ಆನ್‌ಲೈನ್‌ನಲ್ಲಿ ಆಟೋ ಬುಕ್ ಮಾಡಿ ಚಾಲಕನ ಮೊಬೈಲ್‌ನಿಂದಲೇ ಪೊಲೀಸರಿಗೆ ಮುಖ್ಯಮಂತ್ರಿ ಅವರ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ ಕಿಡಿಗೇಡಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಆನ್‌ಲೈನ್‌ನಲ್ಲಿ ಆಟೋ ಬುಕ್ ಮಾಡಿ ಚಾಲಕನ ಮೊಬೈಲ್‌ನಿಂದಲೇ ಪೊಲೀಸರಿಗೆ ಮುಖ್ಯಮಂತ್ರಿ ಅವರ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ ಕಿಡಿಗೇಡಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬ್ಯಾಡರಹಳ್ಳಿ ನಿವಾಸಿ ಕಾರ್ತಿಕ್ ಬಂಧಿತ ಆರೋಪಿ

ಬ್ಯಾಡರಹಳ್ಳಿ ನಿವಾಸಿ ಕಾರ್ತಿಕ್ ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸದ ಸಮೀಪ ನಡೆದಿದ್ದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಆಟೋ ಕಳುಹಿಸಿ ಬೆದರಿಕೆ ಹಾಕಿದಾತನನ್ನು ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್‌, ಬ್ಯಾಡರಹಳ್ಳಿ ಸಮೀಪ ಪಿಜಿಯಲ್ಲಿ ವಾಸವಾಗಿದ್ದ. ನ.5 ರಂದು ಆರ್‌.ಟಿ.ನಗರಕ್ಕೆ ತೆರಳಲು ಆನ್‌ಲೈನ್‌ನಲ್ಲಿ ಆಟೋ ಮಾಡಿ ಬುಕ್ ಕಾರ್ತಿಕ್ ಲೋಕೇಷ್‌ನ್ ಕಳುಹಿಸಿದ್ದಾನೆ. ಅಂತೆಯೇ ಆಟೋ ಚಾಲಕ ಪ್ರಯಾಣಿಕನನ್ನು ಪಿಕ್‌ ಮಾಡಲು ತೆರಳಿದರೆ ಅದು ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆ ದಾರಿ ತೋರಿಸಿದೆ.

ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್

ಆಗ ಕಾರ್ತಿಕ್‌ಗೆ ಕರೆ ಮಾಡಿ ತಾನು ನೀವು ಶೇರ್ ಮಾಡಿರುವ ಲೋಕೇಷನ್‌ಗೆ ಬಂದಿರುವುದಾಗಿ ಚಾಲಕ ಹೇಳಿದ್ದಾನೆ. ಈ ಮಾತಿಗೆ ಕಾರ್ತಿಕ್‌, ನಿಮ್ಮ ಮೊಬೈಲ್‌ ಅನ್ನು ಮುಖ್ಯಮಂತ್ರಿ ಅವರ ನಿವಾಸದ ಮುಂದೆ ಭದ್ರತೆಯಲ್ಲಿರುವ ಪೊಲೀಸರಿಗೆ ಕೊಡುವಂತೆ ಹೇಳಿದ್ದಾನೆ. ಅಂತೆಯೇ ಅಲ್ಲೇ ಭದ್ರತೆಯಲ್ಲಿದ್ದ ಪೊಲೀಸರಿಗೆ ಆಟೋ ಚಾಲಕ ಮೊಬೈಲ್ ನೀಡಿದ್ದಾನೆ. ಮೊಬೈಲ್ ಕರೆ ಸ್ವೀಕರಿಸಿದ ಕೂಡಲೇ ಕಾರ್ತಿಕ್‌, ತಾನು ಮುಖ್ಯಮಂತ್ರಿ ಅವರ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿದ್ದೇನೆ. ಮುಖ್ಯಮಂತ್ರಿ ಅವರು ಬೆಂಗಾವಲು ವಾಹನದಲ್ಲಿ ಹೋಗುವಾಗಲೇ ಸ್ಫೋಟವಾಗಲಿದೆ ಎಂದಿದ್ದಾನೆ.

ಈ ಮಾತು ಕೇಳಿ ಗಾಬರಿಗೊಂಡ ಪೊಲೀಸರು, ಕೂಡಲೇ ಆಟೋ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಹಿರಿಯ ಅಧಿಕಾರಿಗಳಿಗೂ ಮಾಹಿತಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಅವರ ನಿವಾಸ ಹಾಗೂ ವಿಧಾನಸೌಧದಲ್ಲಿ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದಾಗ ಹುಸಿ ಬೆದರಿಕೆ ಎಂದು ಖಚಿತವಾಗಿದೆ. ಬಳಿಕ ಚಾಲಕನಿಗೆ ಬಂದಿದ್ದ ಮೊಬೈಲ್ ಕರೆ ಆಧರಿಸಿ ಆರೋಪಿಯನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.