;Resize=(412,232))
ಬೆಂಗಳೂರು: ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದು, ರಾಜ್ಯಾದ್ಯಂತ ರೈಲು ನಿಲ್ದಾಣಗಳ ಹೋಟೆಲ್, ಕ್ಯಾಂಟೀನ್ ಹಾಗೂ ಇತರೆ ಆಹಾರ ಉದ್ದಿಮೆಗಳ ಮೇಲೆ ಗುರುವಾರ ದಾಳಿ ನಡೆಸಿದ್ದಾರೆ. ಈ ವೇಳೆ ನಿಷೇಧಿತ ಬಣ್ಣ ಹಾಗೂ ಪ್ಲಾಸ್ಟಿಕ್ ಬಳಕೆ ಪತ್ತೆಯಾಗಿದೆ.
ಬೆಂಗಳೂರು, ಯಶವಂತಪುರ, ಕೆ.ಆರ್.ಪುರ, ಯಲಹಂಕ, ಕೋಲಾರ, ಮೈಸೂರು, ಕಾರವಾರ, ಹುಬ್ಬಳ್ಳಿ, ಹಾವೇರಿ, ಬಳ್ಳಾರಿ, ಉಡುಪಿ, ಕೊಪ್ಪಳ, ಮಂಗಳೂರು, ದಾವಣಗೆರೆ ಸೇರಿ ರಾಜ್ಯಾದ್ಯಂತ ಪ್ರಮುಖ 36 ರೈಲು ನಿಲ್ದಾಣಗಳ ಆವರಣದಲ್ಲಿರುವ ಹೋಟೆಲ್, ಕ್ಯಾಂಟೀನ್, ಆಹಾರ ಮಳಿಗೆಗಳು, ಪ್ಯಾಂಟ್ರಿ ಕಾರ್‌ಗಳು, ಆಹಾರ ತಯಾರಿಕಾ ಘಟಕಗಳು ಸೇರಿ 112 ಆಹಾರ ಉದ್ದಿಮೆಗಳ ಮೇಲೆ ದಾಳಿ ನಡೆಸಿದ್ದಾರೆ.
ಆಹಾರದಲ್ಲಿ ಕೃತಕ ಬಣ್ಣ ಹಾಗೂ ಅಡುಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಶೀಟ್ ಬಳಕೆಯನ್ನು ನಿಷೇಧಿಸಿ ಸರ್ಕಾರ ಆದೇಶಿಸಿದ್ದರೂ, ಎಲ್ಲೆಡೆ ವ್ಯಾಪಕವಾಗಿ ನಿಷೇಧಿತ ವಸ್ತುಗಳು ಬಳಕೆಯಾಗುತ್ತಿರುವುದು ದಾಳಿ ವೇಳೆ ಬಯಲಿಗೆ ಬಂದಿದೆ.
ದಾಳಿ ವೇಳೆ ಜಿಲೇಬಿಯಲ್ಲಿ ಹಳದಿ ಬಣ್ಣ ಹಾಗೂ ಖೋವಾ ಪೇಡಾದಲ್ಲಿ ಗುಲಾಬಿ ಬಣ್ಣ ಬಳಸಿರುವುದು ಕಂಡು ಬಂದಿದೆ. ಮೈಸೂರಿನ ರೈಲು ನಿಲ್ದಾಣದಲ್ಲಿನ ಆಹಾರ ಘಟಕಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಶೀಟ್ ಬಳಸಿ ಇಡ್ಲಿ ಬೇಯಿಸುತ್ತಿರುವುದು, ಲೇಬಲಿಂಗ್ ವಿವರಗಳಿಲ್ಲದ ಚಪಾತಿ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಹಾವೇರಿ ರೈಲು ನಿಲ್ದಾಣದ ಮಳಿಗೆಗಳಲ್ಲಿ ಅವಧಿ ಮೀರಿದ ನಂದಿನಿ ಮೊಸರು ಹಾಗೂ ಡೋಡ್ಲಾ ಸ್ಟ್ಯಾಂಡರ್ಡೈಸ್ಡ್ ಹಾಲಿನ ಪ್ಯಾಕೆಟ್‌ಗಳು ದೊರೆತಿವೆ. ಕೆ.ಆರ್.ಪುರ ರೈಲು ನಿಲ್ದಾಣದ ಹೋಟೆಲ್‌ನ ಆಹಾರ ತಯಾರಿಕೆ ಸ್ಥಳದಲ್ಲಿ ಶುಚಿತ್ವ ಇಲ್ಲದಿರುವುದು ಕಂಡು ಬಂದಿದೆ.
