ಚಿನ್ನಯ್ಯನ ಬೆಂಗಳೂರಿಗೆ ಕರೆತಂದು ವಿಚಾರಣೆ

Published : Aug 31, 2025, 09:17 AM IST
Dharmasthala case

ಸಾರಾಂಶ

ಧರ್ಮಸ್ಥಳದಲ್ಲಿ ಅನಧಿಕೃತ ಮೃತದೇಹ ಹೂತ ಪ್ರಕರಣದ ಹಿಂದಿನ ಸಂಚಿನ ಜಾಲವು ರಾಜಧಾನಿಗೂ ಹಬ್ಬಿದ್ದು, ಬಂಧಿತ ಆರೋಪಿ ಚಿನ್ನಯ್ಯ ಜತೆ ಬೆಂಗಳೂರಿನಲ್ಲಿ ಸಭೆ ನಡೆದಿತ್ತು ಎನ್ನಲಾದ ಬೆಳ್ತಂಗಡಿ ತಾಲೂಕಿನ ಉಜಿರೆಯ ಸಾಮಾಜಿಕ ಕಾರ್ಯಕರ್ತ ಟಿ.ಜಯಂತ್‌ ಅವರ ಮನೆಯಲ್ಲಿ  ವಿಶೇಷ ತನಿಖಾ ತಂಡ (ಎಸ್‌ಐಟಿ) ಮಹಜರ್ ನಡೆಸಿತು.

  ಬೆಂಗಳೂರು :  ಧರ್ಮಸ್ಥಳದಲ್ಲಿ ಅನಧಿಕೃತ ಮೃತದೇಹ ಹೂತ ಪ್ರಕರಣದ ಹಿಂದಿನ ಸಂಚಿನ ಜಾಲವು ರಾಜಧಾನಿಗೂ ಹಬ್ಬಿದ್ದು, ಬಂಧಿತ ಆರೋಪಿ ಚಿನ್ನಯ್ಯ ಜತೆ ಬೆಂಗಳೂರಿನಲ್ಲಿ ಸಭೆ ನಡೆದಿತ್ತು ಎನ್ನಲಾದ ಬೆಳ್ತಂಗಡಿ ತಾಲೂಕಿನ ಉಜಿರೆಯ ಸಾಮಾಜಿಕ ಕಾರ್ಯಕರ್ತ ಟಿ.ಜಯಂತ್‌ ಅವರ ಮನೆಯಲ್ಲಿ ಶನಿವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಹಜರ್ ನಡೆಸಿತು.

ಪೀಣ್ಯ ಸಮೀಪದ ಮಲ್ಲಸಂದ್ರದಲ್ಲಿರುವ ಜಯಂತ್ ಅವರ ಮನೆಗೆ ಆರೋಪಿ ಚಿನ್ನಯ್ಯನನ್ನು ಕರೆತಂದ ಎಸ್ಐಟಿ ಎಸ್ಪಿ ಸೈಮನ್‌ ನೇತೃತ್ವದ ತಂಡ, ಆ ಮನೆಯಲ್ಲಿ ಎಂಟು ತಾಸು ಪರಿಶೀಲನೆ ನಡೆಸಿ ದಾಖಲೆಗಳು ಸೇರಿ ಕೆಲ ವಸ್ತುಗಳನ್ನು ಜಪ್ತಿ ಮಾಡಿದೆ. ಅಲ್ಲದೆ, ತನ್ನ ಮನೆಯಲ್ಲಿ ನಾಲ್ಕು ತಿಂಗಳ ಹಿಂದೆ ಚಿನ್ನಯ್ಯನಿಗೆ ಆಶ್ರಯ ನೀಡಿದ್ದನ್ನು ಜಯಂತ್ ಒಪ್ಪಿಕೊಂಡಿದ್ದಾರೆ.

ಜಯಂತ್ ಮನೆಯಲ್ಲಿ ಚಿನ್ನಯ್ಯ:

ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಪೀಣ್ಯ ಸಮೀಪದ ಮಲ್ಲಸಂದ್ರದಲ್ಲಿ ಟಿ.ಜಯಂತ್ ನೆಲೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಅವರ ಪತ್ನಿ ಉದ್ಯೋಗದಲ್ಲಿದ್ದರೆ, ಮಲ್ಲಸಂದ್ರದಲ್ಲಿ ಗಾಣದ ಎಣ್ಣೆ ಮಾರಾಟ ಘಟಕವನ್ನು ಜಯಂತ್ ನಡೆಸುತ್ತಿದ್ದಾರೆ. ಧರ್ಮಸ್ಥಳದ ಅನಧಿಕೃತ ಮೃತದೇಹಗಳನ್ನು ಮಣ್ಣು ಮಾಡಲಾಗಿದೆ ಎಂದು ಜೋರು ದನಿಯಲ್ಲಿ ಗಂಭೀರ ಆರೋಪ ಮಾಡಿದವರ ಪೈಕಿ ಜಯಂತ್ ಸಹ ಒಬ್ಬರು. ಅಲ್ಲದೆ ಈ ಪ್ರಕರಣದಲ್ಲಿ ತಲೆಬುರುಡೆ ತಂದುಕೊಟ್ಟ ಚಿನ್ನಯ್ಯನ ಜತೆ ಸಹ ಅವರಿಗೆ ಸಂಪರ್ಕ ಇತ್ತು ಎಂಬ ಆರೋಪವಿದೆ.

