ದೇಶದಲ್ಲಿ 70 ದಿನಕ್ಕೆ ಆಗವಷ್ಟು ತೈಲ ದಾಸ್ತಾನು ಇದೆ: ಜೋಶಿ

Published : Mar 05, 2026, 04:50 AM IST
Prahlad Joshi

ಸಾರಾಂಶ

ಭಾರತದಲ್ಲಿ ಗ್ಯಾಸ್, ಪೆಟ್ರೋಲ್, ಡಿಸೇಲ್ ಸೇರಿದಂತೆ 70 ದಿನಕ್ಕಾಗುವಷ್ಟು ತೈಲ ದಾಸ್ತಾನು ಇದ್ದು, ಯುದ್ಧದ ಕಾರಣಕ್ಕೆ ನಮ್ಮ ದೇಶದಲ್ಲಿ ಯಾವುದೇ ಕೊರತೆ ಆಗದಂತೆ 37 ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

 ಹುಬ್ಬಳ್ಳಿ : ಭಾರತದಲ್ಲಿ ಗ್ಯಾಸ್, ಪೆಟ್ರೋಲ್, ಡಿಸೇಲ್ ಸೇರಿದಂತೆ 70 ದಿನಕ್ಕಾಗುವಷ್ಟು ತೈಲ ದಾಸ್ತಾನು ಇದ್ದು, ಯುದ್ಧದ ಕಾರಣಕ್ಕೆ ನಮ್ಮ ದೇಶದಲ್ಲಿ ಯಾವುದೇ ಕೊರತೆ ಆಗದಂತೆ 37 ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳ ಪರಿಣಾಮ ಭಾರತದ ಮೇಲೆ ಆಗದ ರೀತಿಯಲ್ಲಿ ನಿಗಾವಹಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಸಂಬಂಧ ಹಗಲು-ರಾತ್ರಿ ಎನ್ನದೇ ದೇಶದ ಹಿತ ಕಾಯಲು ಪ್ರಯತ್ನಿಸುತ್ತಿದ್ದಾರೆ. ಹಂತ ಹಂತವಾಗಿ ಎಲ್ಲ ಬಿಕ್ಕಟ್ಟುಗಳು ಬಗೆಹರಿಯಲಿದೆ. ಇದೆಲ್ಲವನ್ನೂ ತಿಳಿದೂ ತಿಳಿಯದಂತೆ ವರ್ತಿಸುತ್ತಿರುವ ಮತ್ತು ವಿರೋಧಿಸುತ್ತಿರುವ ಮೂರ್ಖರಿಗೆ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.

ರಾಜ್ಯ ಸರ್ಕಾರದಿಂದ ವಿದ್ಯುತ್‌ ಏರಿಕೆ:

ರಾಜ್ಯ ಕಾಂಗ್ರೆಸ್‌ ಸರ್ಕಾರ ವಿದ್ಯುತ್‌ ಬೆಲೆ ಏರಿಕೆ ಮಾಡುವ ಮೂಲಕ ಜನತೆಗೆ ವಿದ್ಯುತ್‌ ಶಾಕ್‌ ನೀಡಲು ಮುಂದಾಗಿದೆ. ಇದರೊಂದಿಗೆ ನೋಂದಣಿ ಶುಲ್ಕ, ಪೆಟ್ರೋಲ್-ಡೀಸೆಲ್ ಸೇರಿದಂತೆ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ದರ ಹೆಚ್ಚಳ ಮಾಡುವುದರೊಂದಿಗೆ ಸಾರ್ವಕಾಲಿಕ ದಾಖಲೆ ಬರೆದಿದೆ. ಇದು ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಜೋಶಿ ಆರೋಪಿಸಿದ್ದಾರೆ.

ಗ್ಯಾರಂಟಿಗಳಿಂದಾಗಿ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಕಂಪನಿಗಳಿಗೆ ಸರ್ಕಾರ ನೀಡಬೇಕಾದ ₹35 ಸಾವಿರ ಕೋಟಿ ಬಾಕಿ ಇದೆ. ಆ ಕಾರಣಕ್ಕೆ ಇಲಾಖೆಗಳು ತಮ್ಮ ನಷ್ಟವನ್ನು ಗ್ರಾಹಕರಿಂದ ಭರಣ ಮಾಡಿಕೊಳ್ಳಲು ವಿದ್ಯುತ್ ದರ ಏರಿಸುವ ಪ್ರಸ್ತಾವನೆ ಸಲ್ಲಿಸಿವೆ. ಇದಕ್ಕೆ ರಾಜ್ಯ ಸರ್ಕಾರ ಕೂಡ ಹಸಿರು ನಿಶಾನೆ ತೋರಿದೆ ಎಂದರು.

