ತೈಲ ಕಂಪನಿಗೇ ರಾಜ್ಯ ಎಥೆನಾಲ್‌ ನೋಟಿಸ್‌

Published : Nov 28, 2026, 06:00 AM IST
Ethanol

ಸಾರಾಂಶ

ರಾಜ್ಯದಲ್ಲಿ ನಿಗದಿತ ಇ20 (ಶೇ.20) ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್‌ಗೆ ಎಥೆನಾಲ್‌ ಮಿಶ್ರಣ ಬಯಲಿಗೆಳೆದ ಬೆನ್ನಲ್ಲೇ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆಯು, ಕೇಂದ್ರ ಸರ್ಕಾರದ ಅಧೀನದ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಟರ್ಮಿನಲ್‌ಗಳ ತಪಾಸಣೆ ತೀವ್ರಗೊಳಿಸಿದೆ

ಬೆಂಗಳೂರು : ರಾಜ್ಯದಲ್ಲಿ ನಿಗದಿತ ಇ20 (ಶೇ.20) ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್‌ಗೆ ಎಥೆನಾಲ್‌ ಮಿಶ್ರಣ ಬಯಲಿಗೆಳೆದ ಬೆನ್ನಲ್ಲೇ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆಯು, ಕೇಂದ್ರ ಸರ್ಕಾರದ ಅಧೀನದ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಟರ್ಮಿನಲ್‌ಗಳ ತಪಾಸಣೆ ತೀವ್ರಗೊಳಿಸಿದೆ ಹಾಗೂ ಗಂಭೀರ ಉಲ್ಲಂಘನೆಯೊಂದನ್ನು ಪತ್ತೆ ಮಾಡಿದ್ದಾಗಿ ಹೇಳಿಕೊಂಡಿದೆ.

ಬೆಂಗಳೂರು ಹೊರವಲಯದ ಹೊಸಕೋಟೆ ವ್ಯಾಪ್ತಿಯ ದೇವನಗೊಂದಿಯಲ್ಲಿರುವ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿಎಲ್‌) ಟರ್ಮಿನಲ್‌ನಲ್ಲಿ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಪ್ರತಿ 3,000 ಲೀಟರ್‌ಗೆ ನಿಗದಿಗಿಂತ 14 ಲೀಟರ್‌ ಅಧಿಕ ಎಥೆನಾಲ್‌ ಪೂರೈಕೆ ಪತ್ತೆ ಆಗಿದೆ. ಹೀಗಾಗಿ ಕಾರಣ ಕೇಳಿ ಐಒಸಿಗೆ ರಾಜ್ಯ ಸರ್ಕಾರ ನೋಟಿಸ್‌ ಜಾರಿ ಮಾಡಿದೆ.

14 ಲೀ. ಅಧಿಕ ಎಥೆನಾಲ್‌:

ಟರ್ಮಿನಲ್‌ನಲ್ಲಿರುವ ಮಾಸ್‌ ಫ್ಲೋ ಮೀಟರ್‌ಗಳನ್ನು ಪ್ರಮಾಣೀಕೃತ ಮಾಪಕದೊಂದಿಗೆ ಪರೀಕ್ಷಿಸಿದಾಗ ಪ್ರತಿ 3 ಸಾವಿರ ಲೀಟರ್‌ಗೆ ನಿಗದಿತ ಪ್ರಮಾಣಕ್ಕಿಂತ ಸುಮಾರು 14 ಲೀಟರ್‌ ಅಧಿಕ ಎಥೆನಾಲ್‌ ಪೂರೈಕೆಯಾಗುತ್ತಿರುವುದು ದೃಢಪಟ್ಟಿದೆ. ಇದೇ ವೇಳೆ ಮೋಟಾರ್‌ ಗ್ಯಾಸೋಲಿನ್‌ ಪ್ರಮಾಣದಲ್ಲಿ ಪ್ರತಿ 3 ಸಾವಿರ ಲೀಟರ್‌ಗೆ 4ರಿಂದ 6 ಲೀಟರ್‌ ಕಡಿಮೆ ವಿತರಣೆಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಈ ಎರಡೂ ವ್ಯತ್ಯಾಸಗಳು ಕಾನೂನುಬದ್ಧ ಅನುಮತಿಯ ಮಿತಿಗಿಂತ ಹೆಚ್ಚೂಕಡಿಮೆ ಆಗಿವೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಮತ್ತು ವಾಹನ ಸವಾರರಿಗೆ ಆಗುತ್ತಿರುವ ಅನ್ಯಾಯ ಹಾಗೂ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾನೂನು ಮಾಪನಶಾಸ್ತ್ರ ಇಲಾಖೆ, ಕಾನೂನು ಮಾಪನಶಾಸ್ತ್ರ ಕಾಯ್ದೆ 2009ರ ಅಡಿ ದೇವನಗೊಂದಿ ಐಒಸಿಎಲ್‌ ಟಿರ್ಮಿನಲ್‌ಗೆ ಅಧಿಕೃತವಾಗಿ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ. ಇಂಧನ ಬ್ಲೆಂಡಿಂಗ್‌ ಪ್ರಕ್ರಿಯೆಯಲ್ಲಿ ನಿಖರತೆ ಕಾಪಾಡಿಕೊಳ್ಳದಿದ್ದರೆ ಕಠಿಣ ಕಾನೂನು ಕ್ರಮಕೈಗೊಳ್ಳುವುದಾಗಿ ಸಚಿವ ರಿಜ್ವಾನ್‌ ಅರ್ಷದ್‌ ತಿಳಿಸಿದ್ದಾರೆ.

