;Resize=(412,232))
ಬೆಂಗಳೂರು : ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ನಗರದಲ್ಲಿ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಯೋಜಿಸಿದ್ದ ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್-2026 ಬ್ಯಾಡ್ಮಿಂಟನ್ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅವರಿಗೆ ಹೃದಯ ಬಡಿತ ಹೆಚ್ಚಾಗಿದ್ದು ಕಂಡು ಬಂದಿತ್ತು. ಉಸಿರಾಟದಲ್ಲೂ ಏರಿಳಿತವಾಗಿತ್ತು.
ತಪಾಸಣೆ ನಡೆಸಿದಾಗ ಅವರ ನಾಡಿಮಿಡಿತ ತೀವ್ರವಾಗಿ ಏರಿಕೆಯಾಗಿದ್ದು ಕಂಡುಬಂದಿದೆ. ಸಾಮಾನ್ಯವಾಗಿ ಪ್ರತಿ ನಿಮಿಷಕ್ಕೆ 70 ರಿಂದ 80 ಇರಬೇಕಾದ ಹೃದಯ ಬಡಿತವು 150 ರಿಂದ 160ಕ್ಕೆ ತಲುಪಿತ್ತು. ವೈದೇಹಿ ಆಸ್ಪತ್ರೆಯಲ್ಲಿ ವೈದ್ಯರಾದ ಡಾ. ಶ್ರೀನಿವಾಸ್ ಅವರು ಚಿಕಿತ್ಸೆ ನೀಡಿದ್ದು, ಹೃದಯ ಬಡಿತ ಸಾಮಾನ್ಯ ಸ್ಥಿತಿಗೆ ಮರಳಿದೆ.
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ವೈದ್ಯ ಶ್ರೀನಿವಾಸ್ ಅವರು, ಇದು ಹೃದಯಾಘಾತ ಅಲ್ಲವೇ ಅಲ್ಲ. ಆಸ್ಪತ್ರೆಗೆ ದಾಖಲಾದ ಕೂಡಲೇ ಇಸಿಜಿ ಸೇರಿ ಅಗತ್ಯವಿರುವ ಎಲ್ಲಾ ರಕ್ತ ಮತ್ತು ಹೃದಯ ಸಂಬಂಧಿ ಪರೀಕ್ಷೆಗಳನ್ನು ನಡೆಸಲಾಗಿದೆ. ಯಾವುದೇ ಬ್ಲಾಕೇಜ್ ಅಥವಾ ಹಾರ್ಟ್ ಅಟ್ಯಾಕ್‌ನ ಸೂಚನೆಗಳಿಲ್ಲ. ಏರಿಕೆಯಾಗಿದ್ದ ನಾಡಿಮಿಡಿತವನ್ನು ಚಿಕಿತ್ಸೆಯ ಮೂಲಕ ತಕ್ಷಣವೇ ಸಾಮಾನ್ಯ ಸ್ಥಿತಿಗೆ ತರಲಾಗಿದೆ. ಇದು ಕೆಲಸದ ಒತ್ತಡ ಅಥವಾ ಸುಸ್ತು ಇದ್ದಾಗ ಕೆಲವರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಯಷ್ಟೇ ಸ್ಪಷ್ಟಪಡಿಸಿದರು.
ಸದ್ಯ ಪರಮೇಶ್ವರ್ ಅವರು ಸಂಪೂರ್ಣ ಗುಣಮುಖರಾಗಿದ್ದು, ಲವಲವಿಕೆಯಿಂದ ಮಾತನಾಡುತ್ತಿದ್ದಾರೆ. ಈಗಾಗಲೇ ಊಟ ಮುಗಿಸಿದ್ದು, ಆರಾಮವಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದರು.
ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಸಚಿವ ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರು ಪರಮೇಶ್ವರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ನಂತರ ವೈದ್ಯರಿಂದ ಚಿಕಿತ್ಸೆ ಮಾಹಿತಿ ಪಡೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪರಮೇಶ್ವರ್ ನನ್ನ ಜೊತೆ ಚೆನ್ನಾಗಿ ಮಾತನಾಡಿದ್ದಾರೆ. ಅವರ ಹೃದಯಕ್ಕೆ ಯಾವುದೇ ಸಮಸ್ಯೆ ಇಲ್ಲ. ರಕ್ತದೊತ್ತಡ 120-80 ಇದ್ದು ಸಹಜ ಸ್ಥಿತಿಯಲ್ಲಿದೆ. ಏರಿಕೆಯಾಗಿದ್ದ ಪಲ್ಸ್ ರೇಟ್ ಈಗ 66ಕ್ಕೆ ಇಳಿದಿದ್ದು, ಸಂಪೂರ್ಣ ನಾರ್ಮಲ್ ಆಗಿದೆ. ನಿರಂತರ ಓಡಾಟ ಹಾಗೂ ನಿದ್ದೆ ಇಲ್ಲದ ಕಾರಣ ಈ ಸಮಸ್ಯೆ ಕಾಣಿಸಿಕೊಂಡಿದೆ ಅನಿಸುತ್ತದೆ ಎಂದರು.
ಪರಮೇಶ್ವರ್ ಅವರು ಇವತ್ತೇ ಡಿಸ್ಚಾರ್ಜ್ ಆಗುವುದಾಗಿ ಹೇಳುತ್ತಿದ್ದರು. ಆದರೆ ಇಂದು ಆಸ್ಪತ್ರೆಯಲ್ಲೇ ವೈದ್ಯರ ನಿಗಾದಲ್ಲಿ ವಿಶ್ರಾಂತಿ ಪಡೆಯಲಿ, ನಾಳೆ ಡಿಸ್ಚಾರ್ಜ್ ಮಾಡಿ ಎಂದು ನಾನು ವೈದ್ಯರಿಗೆ ಸಲಹೆ ನೀಡಿದ್ದೇನೆ. ಮನೆಗೆ ಹೋದ ಮೇಲೂ ಎರಡ್ಮೂರು ದಿನ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದೇನೆ ಎಂದು ಹೇಳಿದರು.