;Resize=(412,232))
ಬೆಂಗಳೂರು : ಮುಂದಿನ ಐದು ವರ್ಷಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿನ ಕೋಚಿಂಗ್ ಟರ್ಮಿನಲ್‌ಗಳ ಸಾಮರ್ಥ್ಯ ದ್ವಿಗುಣಗೊಳಿಸಲು ಭಾರತೀಯ ರೈಲ್ವೆ ಇಲಾಖೆ ಉದ್ದೇಶಿಸಿದ್ದು, ರಾಜ್ಯದಲ್ಲಿ ನೈಋತ್ಯ ರೈಲ್ವೆಯ ಬೆಂಗಳೂರು ಹಾಗೂ ಮೈಸೂರು ವಿಭಾಗದ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡಿದೆ.
ಹತ್ತು ಪ್ಲಾಟ್‌ಫಾರ್ಮ್ ಹೊಂದಿರುವ ಬೆಂಗಳೂರಿನ ಕೆಎಸ್‌ಆರ್ ರೈಲ್ವೆ ನಿಲ್ದಾಣ ಸದ್ಯ ಪ್ರತಿದಿನ 151 ರೈಲುಗಳ ನಿರ್ವಹಣೆ ಮಾಡುತ್ತಿದೆ. 13 ರನ್ನಿಂಗ್‌ಲೈನ್ 6 ಸ್ಟ್ಯಾಬ್ಲಿಂಗ್ ಲೈನ್ ಹಾಗೂ 5 ಪಿಟ್‌ಲೈನ್‌ಗಳನ್ನು ರೈಲ್ವೆ ನಿಲ್ದಾಣ ಹೊಂದಿದೆ. ಇದೀಗ ಹೆಚ್ಚುವರಿ ಎರಡು ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ನಿರ್ವಹಣಾ ಲೈನ್‌ಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಿ ಪ್ರಯಾಣಿಕರ ರೈಲುಗಳ ಅನುಕೂಲಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಯಶವಂತಪುರ ಜಂಕ್ಷನ್ ಪ್ರತಿದಿನ 106 ರೈಲುಗಳನ್ನು ನಿರ್ವಹಣೆ ಮಾಡುತ್ತಿದೆ. ಇಲ್ಲಿ ಸಬ್ ಅರ್ಬನ್ ರೈಲಿನ ಎರಡು ಸೇರಿ ಒಟ್ಟು ಹೆಚ್ಚುವರಿ ನಾಲ್ಕು ಪ್ಲಾಟ್‌ಫಾರ್ಮ್ ನಿರ್ಮಿಸಲು ಉದ್ದೇಶಿಸಲಾಗಿದೆ. ಜತೆಗೆ ಹೆಚ್ಚುವರಿ ಸ್ಟ್ಯಾಬ್ಲಿಂಗ್ ಲೈನ್ ಕೂಡ ನಿರ್ಮಾಣ ಆಗಲಿದೆ. ಈ ಮೂಲಕ ಕೆಎಸ್‌ಆರ್ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ತೀರ್ಮಾನಿಸಲಾಗಿದೆ.
ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ಕಾರ್ಯಾಚರಣೆ ಸುಧಾರಿಸಲು ಕ್ರಮ ವಹಿಸಲಾಗುತ್ತಿದೆ. ಜತೆಗೆ ಒಟ್ಟಾರೆ ವಿಭಾಗೀಯ ಸಾಮರ್ಥ್ಯ ಮತ್ತು ಸಮಯಪಾಲನೆ ಸುಧಾರಿಸಲು, ಬೆಳ್ಳಂದೂರು ರಸ್ತೆ, ಚನ್ನಸಂದ್ರ, ಚಿಕ್ಕಬಾಣಾವರ, ಹುಸ್ಕೂರು, ದೊಡ್ಡಬೆಲೆ, ಗೋಲಹಳ್ಳಿ ಮತ್ತು ವಡೇರಹಳ್ಳಿಯಂತಹ ನಗರದ ಹೊರಭಾಗದ ನಿಲ್ದಾಣಗಳನ್ನು ನವೀಕರಿಸಲಾಗುತ್ತಿದೆ. ಬೆಳಂದೂರು ರಸ್ತೆಯನ್ನು ಐದು ರನ್ನಿಂಗ್ ಲೈನ್‌ಗಳೊಂದಿಗೆ ಪೂರ್ಣ ಪ್ರಮಾಣದ ಕ್ರಾಸಿಂಗ್ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಮೈಸೂರು ರೈಲ್ವೆ ನಿಲ್ದಾಣ ಸದ್ಯ ಐದು ಪ್ಲಾಟ್‌ಫಾರ್ಮ್ ಹೊಂದಿದ್ದು, ಭವಿಷ್ಯದಲ್ಲಿ ಇನ್ನು ಮೂರು ಪ್ಲಾಟ್‌ಫಾರ್ಮ್ ನಿರ್ಮಿಸಲಾಗುವುದು.