7 ದಿನದೊಳಗೆ ವಿವರಣೆ ನೀಡಿ:

‘ಲೋಪಗಳು ಪತ್ತೆಯಾಗಿರುವ ಮಾಪನ ವ್ಯವಸ್ಥೆಗಳನ್ನು ನಿಖರಗೊಳಿಸಿ, ನಿಯಮಾನುಸಾರ ಪ್ರಮಾಣೀಕರಿಸುವವರೆಗೆ ಮುಂದಿನ ವಾಣಿಜ್ಯ ವ್ಯವಹಾರಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಬಳಸಬಾರದು ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಅಲ್ಲದೆ, ಈ ದೋಷಗಳಿಗೆ ಕಾರಣವೇನು? ಮತ್ತು ಸರಿಪಡಿಸುವ ಕುರಿತು ಕೈಗೊಂಡ ಕ್ರಮಗಳೇನು ಎಂಬ ಬಗ್ಗೆ ಅಗತ್ಯ ಮಾಪನಾಂಕ ಪ್ರಮಾಣಪತ್ರಗಳೊಂದಿಗೆ 7 ದಿನಗಳ ಒಳಗೆ ಲಿಖಿತ ವಿವರಣೆ ನೀಡಬೇಕು. ತಪ್ಪಿದಲ್ಲಿ ‘ಕಾನೂನು ಮಾಪನಶಾಸ್ತ್ರ ಕಾಯ್ದೆ 2009’ರ ಅಡಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಐಒಸಿಎಲ್ ಡೆಪ್ಯುಟಿ ಜನರಲ್ ಮ್ಯಾನೇಜರ್‌ಗೆ ಜಂಟಿ ನಿಯಂತ್ರಕರು ಎಚ್ಚರಿಕೆ ನೀಡಿದ್ದಾರೆ.

ತೈಲ ಕಂಪನಿಗೆ ರಾಜ್ಯ ಬಿಸಿ

- ರಾಜ್ಯ ಸರ್ಕಾರದಿಂದ ತೈಲ ತಪಾಸಣೆ ಚುರುಕು. ದೇವನಗೊಂದಿ ಐಒಸಿ ಘಟಕದಲ್ಲಿ ತೀವ್ರ ತಪಾಸಣೆ

- ಮಾಸ್‌ ಫ್ಲೋ ಮೀಟರ್‌ ಪರೀಕ್ಷಿಸಿದಾಗ ಪ್ರತಿ 3,000 ಲೀ.ಗೆ ನಿಗದಿಗಿಂತ 14 ಲೀ. ಅಧಿಕ ಎಥೆನಾಲ್‌ ಪೂರೈಕೆ

- ಮೋಟಾರ್‌ ಗ್ಯಾಸೋಲಿನ್‌ ಪ್ರಮಾಣದಲ್ಲಿ ಪ್ರತಿ 3,000 ಲೀ.ಗೆ 4ರಿಂದ 6 ಲೀಟರ್‌ ಕಡಿಮೆ ವಿತರಣೆ ಬೆಳಕಿಗೆ

- ಇಂಧನ ಬ್ಲೆಂಡಿಂಗ್‌ ಪ್ರಕ್ರಿಯೆಯಲ್ಲಿ ನಿಖರತೆ ಕಾಪಾಡಿಕೊಳ್ಳದಿದ್ದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ

- ಲೋಪ ಪತ್ತೆಯಾಗಿರುವ ಮಾಪನ ವ್ಯವಸ್ಥೆ ನಿಖರಗೊಳಿಸಿ, ನಿಯಮಾನುಸಾರ ಪ್ರಮಾಣೀಕರಿಸಬೇಕು

- ಅಲ್ಲಿಯವರೆಗೆ ಮುಂದಿನ ವಾಣಿಜ್ಯ ವ್ಯವಹಾರಗಳಿಗೆ ತಕ್ಷಣದಿಂದಲೇ ಅದನ್ನು ಬಳಸಬಾರದು: ಸೂಚನೆ

- ದೋಷಗಳಿಗೆ ಏನು ಕಾರಣ? ಸರಿಪಡಿಸಲು ಕೈಗೊಂಡ ಕ್ರಮ ಏನು ಬಗ್ಗೆ 7 ದಿನದೊಳಗೆ ವಿವರ ನೀಡಿ

- ತಪ್ಪಿದರೆ ‘ಕಾನೂನು ಮಾಪನಶಾಸ್ತ್ರ ಕಾಯ್ದೆ 2009’ರ ಅಡಿ ಮುಂದಿನ ಕಾನೂನು ಕ್ರಮ: ಎಚ್ಚರಿಕೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕನಕದಾಸರು ಸಮಾನತೆಯ ಹರಿಕಾರ: ತಂಗಡಗಿ
ಬಿಜಿಎಸ್‌ ಸಂಸ್ಥೆ ಆಲದ ಮರ ಇದ್ದಂತೆ: ಡಿಕೆ