;Resize=(412,232))
ಬೆಂಗಳೂರು : ರಾಜ್ಯದಲ್ಲಿನ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು 32,000 ರು.ಗಳಿಂದ 1,20,000 ರು. ವಾರ್ಷಿಕ ಆದಾಯ ಮಿತಿ ಹೊಂದಿದ್ದರೂ ಪಿಂಚಣಿ ಮುಂದುವರೆಸಲು ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಆ ಮೂಲಕ 32,000 ರು.ಗಳಿಗಿಂತ ಹೆಚ್ಚು ವಾರ್ಷಿಕ ಆದಾಯದ ಪ್ರಮಾಣಪತ್ರ ಹೊಂದಿರುವುದರಿಂದ ಪಿಂಚಣಿ ರದ್ದಾಗಿದ್ದ ಲಕ್ಷಾಂತರ ಫಲಾನುಭವಿಗಳು ನಿರಾಳರಾದಂತಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು, ವಿವಿಧ ಸಾಮಾಜಿಕ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಇತ್ಯಾದಿಗಳಿಗೆ 32 ಸಾವಿರ ರು. ಆದಾಯ ಮಿತಿ ಇತ್ತು.
ಇದೀಗ ಅರ್ಹ ಫಲಾನುಭವಿಗಳ ಪರಿಶೀಲನೆ ವೇಳೆ 32,000 ಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಲಕ್ಷಾಂತರ ಮಂದಿ ಪಿಂಚಣಿ ಸೌಲಭ್ಯದಿಂದ ಹೊರಗುಳಿದಿದ್ದರು. ಹೀಗಾಗಿ ಆದಾಯದ ಮಿತಿಯನ್ನು 1,20,000 ಗಳಿಗೆ ಏರಿಕೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಿದ್ದೇವೆ ಎಂದು ತಿಳಿಸಿದರು.
ಕುಟುಂಬ ದತ್ತಾಂಶದಿಂದ ಪಡೆದ ಮಾಹಿತಿಗಳನ್ನು ರಾಜ್ಯದಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯೊಂದಿಗೆ ಸಂಯೋಜಿಸಲಾಗಿತ್ತು. ಈ ವೇಳೆ 23,14,544 ಫಲಾನುಭವಿಗಳು ಸಂದೇಹಾಸ್ಪದ ಎಂದು ಕಂಡುಬಂದಿದ್ದು, ಈ ಫಲಾನುಭವಿಗಳ ಭೌತಿಕ ಪರಿಶೀಲನೆಗಾಗಿ ಸಂಯೋಜನೆ ಮೊಬೈಲ್ ಆ್ಯಪ್ ಸಿದ್ಧಪಡಿಸಿ ಪರಿಶೀಲನೆ ನಡೆಸಲಾಗಿತ್ತು.
ಈ ಸಮಯದಲ್ಲಿ ದಾಖಲಾತಿಗಳನ್ನು ಹಾಜರುಪಡಿಸದ, ನೀಡಿದ ವಿಳಾಸದಲ್ಲಿ ವಾಸವಿಲ್ಲದಿದ್ದ ಮತ್ತು ಆದಾಯ ದೃಢೀಕರಣ ಪತ್ರ ಹಾಜರುಪಡಿಸದಿದ್ದ 18,06,032 ಮಂದಿಯ ಪಿಂಚಣಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಭೌತಿಕ ಪರಿಶೀಲನೆ ಸಮಯದಲ್ಲಿ 18.06 ಲಕ್ಷ ಮಂದಿಯ ಆದಾಯ 32,000 ರು.ಗಿಂತ ಹೆಚ್ಚಿರುವುದು ಕಂಡುಬಂದಿರುತ್ತದೆ. ಈ ಪೈಕಿ 32,000 ರು.ಗಿಂತ ಹೆಚ್ಚು ಹಾಗೂ 1,20,000 ರು.ಗಳಿಗಿಂತ ಕಡಿಮೆ ವಾರ್ಷಿಕ ಆದಾಯ ಇರುವಂತಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರೆಸುವಂತೆ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಪರಿಷ್ಕೃತ ಆದೇಶ ಹೊರಡಿಸಿದೆ.