ಗೃಹಲಕ್ಷ್ಮಿಯರಿಗೆ ವರ್ಷಕ್ಕೆ 2 ಸೀರೆ ? - ‘ಇಂದಿರಾ ಕಿಟ್‌’ ಯೋಜನೆ : ಮತ್ತೇನು ಸಿಗಲಿದೆ?

Published : Mar 05, 2026, 03:19 AM IST
Gruhalakshmi

ಸಾರಾಂಶ

ಅನ್ನಭಾಗ್ಯ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದೊಂದಿಗೆ ಇಂದಿರಾ ಆಹಾರ ಕಿಟ್‌ ಯೋಜನೆ, ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಸಹಾಯಧನದ ಜತೆಗೆ ಸೀರೆ ವಿತರಣೆ, ವಸತಿ ಹಂಚಿಕೆ ಗೊಂದಲ ನಿವಾರಿಸಲು ನೂತನ ಯೋಜನೆ!

ಗಿರೀಶ್ ಗರಗ

 ಬೆಂಗಳೂರು :  ಅನ್ನಭಾಗ್ಯ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದೊಂದಿಗೆ ಇಂದಿರಾ ಆಹಾರ ಕಿಟ್‌ ಯೋಜನೆ, ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಸಹಾಯಧನದ ಜತೆಗೆ ಸೀರೆ ವಿತರಣೆ, ವಸತಿ ಹಂಚಿಕೆ ಗೊಂದಲ ನಿವಾರಿಸಲು ನೂತನ ಯೋಜನೆ!

ಗ್ಯಾರಂಟಿ ಯೋಜನೆಗಳಿಗೆ ಸಂಪೂರ್ಣ ಹಣ ಒದಗಿಸುತ್ತಲೇ ಇನ್ನಷ್ಟು ಜನರಿಗೆ ನೇರ ಲಾಭ ತಂದುಕೊಡುವ ಇಂದಿರಾ ಕಿಟ್ ಸೇರಿ ಹಲವು ಯೋಜನೆಗಳನ್ನು ಆಯವ್ಯಯದಲ್ಲಿ ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದತೆ ನಡೆಸಿದ್ದು, ಈ ಬಾರಿಯ ಬಜೆಟ್‌ ಗಾತ್ರ 4.50 ಲಕ್ಷ ಕೋಟಿ ರು. ಸಮೀಪಿಸುವ ಸಾಧ್ಯತೆಗಳಿವೆ.

ಈವರೆಗೆ ಗ್ಯಾರಂಟಿ ಯೋಜನೆಗಳತ್ತಲೇ ಹೆಚ್ಚಿನ ಗಮನಹರಿಸಲಾಗಿದ್ದ ಬಜೆಟ್‌ನಲ್ಲಿ ಈ ಬಾರಿ ಹಲವು ಹೊಸ ಯೋಜನೆಗಳ ಘೋಷಣೆಗೆ ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಶುಕ್ರವಾರ ಮಂಡನೆಯಾಗಲಿರುವ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಜನಪರ ಯೋಜನೆಗಳ ಘೋಷಣೆ ಮಾಡಲಾಗುತ್ತಿದೆ. ಪ್ರಮುಖವಾಗಿ ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ಜತೆಗೆ ಇಂದಿರಾ ಆಹಾರ ಕಿಟ್‌ ನೀಡಲು ಅನುದಾನ ಮೀಸಲಿಡಲಾಗುತ್ತಿದೆ.

ಸದ್ಯ ಅನ್ನಭಾಗ್ಯ ಅಡಿ ಪ್ರತಿ ಫಲಾನುಭವಿಗೆ 10 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಅದರ ಬದಲು 5 ಕೆ.ಜಿ. ಅಕ್ಕಿ ನೀಡಿ ಉಳಿದ 5 ಕೆ.ಜಿ. ಅಕ್ಕಿ ಬದಲಿಗೆ ತಲಾ 1 ಕೆ.ಜಿ. ತೊಗರಿ ಬೇಳೆ, ಹೆಸರು ಕಾಳು, ಸಕ್ಕರೆ, ಉಪ್ಪು, 1 ಲೀ. ಅಡುಗೆ ಎಣ್ಣೆಯನ್ನೊಳಗೊಂಡ ಇಂದಿರಾ ಆಹಾರ ಕಿಟ್‌ ನೀಡುವ ಘೋಷಣೆ ಮಾಡಲಾಗುತ್ತಿದೆ. ಅದಕ್ಕೆ ಅಗತ್ಯವಿರುವ ಸೂಕ್ತ ಅನುದಾನ ಬಜೆಟ್‌ನಲ್ಲಿ ಮೀಸಲಿಡಲಾಗುತ್ತಿದೆ.

ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಸದ್ಯ ಮಾಸಿಕ ತಲಾ 2 ಸಾವಿರ ರು. ವಿತರಿಸಲಾಗುತ್ತಿದೆ. ಒಟ್ಟು 1.24 ಕೋಟಿ ಮಹಿಳೆಯರು ಯೋಜನೆ ಲಾಭ ಪಡೆಯುತ್ತಿದ್ದು, ಅವರಿಗೆ ವಾರ್ಷಿಕ ತಲಾ 2 ಸೀರೆ ನೀಡುವ ಯೋಜನೆ ಘೋಷಿಸುವ ಸಾಧ್ಯತೆಗಳಿವೆ. ಈ ಸೀರೆಯನ್ನು ಲಕ್ಷ್ಮೀ ಸ್ವ-ಸಹಾಯ ಸಂಘಗಳ ಮೂಲಕ ವಿತರಿಸುವ ನಿರೀಕ್ಷೆಯಿದೆ.

ಅವುಗಳ ಜತೆಗೆ ಆಶ್ರಯ ಯೋಜನೆ ಸೇರಿ ಇನ್ನಿತರ ವಸತಿ ಯೋಜನೆ ಅಡಿ ಮನೆ ನೀಡುತ್ತಿಲ್ಲ ಎಂಬ ಆರೋಪದಿಂದ ಮುಕ್ತವಾಗುವ ಕ್ರಮವನ್ನು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಗಳಿವೆ. ಸರ್ಕಾರದ ಏಳನೇ ಗ್ಯಾರಂಟಿಯಾಗಿ ವಸತಿ ಹಂಚಿಕೆ ಕುರಿತು ಯೋಜನೆ ಘೋಷಿಸಲಾಗುತ್ತಿದೆ. ಉಳಿದಂತೆ ಗ್ರಾಪಂಗಳಿಗೆ ಮಹಾತ್ಮ ಗಾಂಧೀಜಿ ಅವರ ಹೆಸರಿಡುವುದು, ಗ್ರಾಮೀಣ ಭಾಗದಲ್ಲಿನ ಕಾಲು ಸಂಕ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆಗಳಿವೆ.

ಯುಕೆಪಿಗೆ ಅನುದಾನ ನಿಗದಿ?:

3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ 1.33 ಲಕ್ಷ ಎಕರೆ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ. ಅಷ್ಟು ಪ್ರಮಾಣದ ಭೂಮಿ ಸ್ವಾಧೀನಕ್ಕಾಗಿ 70 ಸಾವಿರ ಕೋಟಿ ರು. ಬೇಕಾಗಲಿದೆ. ಆ ಮೊತ್ತವನ್ನು ಹಂತಹಂತವಾಗಿ ಸರ್ಕಾರದಿಂದ ಬಿಡುಗಡೆ ಮಾಡುವುದಾಗಿಯೂ ಈಗಾಗಲೇ ತಿಳಿಸಲಾಗಿದೆ. ಅದರಂತೆ ಶುಕ್ರವಾರ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಸುಮಾರು 8ರಿಂದ 15 ಸಾವಿರ ಕೋಟಿ ರು.ಗಳನ್ನು ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನಕ್ಕಾಗಿ ಮೀಸಲಿಡಿರುವ ನಿರೀಕ್ಷೆಯಿದೆ.

ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿಯ ವರದಿಯಲ್ಲಿರುವಂತೆ ಹಿಂದುಳಿದಿರುವ 172 ತಾಲೂಕುಗಳಲ್ಲಿ ಮುಂದಿನ 5 ವರ್ಷಗಳಲ್ಲಿ 43,914 ಕೋಟಿ ರು. ಆರ್ಥಿಕ ನೆರವು ನೀಡುವಂತೆ ತಿಳಿಸಲಾಗಿದೆ. ಅದರ ಪ್ರಕಾರ ಪ್ರಸಕ್ತ ವರ್ಷದ ಭಾಗವಾಗಿ 8,500ರಿಂದ 9,000 ಕೋಟಿ ರು. ಅನ್ನು ಬಜೆಟ್‌ನಲ್ಲಿ ಮೀಸಲಿಡಲಾಗುತ್ತಿದೆ. ಅಲ್ಲದೆ, ಆ ಅನುದಾನದಲ್ಲಿ ಹಿಂದುಳಿದ ತಾಲೂಕುಗಳಲ್ಲಿ ಕೈಗೊಳ್ಳಲಿರುವ ಯೋಜನೆಗಳನ್ನೂ ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ.

4.50 ಲಕ್ಷ ಕೋಟಿ ರು. ಬಜೆಟ್‌ ಗಾತ್ರ?:

ಬಜೆಟ್‌ ಗಾತ್ರ ಈ ಬಾರಿ 4.50 ಲಕ್ಷ ಕೋಟಿ ರು. ತಲುಪುವ ಸಾಧ್ಯತೆಗಳಿವೆ. 2025-26ರಲ್ಲಿ 4.09 ಲಕ್ಷ ಕೋಟಿ ರು. ಮೊತ್ತದ ಮುಂಗಡಪತ್ರ ಮಂಡಿಸಲಾಗಿತ್ತು. ವೇತನ ಹೆಚ್ಚಳ, ಹಣದುಬ್ಬರ ಸೇರಿ ಮತ್ತಿತರ ಕಾರಣಗಳಿಂದಾಗಿ ಈ ಬಾರಿ ಬಜೆಟ್‌ ಗಾತ್ರ 40 ಸಾವಿರ ಕೋಟಿ ರು. ಹಿಗ್ಗುವ ನಿರೀಕ್ಷೆಯಿದೆ. ಅದರಂತೆ ಆಯವ್ಯಯ ಗಾತ್ರ 4.50 ಲಕ್ಷ ಕೋಟಿ ರು. ಆಸುಪಾಸಿನಲ್ಲಿರಲಿದೆ.

ವಿತ್ತೀಯ ಹೊಣೆಗಾರಿಕೆ ಅಡಿಯಲ್ಲಿಯಲ್ಲಿ ರಾಜ್ಯದ ಸಾಲದ ಪ್ರಮಾಣ ಹಿಗ್ಗಿಸಲಾಗುತ್ತಿದೆ. 2025-26ನೇ ಸಾಲಿಗೆ 1.14 ಲಕ್ಷ ಕೋಟಿ ರು. ಸಾಲ ಪಡೆಯುವುದಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. 2026-27ನೇ ಸಾಲಿಗೂ ಅಷ್ಟೇ ಪ್ರಮಾಣದ ಸಾಲ ಪಡೆಯುವ ಕುರಿತು ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆ ಇದೆ.

ಜನಸಾಮಾನ್ಯರಿಗೆ ಹೊರೆ?:

ಬಜೆಟ್‌ನಲ್ಲಿ ಜನರಿಗೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆಗಳಿವೆ. ಪ್ರಮುಖವಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸೆಸ್‌ 1 ರು. ಹೆಚ್ಚಳ, ಅಬಕಾರಿ ಸುಂಕ, ನೋಂದಣಿ ಮತ್ತು ಮುಂದ್ರಾಂಕ ಶುಲ್ಕ, ಮೋಟಾರು ವಾಹನ ತೆರಿಗೆ ಸೇರಿದಂತೆ ಮತ್ತಿತರ ತೆರಿಗೆ ಪ್ರಮಾಣ ಹೆಚ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಒಳಮೀಸಲು ಬಿಸಿತುಪ್ಪಕ್ಕೆ ಇಂದು ಸಂಪುಟ ಪರಿಹಾರ?
ಒಂದೇ ಕೊಠಡಿಯಲ್ಲಿ ಕೆಎಎಸ್‌ ಪರೀಕ್ಷೆ ಬರೆದ 15 ಮಂದಿ ಸಂದರ್ಶನಕ್ಕೆ ಆಯ್ಕೆ!