ಶಿವಣ್ಣ ಕ್ಯಾನ್ಸರ್‌ಪೀಡಿತ ಮೂತ್ರಕೋಶ ಹೊರಕ್ಕೆ - ಅವರದೇ ಕರಳು ಬಳಸಿ ಮೂತ್ರಕೋಶ ಸೃಷ್ಟಿ

ಸಾರಾಂಶ

ನಟ ಶಿವರಾಜ್‌ ಕುಮಾರ್ ಅವರಿಗೆ ಅಮೆರಿಕದ ಮಿಯಾಮಿ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಮೂತ್ರಕೋಶದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂದು ಅಲ್ಲಿನ ವೈದ್ಯ ಡಾ। ಮುರುಗೇಶ್‌ ಮನೋಹರನ್‌ ತಿಳಿಸಿದ್ದಾರೆ.

ಬೆಂಗಳೂರು : ನಟ ಶಿವರಾಜ್‌ ಕುಮಾರ್ ಅವರಿಗೆ ಅಮೆರಿಕದ ಮಿಯಾಮಿ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಮೂತ್ರಕೋಶದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂದು ಅಲ್ಲಿನ ವೈದ್ಯ ಡಾ। ಮುರುಗೇಶ್‌ ಮನೋಹರನ್‌ ತಿಳಿಸಿದ್ದಾರೆ. ‘ಕ್ಯಾನ್ಸರ್‌ ತಗುಲಿದ್ದ ಮೂತ್ರಕೋಶವನ್ನು ಸಂಪೂರ್ಣ ತೆಗೆದುಹಾಕಲಾಗಿದೆ, ರೋಗವನ್ನು ನಿವಾರಿಸಲಾಗಿದೆ. ಸರ್ಜರಿ ಬಳಿಕ ಅವರದೇ ಕರುಳನ್ನು ಬಳಸಿಕೊಂಡು ಕೃತಕ ಮೂತ್ರಕೋಶ ಸೃಷ್ಟಿಸಿ ಅಳವಡಿಸಲಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.

ಡಾ. ಮುರುಗೇಶ್ ನೇತೃತ್ವದ ಪರಿಣತ ವೈದ್ಯರ ತಂಡ ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಬಗ್ಗೆ ವಿವರ ನೀಡಿರುವ ಡಾ. ಮನೋಹರನ್, ‘ದೇವರ ದಯೆಯಿಂದ ಬಹಳ ಸಂಕೀರ್ಣವಾಗಿದ್ದ ಪ್ರಮುಖ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಶಸ್ತ್ರಚಿಕಿತ್ಸೆಯುದ್ದಕ್ಕೂ ಶಿವರಾಜ್‌ ಕುಮಾರ್‌ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು. ಆ ಬಳಿಕವೂ ಅವರ ಆರೋಗ್ಯ ಬಹಳ ಚೆನ್ನಾಗಿದೆ. ದೇವರ ಕೃಪೆ ಮತ್ತು ನಿಮ್ಮೆಲ್ಲರ ಪ್ರಾರ್ಥನೆಯಿಂದ ಕೆಲವೇ ದಿನಗಳಲ್ಲಿ ಅವರು ಸಾಮಾನ್ಯಜೀವನಕ್ಕೆ ಮರಳುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ಹೇಳಿದ್ದಾರೆ. ಸದ್ಯ ವಿಶೇಷ ವಾರ್ಡ್‌ನಲ್ಲಿ ಶಿವರಾಜ್‌ಕುಮಾರ್‌ ಅವರ ಆರೈಕೆ ನಡೆಯುತ್ತಿದೆ.

‘ಅಭಿಮಾನಿಗಳು ಹೇಗೆ ದೇವರಾಗಿದ್ದಾರೋ, ಅದೇ ರೀತಿ ಡಾಕ್ಟರ್ ಕೂಡ ದೇವರ ರೀತಿ ಬಂದಿದ್ದಾರೆ. ಸದ್ಯ ಶಿವರಾಜ್​ಕುಮಾರ್ ಐಸಿಯುನಲ್ಲಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯದಲ್ಲಿಯೇ ಶಿವರಾಜ್​ಕುಮಾರ್ ನಿಮ್ಮ ಬಳಿ ಮಾತನಾಡುತ್ತಾರೆ’ ಎಂದು ಶಿವಣ್ಣ ಪತ್ನಿ ಗೀತಾ ಶಿವರಾಜ್‌ಕುಮಾರ್‌ ತಿಳಿಸಿದ್ದಾರೆ.

ಇನ್ನೂ ಒಂದು ತಿಂಗಳವರೆಗೆ ಶಿವಣ್ಣ ಅವರಿಗೆ ಅಮೆರಿಕದಲ್ಲಿಯೇ ಚಿಕಿತ್ಸೆ ನಡೆಯಲಿದೆ. 2025ರ ಜನವರಿ 25ರಂದು ಅವರು ಭಾರತಕ್ಕೆ ಹಿಂದಿರುಗಲಿದ್ದಾರೆ ಎನ್ನಲಾಗಿದೆ. ಅಮೆರಿಕದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗೀತಾ ಶಿವರಾಜ್‌ಕುಮಾರ್‌ ಜೊತೆಗೆ ಇದ್ದಾರೆ.

Share this article