ಯೋಜನೆ?:

1997ರಲ್ಲಿ ನೈಸ್‌ ಕಂಪೆನಿ ಮೂಲಕ ಬೆಂಗಳೂರು ಮೈಸೂರು ಮೂಲಸೌಕರ್ಯ ಕಾರಿಡಾರ್‌ ಯೋಜನೆಗೆ ತೀರ್ಮಾನಿಸಲಾಗಿತ್ತು. ಇದರಡಿ 111 ಕಿ.ಮೀ. ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ, 41 ಕಿ.ಮೀ. ಫೆರಿಫೆರಲ್‌ ರಸ್ತೆ, 9.8 ಕಿ.ಮೀ. ಲಿಂಕ್‌ ರಸ್ತೆ ಹಾಗೂ ಎಕ್ಸ್‌ಪ್ರೆಸ್‌ ವೇಯಲ್ಲಿ 5 ಟೌನ್‌ಶಿಪ್‌ ನಿರ್ಮಿಸಲು ಉದ್ದೇಶಿಸಲಾಗಿತ್ತು.

ಬಿಎಂಐಸಿಇ ಯೋಜನೆಗೆ ಸಂಬಂಧಿಸಿ ಕೆಐಎಡಿಬಿ ಕಾಯ್ದೆಯಂತೆ 25,616 ಎಕರೆ ಅನುಸೂಚಿತ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಲಾಗಿದೆ. 18,058 ಎಕರೆ ಖಾಸಗಿ ಜಮೀನಿಗೆ ಪ್ರಾಥಮಿಕ ಅಧಿಸೂಚನೆಯಾಗಿದ್ದು, 4809 ಎಕರೆ ಜಮೀನುಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಉಳಿದಂತೆ 13,249 ಎಕರೆ ಜಮೀನಿಗೆ ಇನ್ನೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ.

ನೈಸ್‌ ಸಂಸ್ಥೆಗೆ ಇಲ್ಲಿಯವರೆಗೆ 2191 ಎಕರೆ ಖಾಸಗಿ ಜಮೀನು ಮತ್ತು 5000 ಎಕರೆ ಸರ್ಕಾರಿ ಜಮೀನನ್ನು ಹಸ್ತಾಂತರ ಮಾಡಲಾಗಿದ್ದು, 2 ಎಕರೆ ಸರ್ಕಾರಿ ಜಮೀನು ಸೇರಿ 1,699 ಎಕರೆ ಜಮೀನಿಗೆ ಕೆಐಎಡಿಬಿಯಿಂದ ನೈಸ್‌ ಸಂಸ್ಥೆಗೆ ಶುದ್ಧ ಕ್ರಯಪತ್ರ ಮಾಡಲಾಗಿದೆ.

ಸಂಪುಟ ಉಪಸಮಿತಿ ರಚನೆ ಉದ್ದೇಶ:

ಆದರೆ ನೈಸ್‌ನ ಈ ಯೋಜನೆ ವಿಚಾರವಾಗಿ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನಲ್ಲೂ ಹಲವು ವರ್ಷಗಳಿಂದ ಪ್ರಕರಣ ವಿಚಾರಣೆ ನಡೆಯುತ್ತಲೇ ಇದೆ. ಸಿವಿಲ್‌ ನ್ಯಾಯಾಲಯದಲ್ಲಿ 189 ಪ್ರಕರಣ, ಹೈಕೋರ್ಟ್‌ನಲ್ಲಿ 164 ಪ್ರಕರಣ, ಸುಪ್ರೀಂ ಕೋರ್ಟ್‌ನಲ್ಲಿ 21 ಪ್ರಕರಣ ಸೇರಿ ಒಟ್ಟು 374 ಭೂ-ವ್ಯಾಜ್ಯ ಪ್ರಕರಣ ಬಾಕಿ ಇವೆ.

ಈ ಹಿನ್ನೆಲೆಯಲ್ಲಿ ನೈಸ್‌ ಕಂಪೆನಿ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಿ ರಸ್ತೆ ನಿರ್ಮಾಣ ಆಗಬೇಕೇ? ಬೇಡವೇ ಎಂಬ ಬಗ್ಗೆ ಶಿಫಾರಸು ಮಾಡಲು ಸಂಪುಟ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.

ಇನ್ನು ಜಮೀನು ವಿಚಾರದಲ್ಲಿ ಯೋಜನೆಗೆ ಅಗತ್ಯವಿರುವುದಕ್ಕಿಂತ ಹೆಚ್ಚು ನೀಡಿದ್ದಾರೆಯೇ ಅಥವಾ ಕಡಿಮೆ ನೀಡಿದ್ದಾರೆಯೇ ? ಎಂಬುದೂ ಸೇರಿ ಹಲವಾರು ತಾಂತ್ರಿಕ ಹಾಗೂ ಕಾನೂನಾತ್ಮಕ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಒಂದೇ ಸಭೆಯಲ್ಲಿ ತೀರ್ಮಾನಿಸಲು ಸಾಧ್ಯವಿಲ್ಲ.

ಹೀಗಾಗಿ ಈ ಹಿಂದೆ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ರಚಿಸಿದ್ದ ಸದನ ಸಮಿತಿ ವರದಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ತೀರ್ಮಾನಗಳು ಹಾಗೂ ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ಸಲ್ಲಿಸಿರುವ 100ಕ್ಕೂ ಹೆಚ್ಚು ಪ್ರಮಾಣಪತ್ರ ಎಲ್ಲವನ್ನೂ ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ಉಪಸಮಿತಿ ರಚನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