;Resize=(412,232))
ಬೆಂಗಳೂರು : ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆ ಬಗ್ಗೆ ಸಹಿ ಮಾಡಿಕೊಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆಗೆ ಆಶಾ ಕಾರ್ಯಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಹೊಸ ಪರಿಪಾಠವೇನಲ್ಲ ಎಂದು ಹೇಳಿದ್ದಾರೆ.
ಬೇಡಿಕೆಗಳ ಈಡೇರಿಕೆ ಬಗ್ಗೆ ಸಹಿ ಮಾಡಿಕೊಡಲು ಆಗುವುದಿಲ್ಲ. ಇವರಿಗೆ ನೀಡಿದರೆ ಬೇರೆ ಹತ್ತಾರು ಇಲಾಖೆಯವರೂ ಕೇಳುತ್ತಾರೆ ಎಂದು ಶಿವಕುಮಾರ್ ಅವರು ನೀಡಿರುವ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ‘ಸಹಿ ಮಾಡಿಕೊಡುವಂತೆ ನಾವು ಹೊಸ ಪರಿಪಾಠ ಶುರು ಮಾಡುತ್ತಿಲ್ಲ. ಇಂಥದ್ದು ಹಿಂದೆ ಎಷ್ಟೋ ನಡೆದಿದೆ. 10 ಅಲ್ಲ, 17 ರಿಂದ 20 ಇಲಾಖೆಗಳು ಕೇಳಿದರೂ ಅದಕ್ಕೆ ಸರ್ಕಾರವೇ ಉತ್ತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷದ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಗೌರವಧನ ಹೆಚ್ಚಳ ಮಾಡುವ ಬಗ್ಗೆ ಘೋಷಣೆ ಮಾಡಿದ್ದರು. ನಿಮ್ಮ ಸರ್ಕಾರವೇ ಘೋಷಣೆ ಮಾಡಿದ್ದು ಜಾರಿ ಆಗುವುದಿಲ್ಲ ಎಂದರೆ ಹೇಗೆ? ನಿಮ್ಮ ಬಗ್ಗೆ ಅಪನಂಬಿಕೆಯಿಂದ ಲಿಖಿತ ರೂಪದಲ್ಲಿ ಭರವಸೆ ನೀಡಿ ಎಂದು ಹೇಳಿರುವುದಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರು ಹೇಳಿದ್ದನ್ನು ಮರೆಸುವುದಕ್ಕೆ, ದಿಕ್ಕು ತಪ್ಪಿಸಲು ಮಾಡುತ್ತಿರುವ ತಂತ್ರ ಇದಾಗಿದೆ. ಆದರೆ ಸಿಎಂ ಮೇಲೆ ಇರುವ ಗೌರವದಿಂದ ಶಾಂತಿಯುತ ಹೋರಾಟ ಮಾಡುತ್ತಾ ಇದ್ದೇವೆ. ಹಿಂದೆ ಆಗಿರುವ ಕಹಿ ಅನುಭವದಿಂದಾಗಿ ಗೌರವ ಧನ ಹೆಚ್ಚಳದ ಬಗ್ಗೆ ಲಿಖಿತ ಹೇಳಿಕೆ ನೀಡುವಂತೆ ಆಗ್ರಹಿಸಲಾಗಿದೆ ಎಂದು ತಿಳಿಸಿದರು.- ಬಾಕ್ಸ್-
ಮಾಸಿಕ 15 ಸಾವಿರ ರು. ಗೌರವ ಧನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬಿಸಿಲು, ಚಳಿ, ಮಳೆ ಎನ್ನದೇ ನಡೆಸುತ್ತಿರುವ ಹೋರಾಟ ಶನಿವಾರಕ್ಕೆ 12 ನೇ ದಿನಕ್ಕೆ ಕಾಲಿರಿಸಿದೆ. ಅನಾರೋಗ್ಯದಿಂದಾಗಿ ಶುಕ್ರವಾರ ಇಬ್ಬರು ಕಾರ್ಯಕರ್ತೆಯರು ಅಸ್ವಸ್ಥಗೊಂಡಿದ್ದು ಚಿಕಿತ್ಸೆಗಾಗಿ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮತ್ತೆ ಖಾದರ್ ಸಭೆ
ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರ ಸಭೆ ಕರೆದು ಚರ್ಚಿಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಶುಕ್ರವಾರ ಭರವಸೆ ನೀಡಿದ್ದರು. ಆದರೆ ರಾತ್ರಿಯಾದರೂ ಯಾವುದೇ ಸಭೆ ನಡೆಯಲಿಲ್ಲ. ಶನಿವಾರ ಬೆಳಿಗ್ಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಸಂಘದ ಮುಖಂಡರೊಂದಿಗೆ ಸಭೆ ಕರೆದು ಚರ್ಚಿಸಲಿದ್ದಾರೆ. ಮಾತುಕತೆ ಫಲಪ್ರದವಾಗದಿದ್ದರೆ ಬಳಿಕ ಶಿವಕುಮಾರ್ ಅವರು ಸಭೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರಕ್ಕೂ ಪತ್ರ
ಸಂಘದ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಕೇಂದ್ರ ಸರ್ಕಾರಕ್ಕೂ ಪತ್ರ ಬರೆದಿದ್ದೇವೆ. ಹೋರಾಟದ ಹಿಂದೆ ಯಾವ ರಾಜಕೀಯವೂ ಇಲ್ಲ. ಸಾಮಾಜಿಕ ಹೋರಾಟ ನಡೆಯುವಾಗ ಇದನ್ನು ಬೇರೆಯವರು ಬಳಸಿಕೊಳ್ಳುತ್ತಾರೆ ಎಂದು ನಮಗೆ ಗೊತ್ತು. ಆದರೆ ಅದಕ್ಕೆ ನಾವು ಆಸ್ಪದ ನೀಡಿಲ್ಲ. ಯಾವುದೇ ರಾಜಕೀಯ ಪಕ್ಷಕ್ಕೂ ವೇದಿಕೆ ಕೊಟ್ಟಿಲ್ಲ. ಆರೋಗ್ಯ ಸಚಿವರು ಮಾತನಾಡಿರುವುದನ್ನು ಗಮನಿಸಿದ್ದೇವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಚಿವರೇ ಇಲ್ಲ. ಆದರೂ ಇಲಾಖೆ ಕಾರ್ಯನಿರ್ವಹಿಸುತ್ತಿಲ್ಲವೇ? ಎಂದು ತಿರುಗೇಟು ನೀಡಿದರು.
ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಐಎನ್‌ಟಿಯುಸಿ ಪ್ರತಿನಿಧಿ ಶಾಮಣ್ಣ ರೆಡ್ಡಿ, ಕನಿಷ್ಟವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹೀದ್ ತೆಕ್ಕಿಲ್, ಎಐಟಿಯುಸಿ ಮುಖಂಡ ಅಮ್ಜದ್, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಜಯಮ್ಮ, ಆರ್ಥಿಕ ತಜ್ಞ ಪ್ರೊ.ಚಂದ್ರಪೂಜಾರಿ ಮತ್ತಿತರರು ಮಾತನಾಡಿದರು.