ಸಿಇಟಿ ಅರ್ಜಿ ಭರ್ತಿ ಸರಳತೆಗೆ ಒತ್ತು - ಪರೀಕ್ಷಾ ಭದ್ರತೆ ಹೆಚ್ಚಳಕ್ಕೆ ಶೀಘ್ರ ಹೊಸ ವ್ಯವಸ್ಥೆ: ಸಚಿವ ಸುಧಾಕರ್‌

Published : Jan 14, 2025, 08:10 AM IST
Dr MC Sudhakar

ಸಾರಾಂಶ

  ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಭರ್ತಿ ಪ್ರಕ್ರಿಯೆ ಮತ್ತಷ್ಟು ಸರಳಗೊಳಿಸಲು ಹಾಗೂ ಹೆಚ್ಚಿನ ಭದ್ರತಾ ಕ್ರಮಗಳನ್ನು ಅಳವಡಿಸಲು ಶೀಘ್ರ ಹೊಸ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

ಬೆಂಗಳೂರು : ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಭರ್ತಿ ಪ್ರಕ್ರಿಯೆ ಮತ್ತಷ್ಟು ಸರಳಗೊಳಿಸಲು ಹಾಗೂ ಹೆಚ್ಚಿನ ಭದ್ರತಾ ಕ್ರಮಗಳನ್ನು ಅಳವಡಿಸಲು ಶೀಘ್ರ ಹೊಸ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

ನಗರದ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ 30 ಕೋಟಿ ರು. ವೆಚ್ಚದ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಶಂಕುಸ್ಥಾಪನೆ ಮಾಡಿದರು. ಇದೇ ಸಂದರ್ಭದಲ್ಲಿ ಕೆಸೆಟ್‌-24ರಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಬಳಿಕ 2025ನೇ ಸಾಲಿನ ಸಿಇಟಿ ಪೈಪಿಡಿ ‘ಸಿಇಟಿ ದಿಕ್ಸೂಚಿ’ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು, ಸಿಇಟಿ ಅರ್ಜಿ ಭರ್ತಿ ಹಾಗೂ ಭದ್ರತೆ ವಿಚಾರದಲ್ಲಿ ಹೊಸ ವ್ಯವಸ್ಥೆ ಜಾರಿಗೊಳಿಸುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ಕೂಡ ಸೈಬರ್‌ ಕೇಂದ್ರಗಳ ಬದಲು ತಮ್ಮ ಮೊಬೈಲ್‌ ಮೂಲಕವೇ ಸಿಇಟಿ ಅರ್ಜಿ ಭರ್ತಿ ಮಾಡಬಹುದು. ಪರೀಕ್ಷಾ ಅಕ್ರಮಗಳಿಗೂ ಸಂಪೂರ್ಣ ಕಡಿವಾಣ ಬೀಳಲಿದೆ ಎಂದರು.

ಕಂಪ್ಯೂಟರ್‌ ಆಧಾರಿತ ಪರೀಕ್ಷೆ:

ನೇಮಕಾತಿ ಪರೀಕ್ಷೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಕಂಪ್ಯೂಟರ್‌ ಆಧಾರಿತ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಈ ಸಂಬಂಧ ಈಗಾಗಲೇ ಕೆಪಿಎಸ್‌ಸಿ, ರಾಜೀವ್‌ ಗಾಂಧಿ ಆರೋಗ್ಯ ವಿವಿ ಸೇರಿದಂತೆ ಇತರ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗಿದೆ. ಸದ್ಯಕ್ಕೆ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳಿರುವ ಪರೀಕ್ಷೆಗಳನ್ನು ಈ ರೀತಿ ಮಾಡಿ, ನಂತರದ ದಿನಗಳಲ್ಲಿ ಎಲ್ಲ ಪರೀಕ್ಷೆಗಳಿಗೂ ವಿಸ್ತರಿಸುವ ಉದ್ದೇಶ ಇದೆ ಎಂದು ಹೇಳಿದರು.

