;Resize=(412,232))
ಬೆಂಗಳೂರು : ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ (ಪಿಡಿಎಸ್) ಪಾರದರ್ಶಕತೆ ತರಲು ಹಾಗೂ ಪಡಿತರ ಅಕ್ಕಿ ಕಾಳಸಂತೆ ಸೇರುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಡಿಜಿಟಲ್ ಹಣ ನೀಡುವ ವ್ಯವಸ್ಥೆಯನ್ನು ರಾಜ್ಯದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಮುಂದಾಗಿದೆ.
ಅಂತ್ಯೋದಯ ಮತ್ತು ಬಿಪಿಎಲ್ ಫಲಾನುಭವಿಗಳಿಗೆ ಅಕ್ಕಿ ಬದಲಾಗಿ ಮೊಬೈಲ್ ಮೂಲಕ ‘ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ’ (ಸಿಬಿಡಿಸಿ) ಮಾದರಿಯ ಡಿಜಿಟಲ್ ಹಣ ನೀಡುವ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಸಿದ್ಧತೆ ನಡೆಸಿದೆ.
ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಈ ಪ್ರಾಯೋಗಿಕ ಯೋಜನೆ ಆರಂಭಿಸಲು ಚಿಂತನೆ ನಡೆದಿದ್ದು, ಆರಂಭಿಕವಾಗಿ ಕೇಂದ್ರ ಸರ್ಕಾರದ ಪಾಲಿನ ತಲಾ ಐದು ಕೆ.ಜಿ. ಅಕ್ಕಿ ಮೊತ್ತಕ್ಕೆ ಈ ಡಿಜಿಟಲ್ ಕೂಪನ್ ವ್ಯವಸ್ಥೆ ಅನ್ವಯವಾಗಲಿದೆ. ಈಗಾಗಲೇ ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ, ಪುದುಚೇರಿ, ದಾದ್ರಾ-ನಗರ ಹವೇಲಿ ಮತ್ತು ದಮನ್-ದಿಯು ಜತೆಗೆ ಆಯ್ದ ರಾಜ್ಯಗಳ ಕೆಲ ಜಿಲ್ಲೆಗಳಲ್ಲಿ ಈ ಯೋಜನೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್) ಅಡಿ ಪ್ರತಿ ತಿಂಗಳು ದರ ನಿಗದಿಪಡಿಸಲಾಗುತ್ತದೆ (ಅಂದಾಜು ಪ್ರತಿ ಕೆ.ಜಿಗೆ 40 ರುನಿಂದ 45). ಕೇಂದ್ರದ ಪಾಲಿನ ಅಕ್ಕಿಯ ಮೊತ್ತ ನೋಂದಾಯಿತ ಮೊಬೈಲ್ ಸಂಖ್ಯೆಗೆ ಡಿಜಿಟಲ್ ವ್ಯಾಲೆಟ್/ಇ-ರುಪಿ ಕೂಪನ್ ರೂಪದಲ್ಲಿ ಜಮೆಯಾಗಲಿದೆ.
ಕೇಂದ್ರ ಸರ್ಕಾರ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಮೂಲಕ ನ್ಯಾಯಬೆಲೆ ಅಂಗಡಿಗಳಿಗೆ ಎಂದಿನಂತೆ ಆಹಾರ ಧಾನ್ಯ ಪೂರೈಕೆ ಮಾಡಲಿದೆ. ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗೆ ತೆರಳಿ ಮೊಬೈಲ್‌ನಲ್ಲಿರುವ ಡಿಜಿಟಲ್ ಕರೆನ್ಸಿಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಒಟಿಪಿ ನೀಡಿ ಪಡಿತರ ಪಡೆಯಬಹುದು.
ಈ ಹಣಕ್ಕೆ ನಿರ್ದಿಷ್ಟ ಕಾಲಮಿತಿ 3 ರಿಂದ 6 ತಿಂಗಳು ಇರಲಿದ್ದು, ನಿಗದಿತ ದಿನದೊಳಗೆ ಬಳಸದಿದ್ದರೆ ಕೂಪನ್ ಮಾನ್ಯತೆ ರದ್ದಾಗುತ್ತದೆ. ಈ ಮೊತ್ತವನ್ನು ಕೇವಲ ಪಡಿತರ ಖರೀದಿಗೆ ಮಾತ್ರ ಬಳಸಬಹುದಾಗಿದ್ದು, ಬೇರೆ ಯಾವುದೇ ಉದ್ದೇಶಕ್ಕೆ ನಗದೀಕರಿಸಲು ಅಥವಾ ವರ್ಗಾಯಿಸಲು ಸಾಧ್ಯವಿಲ್ಲ.
