ನಿರುದ್ಯೋಗ ಪರಿಹಾರಕ್ಕೆ ಶಿಕ್ಷಣ ಬದಲು ಅಗತ್ಯ - ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ನಿರುದ್ಯೋಗಿಗಳಿರುವ ರಾಷ್ಟ್ರ : ತರೂರ್‌

Published : Feb 15, 2025, 10:31 AM IST
PM Cares Fund, PM Modi, Shashi Tharoor, Prime Minister Relief Fund, Corona Virus, Corona Crisis, Corona Data

ಸಾರಾಂಶ

ಭಾರತದ ಯುವಜನರನ್ನು ಸಬಲೀಕರಣಗೊಳಿಸಿ ನಿರುದ್ಯೋಗ ಸಮಸ್ಯೆ ನಿವಾರಿಸಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಿದೆ ಎಂದು ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದ ಶಶಿ ತರೂರ್‌ ಹೇಳಿದರು.

 ಬೆಂಗಳೂರು : ಭಾರತದ ಯುವಜನರನ್ನು ಸಬಲೀಕರಣಗೊಳಿಸಿ ನಿರುದ್ಯೋಗ ಸಮಸ್ಯೆ ನಿವಾರಿಸಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಿದೆ ಎಂದು ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದ ಶಶಿ ತರೂರ್‌ ಹೇಳಿದರು.

ಅರಮನೆ ಮೈದಾನದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಕೊನೆಯ ದಿನವಾದ ಶುಕ್ರವಾರ ‘ಪ್ರಕ್ಷುಬ್ಧತೆಯಲ್ಲಿ ಪ್ರವರ್ಧಮಾನ: ರಾಷ್ಟ್ರಗಳು ಹೇಗೆ ಸವಾಲು ಎದುರಿಸಬಹುದು’ ವಿಚಾರ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ನಿರುದ್ಯೋಗಿಗಳನ್ನು ಹೊಂದಿರುವ ರಾಷ್ಟ್ರವಾಗಿದ್ದು, ಯುವಜನರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ. ಯುವಜನರನ್ನು ಕೌಶಲ್ಯಪೂರ್ಣರನ್ನಾಗಿಸಿ, ಉದ್ಯೋಗ ದೊರಕಿಸಬೇಕಿದೆ ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆಯಿಂದ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಭಾರಿ ಬದಲಾವಣೆಯಾಗಲಿದ್ದು, ನಮ್ಮ ವಿದ್ಯಾರ್ಥಿಗಳು ಮತ್ತು ಯುವಜನರನ್ನು ಭವಿಷ್ಯದ ಬೇಡಿಕೆಗಳಿಗೆ ಅನುಗುಣವಾಗಿ ಸಜ್ಜುಗೊಳಿಸುವ ಅಗತ್ಯವಿದೆ. ಪ್ರಸ್ತುತ ಜಾಗತಿಕ ಉದ್ಯೋಗ ವಲಯದಲ್ಲಿರುವ ಶೇ.30ರಷ್ಟು ಉದ್ಯೋಗಗಳು ಮುಂದಿನ ಐದು ವರ್ಷಗಳಲ್ಲಿ ಕಣ್ಮರೆಯಾಗಲಿವೆ. ಆದರೆ, ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಅದಕ್ಕೆ ಪೂರಕವಾಗಿ ನಮ್ಮ ದೇಶದ ಮಕ್ಕಳನ್ನು ಸಜ್ಜುಗೊಳಿಸಬೇಕಿದೆ ಎಂದರು.

ನಮ್ಮ ಸಮಾಜದ ತಳವರ್ಗದ ಜನರಲ್ಲಿ ಖರೀದಿ ಸಾಮರ್ಥ್ಯ ಅತಿ ಕಡಿಮೆ ಇದೆ. ಕೇಂದ್ರ ಸರ್ಕಾರ ಇಂದಿಗೂ ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರಧಾನ್ಯ ಒದಗಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಭಾರತ ಸದೃಢವಾಗಬೇಕಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮವಾಗಬೇಕು, ದಕ್ಷ ಸರ್ಕಾರಗಳು ಅಧಿಕಾರಕ್ಕೆ ಬರಬೇಕು. ಇದಕ್ಕೆ ಸಂಪೂರ್ಣ ಮತದಾರರು ಸುಶಿಕ್ಷಿತರಾಗುವುದು ಅತಿ ಮುಖ್ಯ. ಜನರಿಗೆ ಉತ್ತಮ ಶಿಕ್ಷಣ ನೀಡಿ, ಸಬಲೀಕರಣಗೊಳಿಸುವ ಕೆಲಸಗಳಾಗಬೇಕು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಗ್ರೀಸ್ ಮಾಜಿ ಪ್ರಧಾನಿ ಜಾರ್ಜ್ ಎ. ಪಪಾಂಡ್ರೂ ಉಪಸ್ಥಿತರಿದ್ದರು. ಇಂಕ್ ಟಾಕ್ಸ್ ಸಂಸ್ಥೆ ಸಿಇಒ ಲಕ್ಷ್ಮಿ ಪ್ರಟೂರಿ ಗೋಷ್ಠಿ ನಡೆಸಿಕೊಟ್ಟರು.