ಇನ್ನು ನಿಲ್ದಾಣಗಳಲ್ಲಿನ ಹೋಟೆಲ್, ಕ್ಯಾಂಟೀನ್‌ಗಳಲ್ಲಿ ಸಮೋಸಾಗಳನ್ನು ಕಾರ್ಡ್‌ಬೋರ್ಡ್ ಬಾಕ್ಸ್‌ಗಳಲ್ಲಿ ಸಂಗ್ರಹಿಸಿಟ್ಟಿರುವುದು.
ತಯಾರಿಸಿದ ವಡೆಗಳನ್ನು ವಾರ್ತಾಪತ್ರಿಕೆಗಳಲ್ಲಿ ಸುತ್ತಿಕೊಡುವುದು, ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಚಟ್ನಿ ಹಾಗೂ ಆಹಾರ ಪದಾರ್ಥಗಳ ಸಂಗ್ರಹಣೆ, ಲೇಬಲಿಂಗ್ ವಿವರಗಳಿಲ್ಲದ ಖಾರದ ಪದಾರ್ಥಗಳ ಪ್ಯಾಕೆಟ್‌ಗಳನ್ನು ಪತ್ತೆಮಾಡಲಾಗಿದೆ.
ಇದಲ್ಲದೆ ಈರುಳ್ಳಿ ಹಾಗೂ ಇತರೆ ತರಕಾರಿಗಳಲ್ಲಿ ಶಿಲೀಂಧ್ರ ಬೆಳವಣಿಗೆ, ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಮಾಡುತ್ತಿರುವುದು ಹಾಗೂ ಆಹಾರ ಉದ್ದಿಮೆಯ ನೋಂದಣಿ ಪ್ರಮಾಣಪತ್ರವನ್ನು ಪ್ರಮುಖ ಸ್ಥಗಳಲ್ಲಿ ಪ್ರದರ್ಶಿಸದಿರುವುದು ಬೆಳಕಿಗೆ ಬಂದಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಅಲೆಯೂರು, ಕೆಮ್ತೂರು ಹಾಗೂ ದುಗ್ಲಿಪದವು ಸೇರಿ ಕೆಲ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಉಡುಪಿ ಜಿಲ್ಲೆಯ ಅಂಕಿತಾಧಿಕಾರಿ ರಶ್ಮಿ ನೇತೃತ್ವದಲ್ಲಿ ಬಾಳೆಹಣ್ಣಿನ ಮಳಿಗೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಬಾಳೆಕಾಯಿ ಗೊನೆಗೆ ಇಂಡೊಥ್ರೆಲ್ ಕಂಪನಿಯ ಎಥಿಫಾನ್ ಸೇರಿ ಇತರೆ ರಾಸಾಯನಿಕ ಬಳಸಿ ಹಣ್ಣು ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, 8.71 ಲಕ್ಷ ರು. ಅಂದಾಜಿನ ಒಟ್ಟು 10,890 ಕೆ.ಜಿ. ತೂಕದ ಬಾಳೆಕಾಯಿ ಜಪ್ತಿ ಮಾಡಿ ಗೋಡೌನ್‌ನಲ್ಲಿ ಇರಿಸಿ ಸೀಜ್ ಮಡಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
* ನಿಷೇಧಿತ ಪದಾರ್ಥ ಬಳಕೆ ಪತ್ತೆ
ರಾಜ್ಯದ ಹೋಟೆಲಲ್ಲಿ ನಿಷೇಧಿತ ಕೆಮಿಕಲ್ ಬಳಕೆ
-ಜಿಲೇಬಿಗೆ ಹಳದಿ ಬಣ್ಣ, ಪೇಡೆಗೆ ಗುಲಾಬಿ ಬಣ್ಣ ಬಳಕೆ
-ನಿಷೇಧಿತ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿ
-ಕೆಮಿಕಲ್ ಸಿಂಪಡಿಸಿದ್ದ 10000 ಕೆಜಿ ಬಾಳೆಕಾಯಿ ಜಪ್ತಿ