ನನ್ನ ಹತ್ಯೆಗೆ ಡಿಕೆ ಶಿವಕುಮಾರ್, ಡಿಕೆ ಸುರೇಶ್, ಕುಸುಮಾ ಸಂಚು - ಬಿಜೆಪಿ ಶಾಸಕ ಮುನಿರತ್ನ

ಸಾರಾಂಶ

ತಮ್ಮ ಕೊಲೆ ಪ್ರಯತ್ನದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್‌ ಕೈವಾಡ ಇದೆ ಎಂದು ಬಿಜೆಪಿ ಶಾಸಕ ಮುನಿರತ್ನ ಆಪಾದಿಸಿದ್ದಾರೆ.

ಬೆಂಗಳೂರು : ತಮ್ಮ ಕೊಲೆ ಪ್ರಯತ್ನದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್‌ ಕೈವಾಡ ಇದೆ ಎಂದು ಬಿಜೆಪಿ ಶಾಸಕ ಮುನಿರತ್ನ ಆಪಾದಿಸಿದ್ದಾರೆ.

ಬುಧವಾರ ಮೊಟ್ಟೆ ಎಸೆತ ಪ್ರಕರಣವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕುಸುಮಾಳನ್ನು ಶಾಸಕರನ್ನಾಗಿ ಮಾಡಬೇಕು ಎಂಬ ಒಂದೇ ಗುರಿಯನ್ನಿಟ್ಟುಕೊಂಡು ನನ್ನ ಕೊಲೆಗೆ ಪ್ರಯತ್ನಿಸಲಾಗಿದೆ. ಡಿ.ಕೆ.ಶಿವಕುಮಾರ್‌, ಡಿ.ಕೆ.ಸುರೇಶ್‌, ಕುಸುಮಾ ಮತ್ತವರ ತಂದೆ ಹನುಮಂತರಾಯಪ್ಪ ಷಡ್ಯಂತ್ರ ಮಾಡಿದ್ದಾರೆ. ಅವರ ಸೂಚನೆ ಮೇರೆಗೆ 100ಕ್ಕೂ ಹೆಚ್ಚು ಜನ ಸೇರಿ ಗುಂಪಿನಲ್ಲಿ ಬಂದು ಕೊಲೆ ಮಾಡಿ ಚುನಾವಣೆ ನಡೆಸುವ ಹುನ್ನಾರ ಮಾಡಲಾಗಿದೆ ಎಂದು ಕಿಡಿಕಾರಿದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ 100ನೇ ಹುಟ್ಟುಹಬ್ಬ ಪ್ರಯುಕ್ತ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದನ್ನು ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಮೊಟ್ಟೆ ಎಸೆತ ಘಟನೆ ನಡೆದಿದೆ. ಮೊಟ್ಟೆಯಲ್ಲಿ ಆಸಿಡ್‌ ಹಾಕಿ ದಾಳಿ ನಡೆಸಲಾಗಿದೆ. ಈ ಹಿಂದೆ ಕೆಲವರು ಕೋಳಿಮೊಟ್ಟೆಯಲ್ಲಿ ಆಸಿಡ್‌ ಹಾಕಿ ದಾಳಿ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು. ಕುಸುಮಾ ಶಾಸಕರಾಗಬೇಕು. ಶಾಸಕ ಸ್ಥಾನಕ್ಕೆ ರಾಜೀನಾಮೆ ನಿಡಬೇಕು. ಇಲ್ಲದಿದ್ದರೆ ಆಸಿಡ್‌ ದಾಳಿ ಮಾಡಿ ಕೊಲೆ ಮಾಡಲಾಗುವುದು ಎಂದಿದ್ದರು. ಅದೇ ರೀತಿ ಮಾಡಿದ್ದಾರೆ. ಕುಸುಮಾಳನ್ನು ಶಾಸಕರನ್ನಾಗಿ ಮಾಡಲು ಈ ಕೆಲಸ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ರಕ್ಷಣೆ ಮಾಡದಿದ್ದರೆ ಕೊಲೆಯಾಗುತ್ತಿತ್ತು. ಅವರ ರಕ್ಷಣೆಯಿಂದಾಗಿ ಕೊಲೆ ತಪ್ಪಿದೆ. ಪೊಲೀಸರಿಗೆ ಮೊದಲೇ ಗೊತ್ತಿತ್ತು. ಹೀಗಾಗಿ 100ಕ್ಕೂ ಹೆಚ್ಚು ಪೊಲೀಸರು ಬಂದಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್‌ಗೆ ಒಂದೇ ಗುರಿ ಇದ್ದು, ಕುಸುಮಾಳನ್ನು ಶಾಸಕಿಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ದಾಳಿ ನಡೆಸಲಾಗಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುನಿರತ್ನ, ನನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದ ವೇಳೆ ವಕೀಲರ ಉಡುಪಿನಲ್ಲಿ ಬಂದ ವ್ಯಕ್ತಿಯೊಬ್ಬ ನನಗೆ ರಾಜೀನಾಮೆ ನೀಡಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಇಲ್ಲದಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುತ್ತೇವೆ. ನಂತರ ಪೋಕ್ಸೋ ಪ್ರಕರಣ ದಾಖಲಿಸಲಾಗುವುದು. ಇದಕ್ಕಾಗಿ ಎಲ್ಲವನ್ನೂ ಇಟ್ಟುಕೊಂಡಿದ್ದು, ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದಿದ್ದ ಎಂದು ಹೇಳಿದರು.

ಇನ್ನು, ನಾನು ಕೊಲೆಯಾಗುವುದು ಖಂಡಿತ. ಇದರಲ್ಲಿ ಯಾವುದೇ ಅನುಮಾನ ಬೇಡ. ಈ ಸಂಬಂಧ ಪ್ರಧಾನಿ, ಕೇಂದ್ರ ಗೃಹ ಇಲಾಖೆ ಮತ್ತು ಸಿಬಿಐಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

Share this article