ಅನುಕಂಪದ ನೌಕರಿಗೆ ಅರ್ಜಿ ಬಂದ್ರೆ 90 ದಿನದೊಳಗೆ ನಿರ್ಧರಿಸಿ: ಹೈಕೋರ್ಟ್‌

Published : Aug 01, 2025, 09:44 AM IST
Karnataka High Court (Photo/ANI)

ಸಾರಾಂಶ

ಅನುಕಂಪದ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ವಿಳಂಬ ತಪ್ಪಿಸುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ರಚಿಸಿರುವ ಹೈಕೋರ್ಟ್‌

 ಬೆಂಗಳೂರು :  ಅನುಕಂಪದ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ವಿಳಂಬ ತಪ್ಪಿಸುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ರಚಿಸಿರುವ ಹೈಕೋರ್ಟ್‌, ಆವುಗಳನ್ನು ಪಾಲನೆ ಮಾಡುವಂತೆ ಸರ್ಕಾರಕ್ಕೆ ಆದೇಶಿಸಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಹಸೀಲ್ದಾರ್ ಕಚೇರಿಯಲ್ಲಿ ಜವಾನ ಆಗಿದ್ದ ರಾಜಾ ಪಟೇಲ್ ಬಂಡಾ ನಿಧನದ ನಂತರ ಆತನ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಸರ್ಕಾರ ವಿಳಂಬ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್ ನೇತೃತ್ವದ ವಿಭಾಗೀಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಎಂಟು ವಾರಗಳಲ್ಲಿ ಮೃತ ನೌಕರನ ಪುತ್ರ ಮಹಬೂಬ್‌ಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.

ಮಾರ್ಗಸೂಚಿಗಳು:

ಎಲ್ಲ ಅನುಕಂಪದ ನೇಮಕಾತಿ ಅರ್ಜಿಗಳನ್ನು 30 ದಿನಗಳ ಒಳಗೆ ಲಿಖಿತವಾಗಿ ಸ್ವೀಕರಿಸಬೇಕು. ಅರ್ಜಿಗಳನ್ನು ಸಲ್ಲಿಸಲು ಕಾಲಮಿತಿ ನಿಗದಿಪಡಿಸಬೇಕು. ಇಲಾಖೆಗಳು ಮೃತ ಉದ್ಯೋಗಿಯ ವ್ಯಕ್ತಿಯ ವಾರಸುದಾರರು, ಮೃತನ ಅವಲಂಬಿತರಿಗೆ ಸರಿಯಾದ ಅರ್ಜಿ ಸಲ್ಲಿಸಲು ಮಾರ್ಗದರ್ಶನ ನೀಡಬೇಕು. ಅರ್ಜಿ ಸಲ್ಲಿಕೆಯಾದ ನಂತರದ 90 ದಿನಗಳ ಒಳಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಅರ್ಜಿಗಳನ್ನು ತಿರಸ್ಕರಿಸಿದ ಸಂದರ್ಭದಲ್ಲಿ ಸಮಂಜಸವಾದ ಕಾರಣ ನೀಡಬೇಕು. ಈ ಕುರಿತ ಪ್ರಕ್ರಿಯೆಗೆ ಏಕರೂಪದ ಪ್ರಮಾಣಿತ ಕಾರ್ಯಾಚರಣಾ ವಿಧಾನ(ಎಸ್ಒಪಿ) ಜಾರಿಗೆ ತರಬೇಕು. ಅನುಕಂಪದ ಆಧಾರದ ಮೇಲೆ ನೇಮಕಾತಿಗಳನ್ನು ಮಾಡುವ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಎಂದು ಹೈಕೋರ್ಟ್‌ ಮಾರ್ಗಸೂಚಿ ಪ್ರಕಟಿಸಿದೆ.

ಪ್ರಕರಣದ ಹಿನ್ನೆಲೆ:

ರಾಜಾ ಪಟೇಲ್ 2014ರ ಡಿ.16ರಂದು ನಿಧನರಾಗಿದ್ದರು. ಅವರ ನಾಲ್ವರು ಪುತ್ರರಲ್ಲಿ ಒಬ್ಬರಿಗೆ ಅನುಕಂಪ ನೇಮಕಾತಿ ಕೋರಿ ಮೃತನ ಪತ್ನಿ 2015ರ ಜ.2ರಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಉತ್ತರಿಸಲು ವಿಳಂಬ ಮಾಡಿದ್ದ ಸರ್ಕಾರ ನಂತರ ವಯಸ್ಸು ಕಡಿಮೆಯಿದೆ ಎಂದು ಉದ್ಯೋಗ ನೀಡಲಿಲ್ಲ. ಬಳಿಕ ಮತ್ತೊಬ್ಬ ಮಗ ಮಹಬೂಬ್ 2017ರ ಫೆ.23ರಂದು ಅರ್ಜಿ ಸಲ್ಲಿಸಿದ್ದರು. ನಿಯಮ ಪ್ರಕಾರ ವರ್ಷದೊಳಗೆ ಅರ್ಜಿ ಸಲ್ಲಿಸಬೇಕು. ಆದರೆ, ಈ ಕಾಲಮಿತಿ ಮೀರಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದ ಸರ್ಕಾರ ಅರ್ಜಿ ತಿರಸ್ಕರಿಸಿತ್ತು. ಇದರಿಂದ ಮೃತ ನೌಕರನ ಪತ್ನಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ ) ಮೊರೆ ಹೋಗಿದ್ದರು. ಅರ್ಜಿ ಪುರಸ್ಕರಿಸಿದ್ದ ಕೆಎಟಿ, ಮಹಬೂಬ್‌ಗೆ ಉದ್ಯೋಗ ನೀಡುವಂತೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