ಪ್ರತ್ಯೇಕ ಸರ್ವರ್‌ ಬಗ್ಗೆ ಚಿಂತನೆ:

ಹಾಗೆಯೇ ಕೆಇಎನಲ್ಲಿ ಪ್ರವೇಶ ಮತ್ತು ನೇಮಕಾತಿ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಸರ್ವರ್‌ ಮೇಲೆ ಒತ್ತಡ ಹೆಚ್ಚಿದೆ. ಹೀಗಾಗಿ ಪ್ರತ್ಯೇಕವಾದ ಸರ್ವರ್‌ ಹೊಂದುವ ಬಗ್ಗೆಯೂ ಚಿಂತನೆ ನಡೆದಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳ ಪ್ರತ್ಯೇಕ ವಿಭಾಗಗಳನ್ನು ತೆರೆಯುವ ಉದ್ದೆಶವೂ ಇದೆ ಎಂದು ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೀಘ್ರದಲ್ಲೇ 2025ನೇ ಸಾಲಿನ ಸಿಇಟಿ ಪರೀಕ್ಷಾ ದಿನಾಂಕ ಪ್ರಕಟಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ, ಆಡಳಿತಾಧಿಕಾರಿ ಇಸ್ಲಾವುದ್ದೀನ್‌ ಜೆ.ಗದ್ಯಾಳ, ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಶ್ರೀನಿವಾಸ ಗೌಡ, ವಿಶ್ರಾಂತ ಕುಲಪತಿ ಪ್ರೊ ತಿಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

ನೇಮಕಾತಿ ಪರೀಕ್ಷೆಗಳಿಗೆ ಒಮ್ಮೆ ಮಾತ್ರ ಅರ್ಜಿ ಸಲ್ಲಿಸಿ

ನೇಮಕಾತಿ ಪರೀಕ್ಷೆಗಳಿಗೆ ಒಮ್ಮೆ ಮಾತ್ರ ನೋಂದಣಿ ಮಾಡುವ ವ್ಯವಸ್ಥೆಯ ಪೋರ್ಟಲ್‌ಗೆ ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್ ಅವರು ಚಾಲನೆ ನೀಡಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತೀ ವರ್ಷ ಸರ್ಕಾರದ ವಿವಿಧ ಇಲಾಖಾ ನೇಮಕಾತಿಗಳಿಗೆ ಪರೀಕ್ಷೆ ನಡೆಸುತ್ತಿರುತ್ತದೆ. ಈ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಇನ್ನುಮುಂದೆ ಪ್ರತೀ ಬಾರಿಯೂ ಅರ್ಜಿ ಭರ್ತಿ ಮಾಡುವ ಅಗತ್ಯವಿಲ್ಲ. ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ನಿರ್ದಿಷ್ಟ ಸಂಖ್ಯೆಯನ್ನು ನಮೂದಿಸುವುದರ ಮೂಲಕ ಪರೀಕ್ಷಾ ಶುಲ್ಕ ಕಟ್ಟಿ ಸಂಬಂಧಿಸಿದ ಪರೀಕ್ಷೆಗೆ ಅರ್ಹತೆ ಪಡೆಯಬಹುದು. ಇದು ಕೆಇಎ ಮಾಡಿರುವ ವಿನೂತನ ಕ್ರಮ ಎಂದು ಸಚಿವರು ವಿವರಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಾಜ್ಯಕ್ಕೆ ಹೆಚ್ಚು ಗ್ಯಾಸ್‌ ಕೊಡಿ : ಕೇಂದ್ರಕ್ಕೆ ಸಿಎಂ
ಕೆಎಂಎಫ್‌ ಸ್ವೀಟ್‌ ತಯಾರಿಗೂ ಸಿಗ್ತಿಲ್ಲ ಗ್ಯಾಸ್‌!