ವಿಶ್ವಸಂಸ್ಥೆಯಲ್ಲೂ ಇದೆ ಅಸಮಾನತೆ, ತಾರತಮ್ಯ!

ವಿಶ್ವಸಂಸ್ಥೆ ಜಗತ್ತಿನ ಕನ್ನಡಿಯಾಗಿದೆ. ಆದರೆ ಅಲ್ಲೂ ಅಸಮಾನತೆ, ತಾರತಮ್ಯಗಳಿವೆ. ಇದರಿಂದ ಪರ್ಯಾಯ ಜಾಗತಿಕ ವ್ಯವಸ್ಥೆಯ ಚಿಂತನೆಯ ಅಗತ್ಯವಿದೆ ಎಂದು ಇದೇ ವೇಳೆ ಶಶಿ ತರೂರ್‌ ಪ್ರತಿಪಾದಿಸಿದರು. ಬಹುಧ್ರುವೀಕರಣದ ಜಗತ್ತಿನಲ್ಲಿ ವಿಶ್ವಸಂಸ್ಥೆ ಕೂಡಾ ಮೂಲ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲಿಯೂ ಇರುವ ಅಸಮಾನತೆ, ತಾರತಮ್ಯಗಳನ್ನು ರಾಷ್ಟ್ರಗಳು ಅರ್ಥ ಮಾಡಿಕೊಂಡರಷ್ಟೇ ಪರ್ಯಾಯ ಜಾಗತಿಕ ವ್ಯವಸ್ಥೆಯ ಬಗ್ಗೆ ಚಿಂತಿಸಬಹುದು ಎಂದರು.

ರಾಜಕಾರಣಿಗಳು ಅಧಿಕಾರಕ್ಕೆ ಸೀಮಿತರಾದರೆ ದೇಶಕ್ಕೆ ಕಷ್ಟ

ಗ್ರೀಸ್ ಮಾಜಿ ಪ್ರಧಾನಿ ಜಾರ್ಜ್ ಎ.ಪಪಾಂಡ್ರೂ ಮಾತನಾಡಿ, ರಾಜಕಾರಣಿಗಳು ಸಾರ್ವಜನಿಕ ಹಿತಾಸಕ್ತಿ ಕಡೆ ಗಮನಕೊಡದೆ ಕೇವಲ ಅಧಿಕಾರ ಹಿಡಿಯುವುದರಲ್ಲಿ ಮಗ್ನರಾದರೆ ಅಂತಹ ದೇಶ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಲಿದೆ. ಗ್ರೀಸ್‌ನಲ್ಲಿ ಆಗಿದ್ದು ಕೂಡ ಇದೇ ಎಂದರು.

ಉತ್ತಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಅತಿ ಮುಖ್ಯ. ಇವುಗಳ ಕೊರತೆಯಿಂದಾಗಿಯೇ ಗ್ರೀಸ್ ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು. ಗ್ರೀಸ್ ನಲ್ಲಿ ಜನರ ಹಣ ಸಾರ್ವಜನಿಕರ ಹಿತಾಸಕ್ತಿಗೆ ವಿನಿಯೋಗವಾಗಲಿಲ್ಲ. ರಾಜಕಾರಣಿಗಳ ಗಮನ ಕೇವಲ ಅಧಿಕಾರ ಹಿಡಿಯುವುದರಲ್ಲೇ ಇತ್ತು. ಹೀಗಾದಾಗ ಸಂಕಷ್ಟ ತಲೆದೋರುವುದು ಸಹಜ ಎಂದು ಹೇಳಿದರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