ಹೀಗಾಗಿ ಜಯಂತ್‌ಗೆ ಎಸ್‌ಐಟಿ ತನಿಖೆ ಉರುಳು ಸುತ್ತಿಕೊಳ್ಳುತ್ತಿದೆ. ತಲೆಬುರುಡೆ ತಂದು ಕೊಡುವ ಮುನ್ನ ಏಪ್ರಿಲ್‌ನಲ್ಲಿ ಬೆಂಗಳೂರಿಗೆ ಬಂದು ಜಯಂತ್ ಆಶ್ರಯದಲ್ಲಿ ಚಿನ್ಯಯ್ಯ ಇದ್ದ ಸಂಗತಿ ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಅಲ್ಲದೆ, ತಾನು ಹತ್ತು ವರ್ಷಗಳ ಹಿಂದೆ ಧರ್ಮಸ್ಥಳ ತೊರೆದ ಬಳಿಕ ಎಲ್ಲೆಲ್ಲಿ ನೆಲೆಸಿದ್ದ ಎಂಬ ಜೀವನದ ಪಯಣ ವಿಚಾರವನ್ನು ಎಸ್‌ಐಟಿ ವಿಚಾರಣೆ ವೇಳೆ ಚಿನ್ನಯ್ಯ ಬಾಯ್ಬಿಟ್ಟಿದ್ದ. ಈ ಮಾಹಿತಿ ಹಿನ್ನಲೆಯಲ್ಲಿ ಮಲ್ಲಸಂದ್ರದಲ್ಲಿರುವ ಜಯಂತ್‌ ಮನೆಗೆ ಮಹಜರ್‌ಗೆ ಎಸ್‌ಐಟಿ ನಿರ್ಧರಿಸಿತ್ತು.

ಅಂತೆಯೇ ಧರ್ಮಸ್ಥಳದಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಮಲ್ಲಸಂದ್ರದ ಜಯಂತ್ ಮನೆಗೆ ಶನಿವಾರ ಮಧ್ಯಾಹ್ನ 1.30 ಗಂಟೆಗೆ ಎಸ್‌ಐಟಿ ಅಧಿಕಾರಿಗಳು ಕರೆತಂದರು. ಬಳಿಕ ರಾತ್ರಿ 8.30ವರೆಗೆ ಆತನ ಮನೆಯಲ್ಲಿ ಆರೋಪಿ ಸಮಕ್ಷಮದಲ್ಲಿ ಅಧಿಕಾರಿಗಳು ಮಹಜರ್ ನಡೆಸಿದರು. ಈ ವೇಳೆ ಜಯಂತ್ ಅವರ ಪತ್ನಿ ಹಾಗೂ ಮಕ್ಕಳು ಇದ್ದರು. ಈ ಮನೆಯಲ್ಲಿ ಏ.8 ರಿಂದ ಮೂರು ದಿನಗಳು ಚಿನ್ನಯ್ಯ ಇದ್ದ. ಕ್ಯಾಲೆಂಡರ್‌ ತೋರಿಸಿ ಆತ ದಿನಾಂಕವನ್ನು ಗುರುತು ಪತ್ತೆ ಹಚ್ಚಿದ್ದಾನೆ ಎಂದು ತಿಳಿದು ಬಂದಿದೆ.

ತಲೆಬರುಡೆ ಸಭೆ?

ಜಯಂತ್ ಮನೆಯಲ್ಲೇ ತಲೆಬರುಡೆ ಸುಳ್ಳಿನ ಕತೆಯ ಸಂಚಿನ ಕುರಿತು ಚಿನ್ನಯ್ಯನ ಜತೆ ಸಂಚುಕೋರರು ಸಭೆ ನಡೆಸಿದ್ದರು ಎಂಬ ಆರೋಪವಿದೆ. ಇದರಲ್ಲಿ ಜಯಂತ್‌ ಹಾಗೂ ಗಿರೀಶ್ ಮಟ್ಟಣ್ಣವರ್ ಭಾಗಿಯಾಗಿದ್ದರು ಬಗ್ಗೆ ಮಾಹಿತಿ ಇದೆ ಎಂದು ಮೂಲಗಳು ಹೇಳಿವೆ.

PREV
Read more Articles on

Recommended Stories

ವೃಷಭಾವತಿ ವಿಚಾರದಲ್ಲಿ ರಿಯಲ್ಎ ಸ್ಟೇಟ್ ಮಾಫಿಯಾದ ಅಪಪ್ರಚಾರ
ತೆರಿಗೆ ಪಾವತಿಯಲ್ಲಿ ಕರ್ನಾಟಕದ್ದು ಎರಡನೇ ಸ್ಥಾನ