ಡಿಜಿಟಲ್ ಪಡಿತರದಿಂದ ಬೋಗಸ್ ಪಡಿತರ ಚೀಟಿಗಳು, ಅನರ್ಹ ಫಲಾನುಭವಿಗಳು ಹಾಗೂ ಮಧ್ಯವರ್ತಿಗಳ ದುರುಪಯೋಗಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ. ಮುಂದಿನ ದಿನಗಳಲ್ಲಿ ಪಡಿತರ ತರಲು ಪಡಿತರ ಚೀಟಿಯನ್ನು ಕಡ್ಡಾಯವಾಗಿ ಕೊಂಡೊಯ್ಯುವ ಅಗತ್ಯವಿರುವುದಿಲ್ಲ. ಫುಡ್ ಕೂಪನ್‌ನಿಂದ ಒಂದೇ ಬಾರಿಗೆ ಪೂರ್ತಿ ಅಕ್ಕಿ ಪಡೆಯಬೇಕೆಂದಿಲ್ಲ. ಎಷ್ಟು ಕೆ.ಜಿ. ಅಕ್ಕಿ ಬೇಕೋ ಅಷ್ಟೇ ಮೊತ್ತ ಕಡಿತವಾಗಿ, ಉಳಿಕೆ ಹಣ ಖಾತೆಯಲ್ಲೇ ಇರುತ್ತದೆ. ಇದರಿಂದ ತೂಕದಲ್ಲಿ ಮೋಸವಾಗುವುದು ತಪ್ಪುತ್ತದೆ. ಈ ವ್ಯವಸ್ಥೆ ಮೂಲಕ ಫಲಾನುಭವಿಗಳು ರಾಜ್ಯದ ಅಥವಾ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲೂ ಸುಲಭವಾಗಿ ಆಹಾರ ಧಾನ್ಯ ಪಡೆಯಬಹುದು ಎನ್ನಲಾಗಿದೆ.
ರಾಜ್ಯದ ಪಡಿತರ ಚೀಟಿ ಮಾಹಿತಿ: ಅಂತ್ಯೋದಯ ಅನ್ನ ಯೋಜನೆ (ಎಎವೈ) ಕಾರ್ಡ್‌ಗಳ ಸಂಖ್ಯೆ 10.44 ಲಕ್ಷಕ್ಕೂ ಅಧಿಕವಿದ್ದು ಫಲಾನುಭವಿಗಳ ಸಂಖ್ಯೆ 42.63 ಲಕ್ಷಕ್ಕೂ ಹೆಚ್ಚು ಇದೆ. ಆದ್ಯತಾ ಕುಟುಂಬ (ಪಿಎಚ್‌ಎಚ್ ಅಥವಾ ಬಿಪಿಎಲ್) 1.14 ಕೋಟಿಗೂ ಅಧಿಕ ಕಾರ್ಡ್‌ಗಳಿದ್ದು, 4.03 ಕೋಟಿ ಫಲಾನುಭವಿಗಳಿದ್ದಾರೆ. ಹೀಗೆ ಒಟ್ಟು 1.24 ಕೋಟಿಗೂ ಅಧಿಕ ಕಾಡುಗಳಿದ್ದು 4.47 ಕೋಟಿಗು ಹೆಚ್ಚು ಫಲಾನುಭವಿಗಳು ಅನ್ನಭಾಗ್ಯ ಯೋಜನೆ ಲಾಭ ಪಡೆಯುತ್ತಿದ್ದಾರೆ. ಇದರಲ್ಲಿ ಪ್ರತಿ ಸದಸ್ಯರು ಕೇಂದ್ರದ 5 ಕೆಜಿ ಮತ್ತು ರಾಜ್ಯದ ಪಾಲು 5 ಕೆಜಿ ಸೇರಿ ಒಟ್ಟು 10 ಕೆಜಿ ಆಹಾರ ಧಾನ್ಯ ಪಡೆಯುತ್ತಿದ್ದಾರೆ.
ಡಿಜಿಟಲ್ ಕರೆನ್ಸಿ ಯೋಜನೆ ಜಾರಿಗೆ ತರಬಾರದು. ಈಗಿರುವ ವ್ಯವಸ್ಥೆಯೇ ಮುಂದುವರೆಯಬೇಕು. ಯೋಜನೆಯಿಂದ ದೇಶದ 4.63 ಲಕ್ಷಕ್ಕೂ ಅಧಿಕ ಪಡಿತರ ವಿತರಕರಿಗೆ ಮಾತ್ರವಲ್ಲ, 80 ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್‌ದಾರರಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಈ ಯೋಜನೆ ವಿರೋಧಿಸಿ ಡಿ.3ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ.
- ಟಿ.ಕೃಷ್ಣಪ್ಪ, ರಾಷ್ಟ್ರೀಯ ಕಾರ್ಯಾಧ್ಯಕ್ಷ, ಸರ್ಕಾರಿ ಪಡಿತರ ವಿತರಕರ ಒಕ್ಕೂಟ