ಸಿದ್ದು ಕತ್ತೆ ಕಾಯುತ್ತಿದ್ದರೆ?:

ಟೆಲಿಫೋನ್ ಕದ್ದಾಲಿಕೆಯ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಇಂಟಲಿಜೆನ್ಸ್ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ ಎಂದು ಸ್ವತಃ ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ. ಹಾಗಿದ್ದರೆ ಯಾತಕ್ಕಾಗಿ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು. ಇದು ಗಂಭೀರ ಆರೋಪ ಆಗಿರುವುದರಿಂದ ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕು. ಈ ಹಿಂದೆ ಕುಮಾರಸ್ವಾಮಿ ಸಿಎಂ ಇದ್ದಾಗಲೂ ಫೋನ್‌ ಕದ್ದಾಲಿಕೆ ಆಗಿದೆ ಎನ್ನುವ ಕಾಂಗ್ರೆಸ್ ನಾಯಕರು ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದರು. ಆಮೇಲೂ ಬಹುಪಾಲು ಕಾಂಗ್ರೆಸ್ ಸರ್ಕಾರವೇ ಆಳ್ವಿಕೆ ನಡೆಸಿದೆ. ಆಗ ಸಿಎಂ ಸಿದ್ದರಾಮಯ್ಯ ಕತ್ತೆ ಕಾಯುತ್ತಿದ್ದರೆ ಎಂದು ಪ್ರಶ್ನಿಸಿದ್ದಾರೆ.

ಆಲ್ಕೋಹಾಲಿನ ಸಂಬಂಧ

ನಾನು ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಹಾಲು-ಜೇನು ಇದ್ದಂತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಇವರದ್ದು ಹಾಲು-ಜೇನಲ್ಲ, ಆಲ್ಕೋಹಾಲ್ ಮತ್ತು ಲಿಂಬೆಹಣ್ಣಿನ ಸಂಬಂಧ. ಅಧಿಕಾರಕ್ಕಾಗಿ ನಡೆದಿರುವ ಆಂತರಿಕ ಕಚ್ಚಾಟದ ಕಾರಣಕ್ಕೆ ರಾಜ್ಯ ಉಸ್ತುವಾರಿ ಸುರ್ಜೇವಾಲ್ ಕರ್ನಾಟಕಕ್ಕೆ ಬರುತ್ತಿಲ್ಲ.

- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ಡಿಕೆ ದೆಹಲಿಗೆ ಬಂದಲ್ಲಿ ಸಹಾಯ ಮಾಡುವೆ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಆಂಧ್ರಪ್ರದೇಶ ಅಡ್ಡಗಾಲು ಹಾಕುತ್ತಿದೆ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೋಶಿ, ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಆಲಮಟ್ಟಿ ಜಲಾಶಯ ಅಭಿವೃದ್ಧಿಗೆ ಪ್ರತಿವರ್ಷ ₹10 ಸಾವಿರ ಕೋಟಿ ಅನುದಾನ ನೀಡುವ ಭರವಸೆ ನೀಡಿತ್ತು. ಆದರೆ, ಅದು ಆಗಲೇ ಇಲ್ಲ. ಕಾಂಗ್ರೆಸ್ ಹೇಳಿದಂತೆ ನಡೆದುಕೊಂಡಿದ್ದರೆ ಈ ಸಮಸ್ಯೆಯೇ ಉದ್ಭವವಾಗುತ್ತಿರಲಿಲ್ಲ. ಅದಾಗ್ಯೂ ಡಿಕೆಶಿ ದೆಹಲಿಗೆ ಬಂದರೆ ಕರ್ನಾಟಕದ ಹಿತದೃಷ್ಟಿಯಿಂದ ಏನು ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುವೆ ಎಂದು ಭರವಸೆ ನೀಡಿದರು.

 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರತಿಷ್ಠಿತ ಯುಗಾದಿ ಪುರಸ್ಕಾರ ಪ್ರಕಟ
ಗೃಹಲಕ್ಷ್ಮಿಯರಿಗೆ ವರ್ಷಕ್ಕೆ 2 ಸೀರೆ ? - ‘ಇಂದಿರಾ ಕಿಟ್‌’ ಯೋಜನೆ : ಮತ್ತೇನು ಸಿಗಲಿದೆ?